ಬೆಂಬಲಿಗರು

ಶುಕ್ರವಾರ, ಮಾರ್ಚ್ 18, 2016

ರಾಜಕಾರಿಣಿಗಳಲ್ಲೊಬ್ಬ ಅಪರಂಜಿ ಮಧು ದಂಡವತೆ



ಹಿಂದೆ ರೈಲ್ವೆ ಎರಡನೇ ತರಗತಿಯ ಬೋಗಿಗಳಲ್ಲಿ  ಕೂರಲು ಮತ್ತು ಮಲಗಲು 

ಮರದ ಸ್ಲೀಪರ್ ಗಳು ಇದ್ದವು .ಸಮಾಜವಾದಿ ಹಿನ್ನಲೆಯಿಂದ ಬಂದ ರೈಲ್ವೆ ಮಂತ್ರಿ 

ಮಧು ದಂಡಾವತೆ ಎಲ್ಲಾ ಸ್ಲೀಪರ್ ಗಳಿಗೂ ಮೆತ್ತೆ (ಕುಶನ್)ಇರುವ ಮಾರ್ಪಾಡು 

ಮಾಡಿದರು .ತಮ್ಮ ಈ ಕ್ರಮಕ್ಕೆ ಅಧಿಕಾರಿಗಳು ಎರಡನೇ ದರ್ಜೆ ಪ್ರಯಾಣಿಕರು 

ಮೆತ್ತೆಯನ್ನು ಹರಿಯುವ ಭಯ ವ್ಯಕ್ತ ಪಡಿಸಿ ವಿರೋಧಿಸಿದರೆಂದೂ ತಾನು ಅವರನ್ನು 

ಒಪ್ಪಿಸಿದೆಂದೂ ಅವರು ಬರೆದಿದ್ದಾರೆ .

ಅದೇ ತರಹ ಕೆಲವು ಮಾರ್ಗಗಳಲ್ಲಿ  ಪ್ರಯಾಣಿಕರ ದಟ್ಟನೆ ಜಾಸ್ತಿ ಇರುವುದನ್ನು 

ಕಂಡ ದಂಡಾವತೆ  ತಾವು ಜರ್ಮನಿಯಲ್ಲಿ ಕಂಡ ಎರಡು ಇಂಜಿನ್ ಅಳವಡಿಸಿ 

ಹೆಚ್ಚು ಬೋಗಿಗಳನ್ನು ಸೇರಿಸುವ  ಪ್ರಸ್ತಾವ ಮುಂದೆ ಇಟ್ಟಾಗ  ತಾಂತ್ರಿಕ 

ಸಮಸ್ಯೆಗಳನ್ನು  ಅಧಿಕಾರಿಗಳು ಎತ್ತಿ ತೋರಿಸಿದರು .ಆದರೆ ಫಿಸಿಕ್ಸ್  ಪ್ರೊಫೆಸರ್ 

ಆಗಿದ್ದ ದಂಡಾವತೆ  ಅದಕ್ಕೆಲ್ಲಾ ವೈಜ್ಞಾನಿಕ ಭಾಷೆಯಲ್ಲಿಯೇ ಉತ್ತರ ಕೊಟ್ಟು

ಅವರ ಭಯ ನಿವಾರಿಸಿದರು .

ತಮ್ಮ ಪುಸ್ತಕ  ಡಯಲಾಗ್ ವಿಥ್ ಲೈಫ್ ನಲ್ಲಿ ಅವರು ಕೆಲ ಅನುಭವಗಳನ್ನು  ಹಂಚಿ 

ಕೊಂಡಿದ್ದಾರೆ .ಜೀವನದಲ್ಲಿ ತಮ್ಮ ಅತ್ಯಂತ ಬಲಶಾಲಿಯಾದ  ಎದುರಾಳಿಯೂ 

ಶತ್ರುವಲ್ಲ ಎಂಬ ತತ್ವ ತಮ್ಮದು ಎಂದು ಕೊಂಡಿದ್ದಾರೆ .

ಇವರು  ಮೊರಾರ್ಜಿ ಸಂಪುಟದಲ್ಲಿ  ರೈಲ್ವೆ ಮಂತ್ರಿ ಆಗಿದ್ದಾಗ  ಇಂದಿರಾಗಾಂಧಿ 

ವಿರೋಧ ಪಕ್ಷದಲ್ಲಿ ಇದ್ದರು .ಒಮ್ಮೆ ಪಾರ್ಲಿಮೆಂಟ್ ಬಳಿ ಎದುರಾದಾಗ  ಇಂದಿರಾ 

'ದಂಡವತೆ ಜಿ ನೀವು ಒಳ್ಳೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ .ನನ್ನ 

ಮಂತ್ರಿ ಮಂಡಲದಲ್ಲಿ ನಿಮ್ಮನ್ನು ಹೊಂದುವ ಭಾಗ್ಯ ನನಗಿಲ್ಲದಾಯಿತು ' ಎಂದರು 

ಅದಕ್ಕೆ ದಂಡವತೆ ನಿಮ್ಮ ಸಂಪುಟ ಸೇರಲು ಅವಕಾಶ ಸಿಗದಿದ್ದುದೇ ನನ್ನ ಭಾಗ್ಯ 

ಎಂದರು .ಇಂದಿರಾ ಅವರು ಈ ಉತ್ತರ ಕೇಳಿ ನಕ್ಕರು.

ಇನ್ನೊಮ್ಮೆ ಮೊರಾರ್ಜಿಯವರು ದಂಡವತೆವತೆಯವರಿಗೆ ನೀವೂ ಮೂತ್ರ ಚಿಕಿತ್ಸೆ 

ಮಾಡಿರಿ ,ಬಹುಕಾಲ ಬದುಕುವಿರಿ ಎಂದು ಸಲಹೆ ಇತ್ತರು .ಅದಕ್ಕೆ  ದಂಡವತೆ 

ಮೊರರ್ಜಿಭಾಯ್  ನನಗೆ ಬಹುಕಾಲ ಬದುಕುವ ಆಸೆಯಿದೆ ಆದರೆ ಒಳ್ಳೆಯ 

ರುಚಿಯೊಂದಿಗೆ ಎಂದರಂತೆ.

ಇನ್ನೊಮ್ಮೆ  ವಿರೋಧ ಪಕ್ಷದ ವತಿಯಿಂದ ಇವರು ಮಾತನಾಡುವಾಗ ಸ್ಪೀಕರ್ 

ಜಾಕಡ್ ಅವರು 'ಪ್ರೊಫೆಸರ್ ಅವರೇ ನೀವು ಶಕ್ತಿಯುತ ಭಾಷಣ 

ಮಾಡುತ್ತಿದ್ದೀರಿ.ಆದರೆ ತಮ್ಮ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಗದ್ದಲ 

ಮಾಡುತ್ತಿರುವರು.ನೀವು ಎಂದೂ ಹಾಗೆ ಮಾಡುವುದಿಲ್ಲ .' ಎಂದರಂತೆ .ಅದಕ್ಕೆ 

ದಂಡವತೆ ತನಗೆ ಈಜಲು ಬರುವುದಿಲ್ಲವಲ್ಲಾ ಎಂದಾಗ ಸದನ ತುಂಬಾ ನಗು .

   ಜಯಪ್ರಕಾಶ ನಾರಾಯಣ ಅವರು  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾಗ 

ತಮ್ಮ  ಮೂತ್ರಪಿಂಡ ದಾನ ಮಾಡುವುದಾಗಿ ದಂಡವತೆ  ಮುಂದೆ ಬಂದಿದ್ದರು .

ಅಲ್ಲದೆ ಅವರ ಮರಣಾನಂತರ   ಅವರ ಇಚ್ಚೆಯಂತೆ  ಶರೀರವನ್ನು ವೈದ್ಯಕೀಯ 

ಕಾಲೇಜ್ ಗೆ ದಾನ ಮಾಡಲಾಯಿತು .

  ಇವರು  ವಿ ಪಿ ಸಿಂಗ್ ಮಂತ್ರಿ ಮಂಡಲದಲ್ಲಿ ಅರ್ಥ ಸಚಿವ ರಾಗಿದ್ದಾಗ  ಚಿನ್ನ 

ಕಂಟ್ರೋಲ್ ಕಾನೂನು ರದ್ದು ಪಡಿಸಿದರು .ಕೊಂಕಣ್ ರೈಲ್ವೆ  ಆರಂಬಿಸಲು 

ಜೋರ್ಜ್ ಫೆರ್ನಾಂಡಿಸ್  ಎಷ್ಟು ಕಾರಣವೋ  ಅಷ್ಟೇ ದಂಡಾವತೆ ಸಹಾ.
                               

    


ಗುರುವಾರ, ಫೆಬ್ರವರಿ 18, 2016

ನಿರ್ನಾಳ ಗ್ರಂಥಿಯಾಗಿ ಮೂತ್ರಪಿಂಡಗಳು

ಮೂತ್ರಪಿಂಡಗಳ ಕೆಲಸ ಏನು ?ಎಂದು ಕೇಳಿದರೆ ದೇಹಕ್ಕೆ ಅವಶ್ಯವಿಲ್ಲದ 

ವಸ್ತುಗಳ ವಿಸರ್ಜನೆ ಎಂದು ಎಲ್ಲರೂ ಹೇಳುವರು .ಆದರೆ  ಇನ್ನೂ ಮುಖ್ಯವಾದ 

ಪಾತ್ರಗಳನ್ನೂ ಅವು ನಿರ್ವಹಿಸುವವು .

              
ಮೂತ್ರಪಿಂಡಗಳು  ನಿರ್ನಾಳ ಗ್ರಂಥಿಗಳಾಗಿ  ಚೋದಕ(ಹಾರ್ಮೋನ್) ಗಳನ್ನೂ 

ಸ್ರವಿಸುತ್ತವೆ .ಅವು ನೇರ ವಾಗಿ ರಕ್ತಕ್ಕೆ ಸೇರಿ  ತಮ್ಮ ಗುರಿಯತ್ತ ಸಾಗುತ್ತವೆ .

೧ ರೆನಿನ್ .                                                                                         ಇದು ಕಿಡ್ನಿಗಳಿಂದ ಉತ್ಪತ್ತಿಯಾಗುವ ಹಾರ್ಮೋನ್ .ಇದು ಅಂಜಿಯೋತೆನ್ಸಿನ್ 

ಎಂಬ ವಸ್ತುವನ್ನು ಕ್ರಿಯಾಶೀಲವಾಗಿ  ಮಾಡಿ  ರಕ್ತದ ಒತ್ತಡವನ್ನು  ಕಾಯುತ್ತದೆ .

ಅಲ್ಲದೆ  ಅಡ್ರಿನಲ್ ಗ್ರಂಥಿಗಳನ್ನು ಪ್ರಚೋದಿಸಿ ರಕ್ತದ  ಉಪ್ಪಿನ ಅಂಶವನ್ನು 

ಕಾಯುವ  ಹೊರ್ಮೊನ್ ಸ್ರಾವವನ್ನು ನಿಯಂತ್ರಿಸುತ್ತದೆ .

೨ಕ್ಯಾಲ್ಸಿಟ್ರಯೊಲ್

ಇದು ವಿಟಮಿನ್ ಡಿ ಯ ಕ್ರಿಯಾಶೀಲ ರೂಪ .ವಿಟಮಿನ್ ಡಿ ಯು ಲಿವರ್ ಮತ್ತು 

ಮೂತ್ರಪಿಂಡಗಳಲ್ಲಿ ತಲಾ ಒಂದು OH ಗುಂಪನ್ನು ಸೇರಿಸಿಕೊಂಡ ಮೇಲೆಯೇ 

ತನ್ನ ಉದ್ದೇಶಿತ ಕಾರ್ಯ ನಿರ್ವಹಿಸಲು ಸಮರ್ಥವಾಗುವುದು .ಅಂದರೆ 

ಕರುಳಿನಿಂದ ಕ್ಯಾಲ್ಸಿಯಂ ರಕ್ತಕ್ಕೆ ಸೇರ್ಪಡೆ ,ಮೂ ತ್ರಪಿಂಡದಿಂದ ಕ್ಯಾಲ್ಸಿಯಂನ

ವಿಸರ್ಜನೆ ತಡೆ  .ಇತ್ಯಾದಿ .

೩.ಏರಿಥ್ರೋ ಪೋಯಿಟಿನ್
 ಇದು  ಅಸ್ಥಿಮಜ್ಜೆ ಯನ್ನು  ಚೋದಿಸಿ ಕೆಂಪು  ರಕ್ತ ಕಣಗಳ ಉತ್ಪತ್ತಿ ಹೆಚ್ಚಿಸುವ 

ಹಾರ್ಮೋನ್ .ರಕ್ತದಲ್ಲಿ ಆಮ್ಲಜನಕದ ಕೊರತೆಯಾದರೆ ಇದರ ಉತ್ಪತ್ತಿ 

ಏರುತ್ತದೆ .ಕೆಂಪು ರಕ್ತ ಕಣಗಳು ಆಮ್ಲಜನಕದ ವಾಹಕಗಳಷ್ಟೇ .


ಮೂತ್ರಪಿಂಡಗಳ ವೈಫಲ್ಯ (kidney Failure)ನಲ್ಲಿ ರಕ್ತ ಹೀನತೆ ಉಂಟಾಗುವುದು .

ಮತ್ತು ಎಲುಬುಗಳು ಕ್ಷೀಣಿಸುವವು .ಅದಕ್ಕೇ ವೈದ್ಯರು ಕೃತಕ ಏರಿತ್ರೋ 

ಪೊಯಿಟಿನ್ ಹಾರ್ಮೋನ್ (ಚುಚ್ಚುಮದ್ದು ರೂಪದಲ್ಲಿ ) ಮತ್ತು  ಕ್ರಿಯಾಶೀಲ 

ಡಿ ಅನ್ನಾಂಗ (ಕ್ಯಾಲ್ಸಿ ಟ್ರಯೋಲ್ ) ಮಾತ್ರೆ ರೂಪದಲ್ಲಿ ಕೊಡುವರು .





ಶನಿವಾರ, ಫೆಬ್ರವರಿ 13, 2016

ಸರ್ ರಾಬರ್ಟ್ ಹಚಿಸನ್ ನ ಅಣಿ ಮುತ್ತುಗಗಳು

ಇದು ಈ ಬ್ಲಾಗ್ ನ  ಇನ್ನೂರನೇ  ಲೇಖನ .ಇದುವರೆಗೆ ಓದಿ ಪ್ರೋತ್ಸಾಹಿಸಿದ  

ಓದುಗರಿಗೆ ನಮಸ್ಕಾರಗಳು .ಜ್ಞಾನ ಸಾಗರದಲ್ಲಿ ನನ್ನ ತಿಳುವಳಿಕೆ ಒಂದು ಬಿಂದು .

ವಿಜ್ಞಾನ ಇಷ್ಟು ಮುಂದುವರಿದರೂ  ಆರೋಗ್ಯ ಅನಾರೋಗ್ಯ ಗಳ ಬಗ್ಗೆ ಬಹಳಷ್ಟು 


ಮೂಡ ನಂಬಿಕೆಗಳು ತಪ್ಪು ಅಭಿಪ್ರಾಯಗಳು ಇನ್ನೂ ಚಾಲ್ತಿಯಲ್ಲಿ ಇರುವುದು ಬಹಳ 

ಬೇಸರದ ವಿಚಾರ .ದುರದೃಷ್ಟವಶಾತ್ ಇವನ್ನು ತಿಳಿ ಗೊಳಿಸುವ ಶಕ್ತಿ ಇರುವ 

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ತಪ್ಪು ನಂಬಿಕೆಗಳನ್ನು ಹರಡುತ್ತಿವೆ .


 ಇನ್ನು ಇಂದಿನ ವಿಚಾರ .ಅಧುನಿಕ ವೈದ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ  ರೋಗಿಗಳ 

 ಪರೀಕ್ಷಾ ವಿಧಾನ ಹೇಳಿ ಕೊಡುವ ಒಂದು ಬೈಬಲ್  ಹಚಿಸನ್ ನ ಕ್ಲಿನಿಕಲ್ 

ವಿಧಾನಗಳು ,ಶತಮಾನದಷ್ಟು ಹಿಂದೆ ರಚಿತವಾದ ಈ ಹೊತ್ತಿಗೆ  ಅನೇಕ ಬಾರಿ 

ಪರಿಷ್ಕರಣೆ ಗೊಂಡು ಈಗಲೂ ವೈದ್ಯ ವಿದ್ಯಾರ್ಥಿಯ  ಅವಿಭಾಜ್ಯ ಅಂಗವಾಗಿ 

ಉಳಿದಿರುವುದು ಇದರ ಶ್ರೇಷ್ಠತೆಗೆ  ಸಾಕ್ಷಿ .

                    


ಹಚಿಸನ್  ದೇವರಲ್ಲಿ  ಈ ರೀತಿ ಪ್ರಾರ್ಥಿಸುತ್ತಾನೆ .

ಅನಾರೋಗ್ಯ ವಿಲ್ಲದವರನ್ನು  ಅವರಷ್ಟಕ್ಕೆ ಬಿಡದಿರುವ (ಅನವಶ್ಯಕ ಚಿಕಿತ್ಸೆ ನೀಡುವ)

ಹೊಸತರ ಬಗ್ಗೆ ಅತೀವ ಮೋಹ ಮತ್ತು ಹಳೆಯದೆಲ್ಲ ಪಾಳು ಎಂಬ   ಅಸಡ್ಡೆ 

 ತೋರುವ   .ಜ್ಞಾನವನ್ನು ವಿವೇಕದ ಮುಂದೆ , ವಿಜ್ಞಾನವನ್ನು ಕಲೆಯ ಮುಂದೆ ,

ಮತ್ತು  ಬುದ್ದಿಮತ್ತೆಯನ್ನು   ಸಾಮಾನ್ಯ ಜ್ಞಾನ ದ ಮುಂದೆ ಇಡುವ ,ರೋಗಿಗಳನ್ನು 

ಮನುಜರಾಗಿ ಎಣಿಸದೆ ಕೇಸ್ ಎಂದು ನೋಡುವ ,ಮತ್ತು  ನಮ್ಮ ಚಿಕಿತ್ಸೆಯು 

ರೋಗವನ್ನು  ಬಳಲುವುದಕ್ಕಿಂತಲೂ ಅಸಹನೀಯವಾಗದಂತೆ  ಮಾಡುವ 

ಮನೋಸ್ಥಿತಿಯಿಂದ ನಮ್ಮನ್ನು ರಕ್ಷಿಸು ದೇವಾ .

ಇವರ ಇನ್ನು ಕೆಲವು ನುಡಿ ಮುತ್ತುಗಳು 

"ಅತಿ ಬುದ್ಧಿವಂತಿಕೆಯು ವೈದ್ಯ ಶಾಸ್ತ್ರದಲ್ಲಿ  ಅನಾವಶ್ಯಕವಲ್ಲದೆ ಅಪಾಯಕಾರಿ 

ಕೂಡ"

"ಪೂರ್ಣ ಆರೋಗ್ಯವು ಮರೀಚಿಕೆ , ಅದರ ಅನ್ವೇಷಣೆಯಲ್ಲಿ ಹೋದಷ್ಟೂ 
ದೂರ ಓಡುವುದು  ."

"ರೋಗ ನಿಧಾನದಲ್ಲಿ ಊಹೆಗೆ ಎಡೆಕೊಟ್ಟರೆ  ಕೆಟ್ಟೆ "

ಶುಕ್ರವಾರ, ಫೆಬ್ರವರಿ 12, 2016

ಆಟಸ್ಟೇಷನ್ ಸರ್ಟಿಫಿಕೇಟ್ ಪುರಾಣ

ನಿಮ್ಮ ಅರ್ಜಿಯೊಡನೆ ಗಜೆಟೆಡ್ ಅಧಿಕಾರಿಗಳು ಧೃಡೀಕರಿಸಿದ ಎಲ್ಲಾ 

ಸರ್ಟಿಫಿಕೇಟ್ ಗಳ ನಕಲಿ ಗಳನ್ನು ಲಗತ್ತಿಸಿರಿ .ಅಪೂರ್ಣವಾದ  ಮತ್ತು ಇಂತಹ 

ದಿನದ ಸಾಯಂಕಾಲ ೫ ಗಂಟೆ ಯ ನಂತರ ಬಂದ ಅರ್ಜಿಗಳನ್ನು 

(ನಿರ್ದಾಕ್ಷಿಣ್ಯವಾಗಿ ) ತಿರಸ್ಕರಿಸಲಾಗುವುದು .(ಅರ್ಜಿಯೊಡನೆ ಲಗತ್ತಿಸಿರುವ 


ಪೋಸ್ಟಲ್ ಆರ್ಡರ್ ಮಾತ್ರ  ಹಿಂದಿರುಗಿಸಲಾಗದು ).ಇದು ಸರಕಾರೀ ಉದ್ಯೋಗ 

ಅಥವಾ ಶಿಕ್ಷಣ ಪ್ರವೇಶ ಅರ್ಜಿಯ ಸಾಮಾನ್ಯ ಒಕ್ಕಣೆ ,


      ಕೆಲವು ವರ್ಷಗಳ ಹಿಂದೆ ಜೆರಾಕ್ಸ್ ಕಾಪಿ ಇರಲಿಲ್ಲ .ಆಗ ವೃತ್ತಿ ಪರ  ಟೈಪಿಸ್ಟ್ 

ಗಳ ಮುಂದೆ ಸಾಲು ನಿಂತು ಸರ್ಟಿಫಿಕೇಟ್  ಕಾಪಿ ಮಾಡಿಸಿ ನಂತರ ಗಜೆಟೆದ್ 

ಅಧಿಕಾರಿಗಳ ತಲಾಶ್ ಮಾಡ ಬೇಕಿತ್ತು .ವಾರದಲ್ಲಿ ಎಲ್ಲಾ ದಿನವೂ 

ಸಿಗುವ ಗಜೆಟೆದ್ ಅಧಿಕಾರಿ ಸರಕಾರೀ ವೈದ್ಯರು ಮತ್ತು  ಮೇಲ್ಮಟ್ಟದ ಪೋಲಿಸ್ 

ಅಧಿಕಾರಿಗಳು .ಆದರೆ ಪೋಲಿಸ್ ಅಂದರೆ ಏಕೋ ಭಯ .ಡಾಕ್ಟರ್ ಆದರೆ ಹಾಗಿಲ್ಲ 

ಆದರೆ  ಡೆಟಾಲ್ ವಾಸನೆಯನ್ನು ಸವಿಯುತ್ತಾ ,ರೋಗಿಗಳ ಜತೆ ನಿಂತರೆ ಆಯಿತು .

ಬೇರೆ  ರೆವೆನ್ಯೂ ಅಧಿಕಾರಿಗಳ  ಕಚೇರಿಗೆ ಹೋದರೆ ಸಾಹೇಬರು  ಇನ್ಸ್ಪೆಕ್ಟನ್

ಗೆ ಹೋಗಿದ್ದಾರೆ ಇಲ್ಲಿ ಕೊಟ್ಟು ಹೋಗಿ ನಾಳೆ ಬನ್ನಿ ಎನ್ನುವುದು ಸಾಮಾನ್ಯ.ಅಲ್ಲದೆ 

ಅಲ್ಲಿಯ ಜವಾನನ ಕೈ ಸ್ವಲ್ಪ ಬಿಸಿ ಮಾಡ ಬೇಕು .

ನಾನು ಕೇಂದ್ರ ಸರಕಾರದ ಗಜೆಟೆಡ್ ಅಧಿಕಾರಿ ಯಾಗಿದ್ದಾಗ  ನನ್ನ ಸರ್ಟಿಫಿಕೇಟ್ 

ಆಟೇಸ್ಟ್ ಮಾಡಿಸಲು ಒಂದು ಸರಕಾರೀ ಕಚೇರಿಗೆ ಹೋಗಿದ್ದೆ .ಅಲ್ಲಿಯ ಕಾರಕೂನ 

ಕೆಲಸ ಮುಗಿಸಿ ನೂರು ರುಪಾಯಿ ಕೊಡುವಂತೆ ಕೇಳಿದರು .ವಿಚಾರಿಸಿದ್ದಕ್ಕೆ ಅದು 

ಗಜೆಟೆಡ್ ಆಫೀಸರ್ ಫೀಸ್ ಅಂದರು .ನಾನು ಸ್ವತಃ ಗಜೆ ಟೆಡ್ ಅಧಿಕಾರಿ 

ಆಗಿರುವ  ನನಗೇ ತಿಳಿಯದ ಫೀ ಯಾವದಪ್ಪ ಎಂದು ಕೇಳಿದ್ದಕ್ಕೆ ಮೊದಲೇ 

ಹೇಳ ಬಾರದೆ ನೀವು ಯಾರು ಎಂದು ಮುಖ ಹುಳ್ಳಗೆ ಮಾಡಿದರು .

     ಕೆಲವೊಮ್ಮೆ ನಾನು ಯೋಚಿಸುವುದು .ರಾಜ್ಯ ಲೋಕ ಸೇವಾ ಆಯೋಗ ಗಳ 

ನೇಮಕಾತಿಯ   ಪಾವಿತ್ರ್ಯವೇ ಪ್ರಶ್ನಾರ್ಹ ವಾಗಿರುವಾಗ  ಅಲ್ಲಿಂದ ನೇಮಕವಾದ 

ಅಧಿಕಾರಿಗಳ ದೃಡೀಕರಣ ಎಷ್ಟು ವಿಶ್ವಾಸಾರ್ಹ ? ಆದರೆ ಅಧಿಕಾರಿಗಿಂತಲೂ

ಅವರು ಅಲಂಕರಿಸಿರುವ ಹುದ್ದೆಯ ಮಹಿಮೆ ಇದೆಯಲ್ಲ .

 ಈ ದೃಡೀಕರಣ ಎಂಬುದು ಅರ್ಜಿದಾರರ ಪ್ರಾಮಾಣಿಕತೆಯು ಸಂಶಯಾಸ್ಪದ 

ಅದಾಗ  ಹುಟ್ಟಿದ ಕ್ರಿಯೆ .ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಾರ್ಥಿಗಳ  ಪದವಿ 

ಸರ್ಟಿಫಿಕೇಟ್ ಗಳನ್ನು ಗೃಹ ಖಾತೆಯವರು ಪೋಲಿಸ್ ಮುಖಾಂತರ ದೃಡ 

ಪಡಿಸಿದ ಮೇಲೆಯೇ ಪರಿಗಣಿಸುವರು .ಎಂತಹಾ ಅವಸ್ಥೆ !

 ಈಗ  ಅದೃಷ್ಟಕ್ಕೆ  ಜೆರಾಕ್ಸ್ ಯಂತ್ರಗಳು ಬಂದಿವೆ .ಅವು ಯಥಾ ಪ್ರತಿ 

ತೆಗೆಯುತ್ತವೆ .ಆದರೆ ತಥಾ ಕಥಿತ ಒರಿಜಿನಲ್ಲೇ ಮೋಸದಿಂದ ಸಂಪಾದಿಸಿ ದ್ದಾದರೆ ?

ಈಗ ಎಲ್ಲೆಡೆ ಇಂತಹ ಪದವಿ ,ಅನುಭವ ,ಮತ್ತು  ನಡತೆ ಪ್ರಮಾಣ ಪತ್ರ 

ಸೃಷ್ಟಿಕರ್ತ  ಅಭಿನವ ಬ್ರಹ್ಮರು  ಹುಟ್ಟಿ ಕೊಂಡಿರುವರು .ಅವರು ಹಣ ಕೊಟ್ಟರೆ 

ಡಾಕ್ಟರೇಟ್  ಪದವಿಯನ್ನೂ  ಸರಿ ಮಾಡಿ ಕೊಡುವರು .

 ಇನ್ನು  ತಮ್ಮ ಹಳೇ ವಿದ್ಯಾರ್ಥಿಗಳು ಬಂದು ಹಲ್ಲು ಗಿಂಜಿದಾಗ ಪ್ರಾಧ್ಯಾಪಕರು 


ಈ ರೀತಿ ಬರೆದು ಕೊಡ ಬೇಕಾಗುತ್ತದೆ .

ಈ ವಿದ್ಯಾರ್ಥಿ ಯು  ತರಗತಿಗಳಲ್ಲಿ  ಕ್ರಿಯಾಶೀಲ ನೂ (ಬಂಕ್ ಮಾಡಿದ್ದೇ ಹೆಚ್ಚು 

ಬಂದಾಗಲೂ ಕಪಿ ಚೇಸ್ಟೆ ಮಾಡುವುದರಲ್ಲಿ ನಿಪುಣ ), ಅನ್ವೇಷಕ ಪ್ರವೃತ್ತಿ ಯವನೂ 

(ಥಿಯರಿ ಪರೀಕ್ಷೆಯಲ್ಲಿ  ಬ್ಲೂ  ಟೂಥ್ ಬಳಸಿ ಕಾಪಿ ಮಾಡುವುದನ್ನು ಕಂಡು 

ಹಿಡಿದುದಲ್ಲದೆ  ಎಕ್ಸ್ಟರ್ನಲ್  ಪರೀಕ್ಷಕರು ಯಾರೆಂದು ಕಂಡು ಹಿಡಿದು ಅವರನ್ನು 

ಮೊದಲೇ  ಸರಿ ಮಾಡಿ ಕೊಳ್ಳುವುದರಲ್ಲಿ  ಪ್ರವೀಣ ) ಆಗಿರುವನು .ಇವನು 

ಯಾವುದೇ  ಸಂಸ್ಥೆತೆಗೆ ಒಂದು ಅಸ್ತಿ ಎಂದು ಬಂದವರಿಗೆಲ್ಲಾ ಬರೆದು ಕೊಡ 

ಬೇಕಾಗುತ್ತದೆ .ನಿಮಗೆ ಕಷ್ಟ ಕೊಡ ಬಾರದು ಎಂದು ರೆಡಿ ಮೇಡ್ ಸರ್ಟಿಫಿಕೇಟ್ 

ತರುವರು ,ಅದಕ್ಕೆ ನಾವು ಸಹಿ ಮಾಡಿದರೆ ಆಯಿತು .ಎಷ್ಟು ಸುಲಭ !

ಖ್ಯಾತ ವೈದ್ಯ ಚಿಕಿತ್ಸಕ  ಡಾ ಕೆ ವಿ ತಿರುವೆಂಗಡಂ ನನಗೆ ಗುರು .ನನಗೆ ಒಂದು 

ಪ್ರಮಾಣ ಪತ್ರ ಬೇಕೆಂದು ಅವರಲ್ಲಿ  ಕೋರಿದಾಗ ಸಂತೋಷದಿಂದ ಸಮ್ಮತಿಸಿ 

ಒಂದು ಕಾಗದಲ್ಲಿ ಬರೆದು ಕೊಟ್ಟು ಅದನ್ನು ಟೈಪ್ ಮಾಡಿ ತೋರಿಸ ಹೇಳಿದರು .

ಅದರಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಮನವರಿಕೆ ಅದ ಮೇಲೆ ತಮ್ಮ 

ಲೆಟರ್ಹೆಡ್ ಕೊಟ್ಟು ಅದರಲ್ಲಿ ಟೈಪ್ ಮಾಡಿಸಿ ಸಹಿ ಮಾಡಿ ಶುಭಾಶಯ ಕೋರಿ 

ಆಶೀರ್ವದಿಸಿದರು .

ಗುರುವಾರ, ಫೆಬ್ರವರಿ 11, 2016

ಶಾಕ್ ಟ್ರೀಟ್ಮೆಂಟ್

ಸರಿಯಾಗಿ ಕೆಲಸ ಮಾಡದೇ ಇರುವ ಇಲಾಖೆಗೆ ಒಂದು ಶಾಕ್ ಟ್ರೀಟ್ಮೆಂಟ್ ಕೊಡ 

ಬೇಕು ಎಂದು ಜನರು ಆಡುವುದು ಉಂಟು .ಈ ಶಾಕ್ ಚಿಕಿತ್ಸೆ ವೈದ್ಯಕೀಯ 

ಜಗತ್ತಿನಲ್ಲಿ ಎರಡು ವಿಧದ ಶಾಕ್ ಪ್ರಚಲಿತದಲ್ಲಿದೆ .

 ೧ ಹೃದಯದ ಶಾಕ್ ಚಿಕಿತ್ಸೆ 

                       

ಹೃದಯಾಘಾತ ಅಥವಾ ಇನ್ನಿತರ ಕಾರಣಗಳಿಂದ ಹೃದಯದ ಬಡಿತ ಏರು 

ಪೇರು ಆಗಿ  ಹೃದಯದ  ಪಂಪ್  ಕೆಲಸ ಮಾಡದೆ ಇದ್ದರೆ ಮೆದುಳಿಗೆ ರಕ್ತ 

ಸಂಚಾರದಲ್ಲಿ ಮೊಟಕು ಉಂಟಾಗಿ ಸಾವು ಸಂಭವಿಸ ಬಹುದು .ಇಂತಹ ಸಂದರ್ಭ 

ಹೃದಯಕ್ಕೆ  ನೇರ ವಿದ್ಯುತ್ (ಡೈರೆಕ್ಟ್ ಕರೆಂಟ್ )ಶಾಕ್ ಕೊಟ್ಟು  ಅದರ ಅದರ 

ಬಡಿತ ಒಂದು ಸಹನೀಯ ತಾಳದಲ್ಲಿ ನಡೆಯುವಂತೆ ಮಾಡುವರು .ಹಲವು ಭಾರಿ 

ಇದು ಜೀವ ಉಳಿಸುವ ಚಿಕಿತ್ಸೆ .

೨ ಮೆದುಳಿನ ಶಾಕ್ ಚಿಕಿತ್ಸೆ 


ಕೆಲವು  ತೀವ್ರತರ ಮಾನಸಿಕ ರೋಗ ಸ್ಥಿತಿಯಲ್ಲಿ   ಮೆದುಳಿಗೆ  ವಿದ್ಯುತ್  ಶಾಕ್

ಕೊಡುವರು .ಉದಾ ತೀವ್ರತರ  ಖಿನ್ನತೆ (ಡಿಪ್ರೆಶನ್).ಇದರಲ್ಲಿ  ರೋಗಿಗೆ 

 ಅರವಳಿಕೆ (ಅನೆಸ್ಥೆಸಿಯಾ)ಕೊಟ್ಟು  ಮೆದುಳಿಗೆ  ವಿದ್ಯುತ್ ಹಾಯಿಸಿ ಕೃತಕ 

ಅಪಸ್ಮಾರ ಸೃಷ್ಟಿಸುವರು .ಇದರಿಂದ  ಏರು ಪೇರಾದ ಮೆದುಳಿನ 

ವಾಹಕ ಗಳು  ಒಂದು ಶಿಸ್ತಿಗೆ ಬರುವವು ಎಂಬ  ಹಾರೈಕೆ .

(ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)


ಬುಧವಾರ, ಫೆಬ್ರವರಿ 10, 2016

ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ


                               

ಧಾರವಾಡ ನಗರದ ಹೃದಯ ಭಾಗದಲ್ಲಿ ಮೇಲೆ ಕಾಣಿಸಿದ ಹಳೇ ಕಟ್ಟಡ 

ಮೊದಲು ಕಂಡವರಿಗೆ ಅದರ ಭವ್ಯ ಇತಿಹಾಸ ಮನವರಿಕೆ ಆಗದು .ಅದುವೇ 

ಕರ್ನಾಟಕ ವಿದ್ಯಾವರ್ಧಕ ಸಂಘ .೧೮೯೦ ಜುಲೈ ೨೦ ರಂದು  ಕನ್ನಡ ಕುಲ 

ತಿಲಕ ರಾವ್ ಬಹದೂರ್ ಆರ್ ಎಚ್ ದೇಶಪಾಂಡೆಯವರಿಂದ ಸ್ಥಾಪಿತವಾದ ಸಂಸ್ಥೆ .
ವಿವಿದ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡಿನ ಏಕೀಕರಣಕ್ಕೆ ನಾಂದಿ 

ಹಾಕಿದ  ತಾಣ .ಸಿರಿ ಗನ್ನಡಂ ಗೆಲ್ಗೆ  . ಎಂಬ ನುಡಿ ಗಟ್ಟನ್ನು ಹುಟ್ಟು 

ಹಾಕಿದವರೇ  ಪ್ರಾತಃ ಸ್ಮರಣೀಯ ದೇಶಪಾಂಡೆಯವರು .ಮುಂದೆ ಜನ್ಮ ತಾಳಿದ 

ಕನ್ನಡ ಸಾಹಿತ್ಯ ಪರಿಷತ್ತಿಗೂ ಇದುವೇ ಸ್ಪೂರ್ತಿ .

೧೯೭೬ ರಿಂದ ೧೯೮೧ ರ ವರೆಗೆ  ಹುಬ್ಬಳ್ಳಿ ಕೆ ಎಂ ಸಿ ರಲ್ಲಿ  ಓದುತ್ತಿದ್ದಾಗ 

ಈ ಸಂಘದ  ಸಭೆಗಳಿಗೆ ಹಾಜರಾಗುತ್ತಿದ್ದೆ.ಆಗ  ಕವಿ ಚಂದ್ರಶೇಖರ ಪಾಟೀಲ್ 

ಕಾರ್ಯದರ್ಶಿ ಯಾಗಿದ್ದರು .ಕನ್ನಡದ ಘಟಾನುಘಟಿ ಸಾಹಿತಿಗಳಾದ ಗೋಪಾಲಕೃಷ್ಣ

ಅಡಿಗ ,ಲಂಕೇಶ್ ,ಅನಂತಮೂರ್ತಿ ಮುಂತಾದವರನ್ನು ಹತ್ತಿರದಿಂದ ನೋಡುವ 

ಮತ್ತು ಕೇಳುವ ಭಾಗ್ಯ .ಚಂಪಾ ಅವರು  ದಿಗ್ಗಜರಿಗೆ ಹಾಕುತ್ತಿದ್ದ ಹರಿತ ಪ್ರಶ್ನೆಗಳು 

ರೋಚಕ ಚರ್ಚೆ .ಸಭೆಯ ನಂತರ ಹತ್ತಿರದ ವಿದ್ಯಾರ್ಥಿ ಭವನ ಕ್ಯಾಂಟೀನ್ ನಲ್ಲಿ 

ಬಾಳೆಹಣ್ಣು ಶಿರಾ ಮತ್ತು ಟೀ ಸೇವನೆ .

ಇತ್ತೀಚಿಗೆ  ಅರ್ ಎಚ್ ದೇಶಪಾಂಡೆಯವರ ಬಗ್ಗೆ ಸಂಘವು ಒಂದು ಪುಸ್ತಕ 

ತಂದಿದೆ.ಸಂಘದ ಅಧ್ಯಕ್ಷ  ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಭೀಷ್ಮ 

ಶ್ರೀ ಪಾಟೀಲ ಪುಟ್ಟಪ್ಪ ಅದನ್ನು ಬಿಡುಗಡೆ ಮಾಡಿದರು .ಕನ್ನಡ ಕ್ಕಾಗಿ 

ಪ್ರಾಮಾಣಿಕ ಕೆಲಸ ಮಾಡುತ್ತಿರುವ ನನ್ನ ಮಿತ್ರ ವೈದ್ಯ ಡಾ ಸಂಜೀವ ಕುಲಕರ್ಣಿ 


ವಿದ್ಯಾ ವರ್ಧಕ ಸಂಘ ದ  ಓರ್ವ ಕ್ರಿಯಾಶೀಲ ಪಧಾಧಿಕಾರಿ ಎಂಬುದು  ಹೆಮ್ಮೆಯ 

ವಿಷಯ 


                               ಅರ್ ಎಚ್ ದೇಶಪಾಂಡೆ 


ಪಾಟೀಲ ಪುಟ್ಟಪ್ಪರಿಂದ   ಪುಸ್ತಕ ಬಿಡುಗಡೆ (ಎಡ ತುದಿಯಲ್ಲಿ ಡಾ ಕುಲಕರ್ಣಿ )

  

ಮಂಗಳವಾರ, ಫೆಬ್ರವರಿ 9, 2016

ಸೈನುಸೈಟಿಸ್

ನಿಮ್ಮ ತಲೆ ಖಾಲಿಯೋ ಮೆದುಳನ್ನು ಏನಾದರೂ ದೇವರು ಇಟ್ಟಿದ್ದಾನೋ ಎಂದು 

ಬೈಗಳು ತಿಂದಿರ ಬಹುದು .ಆದರೆ ಸೃಷ್ಟಿಕರ್ತ ನು ತಲೆ ಬುರುಡೆಯಲ್ಲಿ ಖಾಲಿ 

ಪ್ರದೇಶಗಳನ್ನೂ ಇಟ್ಟಿರುವನು. ಅವುಗಳನ್ನು ಸೈನಸ್ ಗಳು ಎಂದು ಕರೆಯುವರು .

ಈ  ಖಾಲಿ ಖೋಲಿಗಳು ಮೂಗಿನ ಸಂಪರ್ಕದಲ್ಲಿ ಇರುವವು .ಇವಗಳಲ್ಲಿ ಗಾಳಿ 

ತುಂಬಿದ್ದು ಮೂಗಿನ ಮೂಲಕ ಹೊಸ ವಾಯು ತುಂಬುವುದು . ಇವುಗಳು ತಲೆಯ 

ಭಾರ ಕಡಿಮೆ ಮಾಡುವವಲ್ಲದೆ ,ನಮ್ಮ ಸ್ವರಕ್ಕೆ  ಅದರ ನಾದವನ್ನು ಕೊಡುವುವು.

            


ಇದರಲ್ಲಿ ಕಣ್ಣುಗಳ ಮೇಲೆ ಇಬ್ಬದಿಯಲ್ಲಿ  ಮುಂಬಾಗದ  ಸೈನಸ್ ಗಳು ,ಕೆಳಗೆ 

ಎರಡು ಮೇಲ್ದವಡೆಯ ಸೈನಸ್ಗಳು ಮತ್ತು ಕಣ್ಣಿನ ಹಿಂದೆ ಅಡಗಿರುವ  ಸ್ಪಿನೋಯಿಡ


ಸೈನ್ಸ್ ಮತ್ತು ಎತ್ಹ್ಮೊಯ್ದಲ್ ಸೈನಸ್ ಸೇರಿವೆ .


ಕೆಲವೊಮ್ಮೆ  ಶೀತ ಉಂಟು ಮಾಡುವ ವೈರಸ್ ಗಳು  ಮೂಗಿನ ಮೂಲಕ 

ಇಲ್ಲಿಗೂ ಧಾಳಿ ಮಾಡಿ ಗಾಳಿಯ ಬದಲು ನೆಗಡಿ ತುಂಬುವಂತೆ ಮಾಡುವುವು .

ಇದರಿಂದ ವಿಪರೀತ ತಲೆನೋವು ಉಂಟಾಗುವುದು .ಅದನ್ನು ಸೈನುಸೈಟಿಸ್ 

ಎಂದು ಕರೆಯುವರು .

ಇದಕ್ಕೆ  ನೋವು ನಿವಾರಕ ,ಮತ್ತು ಶೀತ ಲಕ್ಷಣ ನಿರೋಧಕ ಆಂಟಿ ಹಿಸ್ಟಮಿನ್ 

ಗುಳಿಗೆಗಳನ್ನು ಕೊಡುವರು .ಬಿಸಿ ನೀರ ಆವಿ ಸೇವನೆ ಮೂಗು ಮತ್ತು 

ಸೈನಸ್ ನಡುವಿನ ದ್ವಾರವನ್ನು ತೆರೆದಿಡುವಲ್ಲಿ ಸಹಾಯಕ .ಸಾರಾ ಸಗಟು 

ಆಂಟಿ ಬಯೋಟಿಕ್ ಬಳಕೆ  ಅನಾವಶ್ಯಕ .

ಈ ಸೈನಸ್ ಗಳಲ್ಲದೆ  ಮೂಗಿಗೆ ಕಣ್ಣುಗಳಿಂದಲೂ ಒಂದು ನಾಳ (ನೇತ್ರ ನಾಸಿಕ 

ನಳಿಕೆ) ಇರುವುದು .ಕಣ್ಣೀರನ್ನು ಹೊರಗೆ ಕಾಣದಂತೆ ವಿಸರ್ಜಿಸುವ ಮಾರ್ಗ ,ಅದಕ್ಕೆ 

ಜೋರಾಗಿ ಅತ್ತರೆ ನೆಗಡಿ ಬರುವುದು .



ಶನಿವಾರ, ಫೆಬ್ರವರಿ 6, 2016

ಜಿಕಾ ವೈರಸ್ ಕಾಯಿಲೆ

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಕಾಯಿಲೆ ಜಿಕಾ ವೈರಸ್ ಕಾಯಿಲೆ .
ಡೆಂಗು ,ಚಿಕನ್ ಗುನ್ಯಾ ಗುಂಪಿಗೆ ಸೇರಿದ  ವೈರಸ್ ರೋಗಾಣು ವಿನಿಂದ 
ಉಂಟಾಗುವುದು ,ಇದರ ವಾಹಕವೂ ಡೆಂಗು ಹರಡುವ  ಇಡಿಸ್ ಇಜಿಪ್ತೀ ಸೊಳ್ಳೆ .
ಇದು ಸಾಯಂ ಸಂಧ್ಯಾ ಸಮಯದಲ್ಲಿ ಕಾಡುವ ಸೊಳ್ಳೆ .ಲೈಂಗಿಕ ಸಂಬಂಧ ದಿಂದಲೂ ಈ  ರೋಗ ಹರಡುವುದು

 ಜಿಕಾ ಕಾಯಿಲೆ ಮೊದಲು ಉಗಾಂಡಾ ದೇಶದಲ್ಲಿ  1947 ರಲ್ಲಿ ಹಳದಿ ಜ್ವರ 
ಅಧ್ಯಯನ ಮಾಡುವ ತಂಡದಿಂದ ಕಂಡು ಹಿಡಿಯಲ್ಪಟ್ಟಿತು.ಆ ಮೇಲೆ ಆಗಾಗ್ಗೆ 
ಆಫ್ರಿಕಾ ದೇಶಗಳಲ್ಲಿ ತಲೆ ಎತ್ತುತ್ತಿತ್ತಾದರೂ ಪ್ರಾಣಾಂತಿಕ ಕಾಯಿಲೆ ಅಲ್ಲದ ಕಾರಣ 
ಅಷ್ಟು ಗಮನ ಸೆಳೆಯಲಿಲ್ಲ .

  ಮನುಷ್ಯನ ಶರೀರ ದೊಳಗೆ ಸೇರಿದ ರೋಗಾಣು ಜ್ವರ ತಲೆನೋವು,ಕೀಲುನೋವು , ಕೆಂಗಣ್ಣು  ಮತ್ತು  ಮೈಮೇಲೆ ಧಡಾರ ದಂತಹ ಕೆಂಪು ಬೀಳುವುದು ಇತ್ಯಾದಿ ಲಕ್ಷಣಗಳುಳ್ಳ ಕಾಯಿಲೆ ಹುಟ್ಟು ಹಾಕುವುದು ,

ಸಾಮಾನ್ಯ 2 ರಿಂದ 7 ದಿನಗಳ ವರೆಗೆ ಮೇಲೆ ಹೇಳಿದ ಸಮಸ್ಯೆಗಳು ಕಾಡ 

ಬಹುದು ,ಈ ಕಾಯಿಲೆ ಪ್ರಾಣಾಂತಕ ಅಲ್ಲ , ವಿಶ್ರಾಂತಿ ಮತ್ತು ಸಾಧಾರಣ ಜ್ವರ ಶಾಮಕ  ಮಾತ್ರೆ ಸೇವನೆ  ಸಾಕು.
ಈ ಮೊದಲೇ ಡೆಂಗ್ಯೂ ಕಾಯಿಲೆ ಬಂದು ಗುಣಮುಖರಾದವರಲ್ಲಿ   ಜಿಕಾ ಕಾಯಿಲೆ ಸೌಮ್ಯ ಸ್ವರೂಪದಲ್ಲಿ ಇದ್ದರೆ ,ಜಿಕಾದಿಂದ ಬಳಲಿದವರಿಗೆ ಡೆಂಗ್ಯೂ ಬಂದರೆ ತೀವ್ರ ವಾಗಿ ಇರುವುದು ಎಂದು ಅಧ್ಯಯನಗಳಿಂದ ಕಂಡು ಬಂದಿದೆ.

ಹಾಗಾದರೆ ಈಗ ಯಾಕೆ ಈ ಭೀತಿ ?  ಬ್ರೆಜಿಲ್ ದೇಶದಲ್ಲಿ  ಈ ರೋಗದ ಹಾವಳಿ 

ಇದ್ದ ಸಮಯದಲ್ಲಿ ಜನಿಸಿದ ಮಕ್ಕಳು  ಕಿರು ತಲೆ ಯವರಾಗಿ ಹುಟ್ಟಿದ್ದು ಕಂಡು  ಬಂತು . .ಗರ್ಭಿಣಿಯರಿಗೆ  ಜಿಕಾ ಬಂದರೆ ಗರ್ಭಸ್ಥ  ಶಿಶುವಿಗೆ ಹಾನಿ ಮಾಡುವುದು.