ಬೆಂಬಲಿಗರು

ಗುರುವಾರ, ಡಿಸೆಂಬರ್ 17, 2015

ಥೈರಾಯಿಡ್ ಕಾಯಿಲೆಗಳು

ನಮ್ಮ ಕುತ್ತಿಗೆ ಎದುರು ಭಾಗದಲ್ಲಿ ಥೈರಾಯಿಡ್ ಎಂಬ ನಿರ್ನಾಳ ಗ್ರಂಥಿ ಇದೆ .ಇದು 

ಥೈರಾಯಿಡ್ ಹಾರ್ಮೋನ್ ಉತ್ಪತ್ತಿ ಮಾಡುವುದು .ಈ ಹಾರ್ಮೋನ್ ಶರೀರದ 

ಎಲ್ಲಾ ಅಂಗಗಳ ಜೀವಕೋಶಗಳು ಕ್ರಿಯಾಶೀಲ ವಾಗಿ ಇರುವಂತೆ ಮಾಡುವುದು .

                     
ತಲೆಯ ಒಳಗೆ ಮೆದುಳಿನ ಕೆಳ ಭಾಗದಲ್ಲಿ ಇರುವ ಪಿಟ್ಯುಟರಿ ಗ್ರಂಥಿಯು ಇದರ 

ಕಾರ್ಯವನ್ನು ಥೈರಾಯಿಡ್ ಚೋದಕ (stimulating hormone TSH) 

ದ  ಮುಖಾಂತರ  ನಿಯಂತ್ರಿಸುವುವುದು .

ಥೈರಾಯಿಡ್ ಹಾರ್ಮೋನ್ ತಯಾರಿಕೆಗೆ ಮೂಲ ವಸ್ತು ತೈರೋಸಿನ್  ಎಂಬ 

ಅಮೈನೊ ಆಮ್ಲ  ಮತ್ತು  ಅಯೋಡೀನ್ .ಹಿಂದೆ ಅಹಾರಲ್ಲಿ  ಅಯೋಡೀನ್ 

ಕೊರತೆಯಿಂದ ಈ ಹಾರ್ಮೋನ್ ಉತ್ಪತ್ತಿ ವ್ಯಯವಾಗಿ  ಜನರು ಬಳಲುತ್ತಿದ್ದರು .

ಈಗ ಕಡ್ಡಾಯವಾಗಿ ಉಪ್ಪಿನಲ್ಲಿ ಅಯೋಡೀನ್ ಸೇರಿಸುವರು .

ಈಗ  ಸ್ವಯಂ ನಿರೋಧಕ (ಆಟೋ ಇಮ್ಯೂನ್) ಕಾರಣ ಹೆಚ್ಚಾಗಿ  ಥೈರಾಯಿಡ್ 

ಕಾಯಿಲೆ ಬರುವುದು .

ಥೈರಾಯಿಡ್  ಹಾರ್ಮೋನ್ ಕಡಿಮೆಯಾದರೆ  ಶರೀರದ ತೂಕ ಹೆಚ್ಚುವುದು ,

ಆಯಾಸ ,ಚಳಿ  ,ಶರೀರದಲ್ಲಿ ನೀರು ನಿಂತಂತೆ ಆಗುವುದು ,ಕೂದಲು 

ಉದುರುವುದು ,ಮುಟ್ಟಿನ ಏರುಪೇರು ,ಚರ್ಮ ಒಣಗುವುದು .

ಹಾರ್ಮೋನ್ ಅಧಿಕ ವಾದರೆ  ಹಸಿವು ಅಧಿಕ ಇದ್ದರೂ ತೂಕ ಇಳಿಯುವುದು 

ಎದೆ ಬಡಿತ ,ಮಾಂಸ ಖಂಡಗಳು ಸೋಲುವವು.ಸೆಖೆ .ಕೈ ನಡುಕ ಕಣ್ಣುಗಳ 

ತೊಂದರೆ ಇತ್ಯಾದಿ ಉಂಟಾಗ ಬಹುದು .

ಬುದ್ದಿ ಮಾಂದ್ಯತೆ ಮತ್ತು ಮಾನಸಿಕ  ರೋಗ ಲಕ್ಷಣಗಳೂ ಥೈರಾಯಿಡ್ 

ಹಾರ್ಮೋನ್ ಏರು ಪೇರಿನಿಂದ  ಬರ ಬಹುದು .

ಥೈರಾಯಿಡ್ ಹಾರ್ಮೋನ್ ಪ್ರಮಾಣವನ್ನು ರಕ್ತ ಪರೀಕ್ಷೆಯ ಮೂಲಕ ತಿಳಿಯುವರು .

ಇದರಲ್ಲಿ  T3 ,T4 ಎರಡು ಥೈರಾಯಿಡ್ ಹಾರ್ಮೋನ್ ಗಳು .ಮತ್ತು  TSH

ಎಂಬುದು ಪಿಟ್ಯುಟರಿ ಗ್ರಂಥಿ ಉತ್ಪಾದಿಸುವ   ಥೈರಾಯಿಡ್ ಪ್ರಚೋದಕ.ಮೂಲತಃ

ಥೈರಾಯಿಡ್ ಗ್ರಂಥಿಯ ಸಮಸ್ಯೆಯಿಂದ ಥೈರಾಯಿಡ್  ಹಾರ್ಮೋನ್  ಉತ್ಪತ್ತಿ 

ಕಮ್ಮಿ ಆದರೆ  T3 T4 ಕಮ್ಮಿಯಾಗಿ  ಪಿಟ್ಯುಟರಿ ಗ್ರಂಥಿಯು ಹೆಚ್ಚು TSH

ಸ್ರವಿಸಿ ಅದನ್ನು ಸರಿದೂಗಿಸಲು ಯತ್ಸಿಸುವುದು .ಅದೇ ರೀತಿ  ಥೈರಾಯಿಡ್ 

ಗ್ರಂಥಿಯ ಕಾಯಿಲೆಯಿಂದ  ಹಾರ್ಮೋನ್ ಅಧಿಕ  ರಕ್ತ ಸೇರಿದೊಡನೆ 

TSH  ಸ್ರಾವ ವಾಡಿಕೆಗಿಂತಲೂ ಕಡಿಮೆ ಆಗುವುದು .

ಥೈರಾಯಿಡ್ ಹೆಚ್ಚು ಅಥವಾ ಕಮ್ಮಿ ಎರಡಕ್ಕೂ ಸೂಕ್ತ ಚಿಕಿತ್ಸೆ ಇದೆ ಮತ್ತು 

ಅವಶ್ಯಕ .

ಭಾನುವಾರ, ಡಿಸೆಂಬರ್ 13, 2015

ಸ್ವಯಂ ನಿರೋಧಕ ಕಾಯಿಲೆಗಳು (ಆಟೋ ಇಮ್ಯೂನ್ ಡಿಸೀಸಸ್)

ನಮ್ಮ ಶರೀರದ  ರೋಗ ರಕ್ಷಣಾ ವ್ಯವಸ್ಥೆಯ ಬಗ್ಗೆ  ಹಿಂದೆ ಇದೇ ಬ್ಲಾಗ್ ನಲ್ಲಿ 

ಬರೆದಿದ್ದೇನೆ. ಯಾವುದೇ ಹೊರಗಿನ ರೋಗಾಣು ಅಥವಾ ವಸ್ತು ಶರೀರ ದ 

ಸಂಪರ್ಕ ಕ್ಕೆ ಬಂದೊಡನೆ  ನಮ್ಮ ಶರೀರದ ರಕ್ಷಕ  ಕಣಗಳು ಅವುಗಳನ್ನು 

ಗುರುತಿಸಿ  ಅವುಗಳ ವಿರುದ್ಧ ಹೊರಾಡಲು ಬಿಳಿ ರಕ್ತ ಕಣಗಳಿಗೆ ಆದೇಶ ನೀಡುತ್ತವೆ .

ಬಿಳಿ ರಕ್ತ ಕಣಗಳು ನೇರವಾಗಿ ಅಥವಾ ತಾವು ಉತ್ಪಾದಿಸುವ  ರೋಗ ನಿರೋಧಕ 

(antibody) ವಸ್ತುಗಳ ಸಹಾಯದಿಂದ ಈ ಕಾರ್ಯವನ್ನು ನೆರವೇರಿಸುತ್ತವೆ .


                    ಕೆಲವೊಮ್ಮೆ ಈ ವ್ಯವಸ್ಥೆ ಹತೋಟಿ ತಪ್ಪಿ ನಮ್ಮ ಶರೀರದ ಸ್ವಂತ 

ಅಂಗಗಳ ಮೇಲೆಯೇ ಈ ರಕ್ಷಕರು ತಪ್ಪ್ಪಿ ಧಾಳಿ ಮಾಡುವುದುಂಟು .ಇದು 

ಭಸ್ಮಾಸುರನ ಕತೆಯಂತೆ .ತನ್ನ ರಕ್ಷಣೆಗೆ ಯಾರ ತಲೆಯ ಮೇಲೆ ಕೈ ಇಟ್ಟರೂ 

ಅವರು ಉರಿದು ಬೂದಿಯಾಗುವಂತೆ ವರ ಪಡೆದ ಬಸ್ಮಾಸುರ ಮಾನಿನಿಯ 

ಪರವಶದಲ್ಲಿ ತನ್ನ ತಲೆ ಮೇಲೆ  ಕೈ ಇಟ್ಟು ಭಸ್ಮ ಆಗುತ್ತಾನೆ .

            ಹಾಗೆಯೇ ಇಲ್ಲಿಯೂ  ದೇಹದ ಅಂಗಗಳ ಮೇಲೆ ಬಿಳಿ ರಕ್ತ ಕಣಗಳು 

ನೇರವಾಗಿ ಅಥವಾ ಪ್ರತಿ ವಸ್ತು (ಆಂಟಿಬಾಡಿ) ಗಳ ಮೂಲಕ ಹಾನಿ ಮಾಡಿ 

ರೋಗ ಉಂಟು ಮಾಡುತ್ತವೆ .ಇದನ್ನು ಆಟೋ ಇಮ್ಯೂನ್ ಕಾಯಿಲೆಗಳು 

ಅಥವಾ ಸ್ವಯಂ ನಿರೋಧಕ ಕಾಯಿಲೆಗಳು ಎನ್ನುವರು .

               ಉದಾಹರಣೆಗೆ  ಥೈರಾಯಿಡ್ ಗ್ರಂಥಿಗಳ ಮೇಲೆ  ಈ ರೀತಿ ಆದರೆ 

ಅದು ರೋಗ ಗ್ರಸ್ಥವಾಗಿ  ಹಾರ್ಮೋನ್ ಸ್ರಾವ ಹೆಚ್ಚು ಅಥವಾ ಕಮ್ಮಿ ಆಗಿ 

ಅನುಗುಣವಾದ ಕಾಯಿಲೆ ಬರ ಬಹುದು .ಮೇದೋಜೀರಕ ಗ್ರಂಥಿಯ ನಿರ್ನಾಳ 

ಕೋಶಗಳು  ಗುರಿಯಾದರೆ ಸಕ್ಕರೆ ಕಾಯಿಲೆ ಬರ ಬಹುದು .ಕರುಳಿನ ಮೇಲೆ 

ಧಾಳಿ ಆದರೆ ಆಗಾಗ್ಗೆ ರಕ್ತ ಭೇದಿ ಯಾಗುವ  ಅಲ್ಸರೆಟಿವ್ ಕೊಲೈಟಿಸ್ ನಂತಹ 

ಕಾಯಿಲೆ ಬರ ಬಹುದು .ಬಹು ಅಂಗಗಳನ್ನು ಕಾಡುವ  ಸಿಸ್ಟಮಿಕ್ ಲ್ಯುಪಸ್

ಏರಿಥಮಟೋಸಿಸ್ ಎಂಬ ಕಾಯಿಲೆ ಬರ ಬಹುದು .ಕೆಂಪು ರಕ್ತ ಕಣಗಳ 

ಮೇಲೆ  ಹಾವಳಿ ನಡೆದರೆ ಅವುಗಳ ಮರಣದಿಂದ ರಕ್ತ ಹೀನತೆ ಉಂಟಾಗ ಬಹುದು .


                 ಈ ಸ್ವಯಂ ನಿರೋಧಕ ಕಾಯಿಲೆಗಳು ಅಭಿವೃದ್ದಿ ಹೊಂದಿದ 

ರಾಷ್ಟಗಳಲ್ಲಿ ಹೆಚ್ಚು ಕಾಣಿಸಿ  ಕೊಳ್ಳುತ್ತಿವೆ.

ಶನಿವಾರ, ಡಿಸೆಂಬರ್ 12, 2015

ಸ್ಟೀರಾಯ್ಡ್ ಎಂಬ ಭೂತ

ಆ ಡಾಕ್ಟರಲ್ಲಿ ಹೋದರೆ ಎಲ್ಲದಕ್ಕೂ ಸ್ಟೀರಾಯ್ಡ್ ಕೊಡುವರು .ಅದನ್ನು ತಿಂದರೆ 

ಮತ್ತೆ ಮುಗಿಯಿತು ಎಂದು ಕೆಲ ಅನುಭವಿ ರೋಗಿಗಳು ಆಡಿ ಕೊಳ್ಳುವುದನ್ನು ನೀವು

ಕೇಳಿರ ಬಹುದು .ಇನ್ನು ಕೆಲವೊಮ್ಮೆ ಮಾಧ್ಯಮಗಳಲ್ಲಿ ಕ್ರೀಡಾ ಪಟು ಸ್ಟೀರಾಯ್ಡ್ 

ಸೇವಿಸಿ  ಪದಕ ಕಳೆದುಕೊಂಡು ಅನರ್ಹ ರಾದ  ವಾರ್ತೆ ಓದಿರ ಬಹುದು .

ಹಾಗಾದರೆ ಏನಿದು  ಸ್ಟೀರಾಯ್ಡ್?ಇದು ನಮಗೆ ವರವೇ ?ಶಾಪವೇ ?

                  ಸ್ಟೀರಾಯ್ಡ್ ಎಂದರೆ ಒಂದು ವಿಶಿಷ್ಟ ಸಾವಯವ ರಾಸಾಯನಿಕ ಘಟಕ 

.ಇದು ನಮ್ಮ ಶರೀರದ ಪ್ರತಿಯೊಂದು ಜೀವ ಕೋಶದಲ್ಲೂ ಅಡಕವಾಗಿರುವುದು ,

ಕೊಲೆಸ್ಟರಾಲ್ ಇದೆ ರಚನೆಯ ರಾಸಾಯನಿಕ .
                          
                         Image result for structure of steroids
                 
ಇದರಿಂದ  ಉತ್ಪತ್ತಿಯಾಗುವ  ರಸ ಧಾತುಗಳು (ಹಾರ್ಮೋನ್)ಗಳಾದ ಲೈಂಗಿಕ 

ಹಾರ್ಮೋನ್ ಗಳು  ಟೆಸ್ಟೋಸ್ಟೆರಾನ್ ಮತ್ತು  ಈಸ್ಟ್ರೋಜನ್ ಗಳು , ಅಡ್ರಿನಲ್ 

ಗ್ರಂಥಿಗಳಿಂದ ಉತ್ಪತ್ತಿಯಾಗುವ  ಲವಣ ನಿಯಂತ್ರಕ ಹಾರ್ಮೋನ್ ಮತ್ತು 

ಅತೀ ಮುಖ್ಯವಾದ ಕಾರ್ಟಿಸೋಲ್ .


ಟೆಸ್ಟೋಸ್ಟೆರಾನ್  ಗಂಡು ಹಾರ್ಮೋನ್ .ಇದರ ಅಥವಾ ಇದರಿಂದ ಜನಿತ 

ವಸ್ತುಗಳ ಸೇವನೆಯಿಂದ ಮಾಂಸ ಖಂಡಗಳು ಬೆಳೆದು ಬಲಶಾಲಿ ಆಗುವುವು .

ಇದೇ ಕಾರಣಕ್ಕೆ ಕ್ರೀಡಾ ಪಟುಗಳು ಇದನ್ನು ಸೇವಿಸಿ ಕೃತಕವಾಗಿ ತಮ್ಮ 

ಶಕ್ತಿ ಹೆಚ್ಚಿಸಿ ಕೊಳ್ಳುವರು .ಆದರೆ ಇದನ್ನು ಅದಿಕೃತವಾಗಿ  ನಿಷೇಧಿಸಲಾಗಿದೆ .

ಇಸ್ಟ್ರೋಜನ್ ಹೆಣ್ಣು ಹಾರ್ಮೋನ್ .ಹೆಂಗಸರಲ್ಲಿ ಹೆಚ್ಚು ಇರುವುದು .ಈ ಎರಡು 

ಲೈಂಗಿಕ ಹಾರ್ಮೋನ್ ಗಳೂ ಗಂಡು ಹೆಣ್ಣು ಇಬ್ಬರಲ್ಲೂ ಇದ್ದು ಅವುಗಳ 

ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ .ಆದುದರಿಂದ ಎಲ್ಲರೂ ಅರ್ಧ ನಾರೀಶ್ವರರೆ.
                                          
                                  

                             ಇನ್ನು ವೈದ್ಯ ಶಾಸ್ತ್ರದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ 

ಸ್ಟೀರಾಯ್ಡ್ ಕಾರ್ಟಿಸೋಲ್ ನಂತಹ ಅಡ್ರಿನಲ್ ಗ್ರಂಥಿ ಹಾರ್ಮೋನ್ ನ  ಮೌಲ್ಯ 

ವರ್ಧಿತ ವಸ್ತುಗಳು .ಪ್ರೆಡ್ನಿಸೋಲೋನ್, ದೆಕ್ಷಮೆಥಸೊನ್, ಬೀಟಾ ಮೆಥಸೋನ್ 

ಮೀಥೈಲ್ ಪ್ರೆದ್ನಿಸೋಲೋನ್  ಇತ್ಯಾದಿ ಬಳಕೆಯಲ್ಲಿ ಇರುವುವು.

                        ಇವುಗಳನ್ನು  ಅಸ್ಥಮಾ ,ಸಂಧಿವಾತ ,ಅಲರ್ಜಿ  ಮತ್ತು ಕ್ಯಾನ್ಸರ್ 

ಇತ್ಯಾದಿ ರೋಗಗಳಲ್ಲಿ ಬಳಸುವರು .ಇದು ಮುಲಾಮು ,ಸೇದುವ ಇನ್ಹೇಲರ್ 

,ಮಾತ್ರೆ ಚುಚ್ಚುಮದ್ದು ರೂಪದಲ್ಲಿಯೂ ಸಿಗುವುದು .

ವೈಜ್ಞಾನಿಕವಾಗಿ ಪರಿಣಿತ ವೈದ್ಯರ ಶಿಫಾರಸು ಮೇಲೆ ಇವನ್ನು ತೆಗೆದು ಕೊಳ್ಳ 

ಬೇಕು .ಯಾಕೆಂದರೆ ಅಡ್ಡ ಪರಿಣಾಮ ಇದೆ ಎಂದು ಔಷಧಿ ತೆಗೆದು  ಸೇವಿಸದೆ 

ಇದ್ದರೆ ಆಗುವ ಹಾನಿ ಹೆಚ್ಚು .ಅದೇ ರೀತಿ ಪರಿಣಾಮ ಇದೆ ಎಂದು ಅಡ್ಡ ಪರಿಣಾಮ 

ವನ್ನು ನಿರ್ಲಕ್ಷಿಸಿಸಿ ಔಷಧಿ ತೆಗೆದು ಕೊಳ್ಳುವುದೂ ತಪ್ಪು .

                         ತೂಕ ಹೆಚ್ಚುವುದು ,ಎಲುಬುಗಳು ಕ್ಷೀಣ ವಾಗುವುದು ,ಸಕ್ಕರೆ 

ಹತೋಟಿ ತಪ್ಪುವುದು ಇತ್ಯಾದಿ ಸ್ಟೀರಾಯ್ಡ್ ದೀರ್ಘ ಕಾಲ ಸೇವಿಸಿದರೆ 

ಉಂಟಾಗುವ ಅಡ್ಡ ಪರಿಣಾಮಗಳು .ಆದರೆ  ಇನ್ಹೇಲರ್ ,ಮುಲಾಮುಗಳಲ್ಲಿ ಇರುವ 

ಸ್ಟೀರಾಯ್ಡ್  ರಕ್ತ ಸೇರುವುದು ಅತೀ ಕಡಿಮೆ ಆದುದರಿಂದ ಕೆಟ್ಟ ಪರಿಣಾಮ ಕಡಿಮೆ .

    (ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಸೋಮವಾರ, ಡಿಸೆಂಬರ್ 7, 2015

ಸಾಮಾನ್ಯ ಶೀತ ಮತ್ತು ಕೆಲ ನಂಬಿಕೆಗಳು ಮತ್ತು ವಾಸ್ತವ

             ಸಾಮಾನ್ಯ ಶೀತ ಮತ್ತು ಕೆಲ ನಂಬಿಕೆಗಳು ಮತ್ತು ವಾಸ್ತವ
ಸಾಮಾನ್ಯ  ಶೀತ ಜ್ವರ (ಕಾಮನ್ ಕೋಲ್ಡ್ ) ದಿಂದ ಬಳಲುತ್ತಿದ್ದ  ಓರ್ವ ಮಹಿಳೆ 

ಡಾಕ್ಟ್ರೆ ನಾನು ಹಣ್ಣಿನ ರಸ ಬಿಸಿ ಮಾಡಿ ಕುಡಿಯ ಬಹುದೋ ಎಂದು ಕೇಳಿದರು .

ನಾನೆಂದೆ "ತಣ್ಣನೆ ರಸವನ್ನೇ ಕುಡಿಯಿರಿ ಬಿಸಿ ಮಾಡಿದರೆ ಜೀವಸತ್ವಗಳು ನಷ್ಟ 

ಪಡುವವು .'ಅದರಂತೆ ಬಹಳ ಮಂದಿ ಎಳನೀರನ್ನು ಬಿಸಿ ಮಾಡಿ ಕುಡಿಯುವರು .

ಏಳನೀರಿನಲ್ಲಿ  ವಾಡಿಕೆಯ ನಂಬಿಕೆಯಂತೆ ಔಷಧಿಯ ಗುಣಗಳೋ ,ಲವಣಾಂಶ 

ವೋ ಇವೆಯೆಂದು ದೃಡ ಪಟ್ಟಿಲ್ಲ .ಕುಡಿಯುವುದಿದ್ದರೆ ತಣ್ಣಗೆಯೇ ಕುಡಿಯಿರಿ .


            ಸಾಮಾನ್ಯ ಶೀತ  ಹೆಚ್ಚಾಗಿ   ರೈನೊ ವೈರಸ್ (ನಾಸಿಕ ವೈರಸ್),ಕೋರೋನಾ ವೈರಸ್ ಮತ್ತು ಆರ್ ಎಸ್ ವೈರಸ್ ಎಂಬ ರೋಗಾಣುವಿನಿಂದಬರುವುದು .ಸಣ್ಣನೆಯ ಜ್ವರ ತಲೆ ನೋವು .ಮೂಗಿನಿಂದ 

ನೆಗಡಿ ಸುರಿಯುವುದು .ಗಂಟಲು ಕಿರಿ ಕಿರಿ ,ಕೆಮ್ಮು ಇರ ಬಹುದು .ಮಲಗಿದಾಗ 

ಮೂಗಿನ ಸ್ರಾವ ಹಿಮ್ಮುಖ ಗಂಟಲಿಗೆ ಹರಿದು (ಹೆಚ್ಚಾಗಿ  ಎಳೆ ಮಕ್ಕಳಲ್ಲಿ )ಕೆಮ್ಮು 

ಗೊರ ಗೊರ ಉಂಟಾಗುವುದು .

                                     

     
ಸಾಮಾನ್ಯ ಶೀತ ಕ್ಕೆ ಆಂಟಿ ಬಯೋಟಿಕ್ ಪ್ರಯೋಜನ ಇಲ್ಲ .

ಆದರೂ ಬಹಳ ಮಂದಿ ಮಕ್ಕಳಿಗೆ ಆಂಟಿಬಯೋಟಿಕ್ ಔಷಧಿಗಳನ್ನುಕೊಡುವಂತೆ ಹೆತ್ತವರು ಒತ್ತಾಯಿಸುವರು .ಕೆಲವೊಮ್ಮೆ ತಾವೇ ಕೊಡುವರು .ಇದರಿಂದ ಹಾನಿಯೇ ಹೆಚ್ಚು .

ಎಳೆ ಮಕ್ಕಳ ಮೂಗು  ನೆಗಡಿಯಿಂದ ಮುಚ್ಚ್ಚಿ ಹೋಗುವುದರಿಂದ ಅವುಗಳನ್ನು 

ಸ್ವಚ್ಚ ಪಡಿಸುವುದು ಉತ್ತಮ . ಚಿಕ್ಕ ಸಿರಿಂಜ್ ಮೂಲಕ ಮೂಗನ್ನು ಸಕ್ಶನ್ 

ಮಾಡುತ್ತಾರೆ .ಅಲ್ಲದೆ ಮೂಗಿಗೆ ಸಾಮಾನ್ಯ  ಉಪ್ಪಿನ ದ್ರಾವಣ ದ (saline)

  ಹನಿಗಳು ಇಲ್ಲವೇ ಸ್ಪ್ರೇ  ಬಿಟ್ಟರೆ ನೆಗಡಿ ನೀರಾಗಿ ಬರುವುದು . 

 ಜ್ವರಕ್ಕೆ  ಸಾಮಾನ್ಯ ಪ್ಯಾರಸಿಟಮಾಲ್  ,ಸ್ವಲ್ಪ ದೊಡ್ಡ ಮಕ್ಕಳಿಗೆ ಇಬುಫ್ರೋಫೆನ್ ನಂತಹ ಸಿರಪ್ ಅಥವಾ ಮಾತ್ರೆ ಸಾಕು .

ಗಂಟಲು ಕಿರಿ ಕಿರಿ ಮತ್ತು ನೋವಿಗೆ ಗೆ  ಐಸ್ ತುಂಡುಗಳನ್ನು ಚೀಪಲು ಕೊಡ ಬಹುದು .(ಇದು ಕೂಡ ಸಾಮಾನ್ಯ ನಂಬಿಕೆಗೆ  ವಿರುದ್ದ ಅಲ್ಲವೇ ?)ನಾಲ್ಕು ವರ್ಷಕ್ಕಿಂತ ಕೆಳಗಿನ ಎಳೆ ಹಸುಳೆಗಳಿಗೆ  ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್ ಕೊಡದಿರುವುದೇ ಒಳ್ಳೆಯದು .ಒಂದು ವರ್ಷದ ಮೇಲಿನ ಮಕ್ಕಳಿಗೆ ಕೆಮ್ಮಿಗೆ ಜೇನು ತುಪ್ಪ ಕೊಡ ಬಹುದು .ನಾನು ಹೇಳಿದ ವಿಚಾರ ಸರಿಯೇ ಎಂದು ಪರಿಶೀಲಿಸಲು ಅಮೆರಿಕಾ ದೇಶದ ಪ್ರತಿಷ್ಠಿತ ರೋಗ ಹತೋಟಿ ಕೇಂದ್ರದ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ   https://www.cdc.gov/antibiotic-use/community/for-patients/common-illnesses/colds.html                             



        ಇನ್ನು ನಾವು ಆರಂಬಿಸಿದ ಹಣ್ಣಿನ ರಸಕ್ಕೆ ಬರೋಣ .ಹಣ್ಣನ್ನು ಇಡೀ 

ತಿನ್ನುವುದು ಎಷ್ಟೋ ಒಳ್ಳೆಯದು .ಯಾಕೆಂದರೆ ಅದರಲ್ಲಿ ಹಣ್ಣಿನ ಸಕ್ಕರೆಯೊಂದಿಗೆ 

ನಾರೂ ಹೊಟ್ಟೆಗೆ ಸೇರುವುದು .ನಾರಿನ ಅಂಶ ಆರೋಗ್ಯಕ್ಕೆ ಸಹಾಯಕಾರಿ .

ತಿನ್ನಲು ಅಶಕ್ತರು  ಮಾತ್ರ  ರಸ ಮಾಡಿ ಕುಡಿಯ ಬಹುದು .  
 ಶುದ್ದ ವಾದ ಐಸ್ ತಿಂದರೆ ಶೀತ ಬಾರದು ,ಶೀತದಿಂದ ಗಂಟಲು ಕಿರಿ ಆದರೆ ಐಸ್ ಚೀಪಬಹುದು ,ಇಲ್ಲಾ ಉಪ್ಪು ಬಿಸಿ ನೀರಲ್ಲಿ ಬಾಯಿ ಮುಕ್ಕುಳಿಸ ಬಹುದು

       ಬಾಲಂಗೋಚಿ:   ಶೀತಕ್ಕೆ ಇಂಗ್ಲಿಷ್ ನಲ್ಲಿ  ರನ್ನಿ (ರನ್ನಿಂಗ್ ಅಲ್ಲ ) ನೋಸ್

ಎನ್ನುವರು .ರನ್ನಿ ನೋಸ್ ಅಂಡ್ ಸ್ಮೆಲ್ಲಿ ಫೀಟ್ (ಓದುವ ಮೂಗು ಮತ್ತು ವಾಸನೆ 

ಯ ಕಾಲುಗಳು ) ಎಂಬ ತಮಾಷೆಯ ಪಡೆ ನುಡಿ ಇದೆ .

ಭಾನುವಾರ, ಡಿಸೆಂಬರ್ 6, 2015

ಬದಲಾಗುತ್ತಿರುವ ಹಿರಿಯ ರೋಗಿಗಳ ಆರೈಕೆ

                       


ಟಿವಿ ಧಾರವಾಹಿ ,ಮೊಬೈಲ್ ,ಮಕ್ಕಳ ಎಂಟ್ರನ್ಸ್ ಪರೀಕ್ಷೆ ಇತ್ಯಾದಿಗಳ 

ಭರಾಟೆಯಲ್ಲಿ ಮನೆಯಲ್ಲಿ ಹಿರಿಯರ ಬೇಕು ಬೇಡ ಕೇಳುವರಿಲ್ಲದಾಗಿದೆ.ಮಕ್ಕಳಿಗೆ 

ಸಣ್ಣ ಶೀತ ಜ್ವರವಾದರೂ ತಂದೆ ತಾಯಿಗಳು ಆಸ್ಪತ್ರೆಗೆ ಓಡಿ ಬರುವರು 

.ಮದುವೆಯಾದ  ಹೆಣ್ಣು ಮಕ್ಕಳು ಗರ್ಭಿಣಿ ಯಾದಾಗ  ಮಾಸ ಮಾಸ ತಪಾಸಣೆಗೆ 

ಪ್ರಸವ ಕ್ಕೆ  ಬರುವಾಗ ಹಲವು ನೆಂಟರು ಕಾಣ ಬರುವರು .ಜೊತೆಗೆ ಹಣ್ಣು ಹಂಪಲು ಇರುವುದು  .

ಅನುಕೂಲವಂತರ ಮನೆಯ ಹಿರಿಯರು ಆಸ್ಪತ್ರೆಯಲ್ಲಿ ದಾಖಲು ಆದರೆ ನೋಡ 

ಬರುವವರು ಕಡಿಮೆ .ಸಾಂಪತ್ತಿಕವಾಗಿ ಅನುಕೂಲ ಇಲ್ಲದವರೇ ವಾಸಿ .ಹಿರಿಯರ 

ಮೇಲೆ  ಅಲ್ಪ ಸ್ವಲ್ಪ ಗೌರವ ಪ್ರೀತಿ ಉಳಿದಿದೆ.ತುಂಬಾ ಅನುಕೂಲ ಇರುವವರು 

ಕೆಲಸದ ಆಳನ್ನು ಹಿರಿಯರ ದೇಖ ರೇಖೆಗೆ ಬಿಟ್ಟು ಹೋಗುವರು .ಹಿಂದೆಲ್ಲಾ 

ತುರ್ತು ವಿಭಾಗದಲ್ಲಿ ದಾಖಲಾದ ರೋಗಿಯ ಬಂಧುಗಳು ಆತಂಕದ ಮುಖ ಹೊತ್ತು 

ಹೊರಗಡೆ ಕಾಯುತ್ತಿರುವ ದೃಶ್ಯ ಸಾಮಾನ್ಯ ವಾಗಿದ್ದು , ರೌಂಡ್ಸ್  ಮುಗಿಸಿ ಬಂದ 

ವೈದ್ಯರಿಗೆ ಮುತ್ತಿಗೆ ಹಾಕುತ್ತಿದ್ದರು .ಈಗ ಮೊಬೈಲ್ ನಂಬರ್ ಕೊಟ್ಟು ಹೋದ 


ರೋಗಿಯ ಸಂಬಂಧಿಗಳನ್ನು  ವೈದ್ಯರು ಹುಡುಕಿ ಕೊಂಡು ಹೋಗ ಬೇಕಾದ ಪರಿಸ್ಥಿತಿ

ಬಂದಿದೆ.


ಮನೆಯಲ್ಲಿ ನಿಶ್ಚಯವಾದ ಮಕ್ಕಳ ಮದುವೆ ಸಮಯದಲ್ಲಿ ಅಜ್ಜನೋ ಅಜ್ಜಿಯೋ 

ಕಾಯಿಲೆ ಬಿದ್ದರೆ ಮಾತ್ರ ರಾಜೋಪಚಾರ ಸಿಗುತ್ತದೆ .ಆಸ್ಪತ್ರೆಯಲ್ಲಿ ಅವರಿಗೆ 

ಹಾಲು ಹಣ್ಣು ಹಂಪಲು ಯಥೇಚ್ಛ ಸರಬರಾಜು ಆಗುವುದು .ದಿನಾಲೂ ವೈದ್ಯರನ್ನು 

ಬಂದು ವಿಚಾರಣೆ ಮಾಡುವರು .ಮದುವೆ ಮುಗಿಯಿತೋ ಡಿಸ್ಚಾರ್ಜ್ ಮಾಡಿ 

ಮೂಲೆಗೆ ಎಸೆಯುವರು .

ಹಾಗೆಂದು ಮನೆಯ ಕಿರಿಯರು ಕೆಟ್ಟವರಲ್ಲ .ದೈವ ಭಕ್ತರು .ವಾರ ವಾರ ದೇವಸ್ಥಾನ 

ಕ್ಕೆ ಹೋಗುವರು ,ಪೂಜೆ ಪಾರಾಯಣ ಮಾಡುವರು .ದಾನ ಧರ್ಮ ಮಾಡುವರು .

 ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫಲವೇನು 

ಎಂದು ಅಂದು ದಾಸರು ಹಾಡಿದ್ದು ಇದಕ್ಕೇ ಇರಬೇಕು .

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನಮಗೆ  ಸಮಾಜದ ಧರ್ಮ ಪ್ರಜ್ಞೆಯ ನೈಜ 

ದರ್ಶನ ಆಗುವುದು .
                            


ರೋಗ ಬಂದು ಆಸ್ಪತ್ರೆಯಲ್ಲಿ ಇರುವಾಗ ಬಂಧು ಮಿತ್ರರು ಬಂದು ಶುಭ ಹಾರಿಸಿದರೆ 

ತಾವಿನ್ನೂ ಸಮಾಜಕ್ಕೆ ಬೇಕಾಗಿದ್ದೇವೆ ಎಂಬ ಭಾವವೇ ರೋಗ ಗುಣ ಮುಖವಾಗಲು

ಕಾರಣ ವಾಗ ಬಲ್ಲ್ಲುದು .ಇಲ್ಲದಿದ್ದರೆ ಯಾರಿಗೆ ಯಾರುಂಟು ಎರವಿನ ಸಂಸಾರ 

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಎಂಬ ವಾಕ್ಯ ನಮ್ಮನ್ನೇ ಉದ್ದೇಶಿಸಿ 

ಬರೆದಂತೆ ತೋರುವುದು .

  ಹಿರಿಯರ ಗೊಣಗಾಟ ತಾಳ ಲಾರದೆ  ವೈದ್ಯರ ಮುಂದೆ ತಂದು ಕುಕ್ಕಿ ನಿಮಗೆ 

ಏನು ವಕ್ಕರಿಸಿದೆಯೋ ಎಲ್ಲಾ  ಇಲ್ಲೇ ಕಕ್ಕಿ ,ಮತ್ತೆ ಮನೆಯಲ್ಲಿ ವಟ ವಟಾ ಎಂದು 

ನಮ್ಮ ತಲೆ ತಿನ್ನ ಬೇಡಿ ಎಂದು  ಕೋಪದಿಂದ ಗರ್ಜಿಸುವ ಮಕ್ಕಳನ್ನು ಹೆಚ್ಚಾಗಿ 

ಕಾಣುತ್ತಿದ್ದೇವೆ .ಪಾಪ ಆ ಹಿರಿಯರಿಗೆ ಹೇಳಲಾರೆ ನಾನು ತಾಳ ಲಾರೆ ಎಂಬ ಸ್ಥಿತಿ .


          ನಮ್ಮ ಅರ್ಥಿಕ ಅಭಿವೃದ್ದಿ ,ಜಾಗತೀಕರಣ ದ ಕೆಲವು ಪರಿಣಾಮ ಗಳು ಇವು .

ಇಲ್ಲಿ ಕಿರಿಯ ತಲೆಮಾರಿನವರನ್ನು ಕೆಟ್ಟದಾಗಿ ತೋರಿಸುವುದು ಸಾಧುವಲ್ಲ .

ಕಾಲದೊಡನೆ ಆಗುವ ಬದಲಾವಣೆ .ಎಲ್ಲಾ ಕೆಲಸಗಳಿಗೂ ಯಂತ್ರ .ವಾಹನ 

ಅವಲಂಬನೆ ಆದ ಮೇಲೆ  ಶರೀರ ಶ್ರಮ ಮತ್ತು  ನೋವು ಹಂಚಿಕೊಳ್ಳುವ 

ಮನಸ್ಸು ಬೇಡುವ ಹಿರಿಯರ ಆರೈಕೆ ತ್ರಾಸ ದಾಯಕವಾಗಿ ತೋರುವುದು .


ಶುಕ್ರವಾರ, ಡಿಸೆಂಬರ್ 4, 2015

ಅಪಸ್ಮಾರ ಅಥವಾ ಮೆದುಳಿನ ಜೀವ ಕೋಶಗಳ ಹರಾಕಿರಿ

ಮೆದುಳು ನಮ್ಮ ಶರೀರದ ಹೈ ಕಮಾಂಡ್ .ದೇಹದ ಎಲ್ಲಾ ಅಣು ಅಣುಗಳ

ಕಾರ್ಯವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವುದು .

ಮೆದುಳಿನ  ಜೀವಕೋಶಗಳ ಕಾರ್ಯ ಕೂಟದಲ್ಲಿ  ಚಲನ ಮೂಲ ಮತ್ತು ಗ್ರಹಣ

ಮೂಲ ಎಂಬ ಮುಖ್ಯ ಪಂಗಡಗಳಿವೆ .ಉದಾಹರಣೆಗೆ  ನಮ್ಮ ಕೈಯಲ್ಲಿ ಒಂದು

ಸೊಳ್ಳೆ ಕುಳಿತಾಗ ಸ್ಪರ್ಶ ಗ್ರಹಣ ನರಗಳು ಅದರ ಬಗ್ಗೆ ಸಂದೇಶವನ್ನು ಮೆದುಳಿನ

ಗ್ರಹಣ ಮೂಲ ಕೋಶಗಳಿಗೆ ರವಾನಿಸುವುವು .ಮೆದುಳಿನ ಚಲನ ಕೋಶಗಳು ಈ

ವಿಷಯ ತಿಳಿದು ಮರು ಸಂದೇಶವನ್ನು ಇನ್ನೊಂದು ಕೈಗೆ ಕಳುಸಿಸಿ ಸೊಳ್ಳೆಗೆ 

ಬಡಿದು  ಕೊಲ್ಲುವಂತೆ ಅದೇಶಿವುವು.ಇವಲ್ಲ ವ್ಯವಸ್ಥಿತವಾಗಿ ಶಿಸ್ತಿನಿಂದ  ನಡೆಯ

ಬೇಕು .ಶಿಸ್ತು ,ಲಯ  ತಾಳ ತಪ್ಪಿದರೆ ಬರುವುದು ಅಪಸ್ಮಾರ .


                        
    

 ಮೆದುಳಿನ  (ಗ್ರಹಣ ಅಥವಾ ಚಲನ ) ಕೋಶಗಳ ಅನಿಯಂತ್ರಿತ ಅಕಾಲಿಕ

ಲಯ ತಪ್ಪಿದ ಕಾರ್ಯ ಫಲ ವೇ ಅಪಸ್ಮಾರ .
           ಸಾಮಾನ್ಯವಾಗಿ ನಾವು ಕಾಣುವುದು  ಚಲನ ಮೂಲ ಅಪಸ್ಮಾರ .ಇದು   

ಹೆಚ್ಚಾಗಿ  ಬರುವುದು ಮೇಲ್ನೋಟಕ್ಕೆ ಯಾವುದೇ ಕಾರಣ ಇಲ್ಲದೆ .ಮೆದುಳಿನ

ಜೀವಕೋಶಗಳು ಯದ್ವಾತದ್ವಾ ಸಂದೇಶ ಗಳನ್ನು ಉಂಟುಮಾಡಿ ರವಾನಿಸಿದಾಗ

ಮೊದಲು ಪ್ರಜ್ಞೆ ತಪ್ಪಿ ಮಾಂಸಖಂಡಗಳು ಸೆಟೆದು ನಿಲ್ಲುತ್ತವೆ .ರೋಗಿ ನೆಲಕ್ಕೆ

ಉರುಳುವನು ..ಬಳಿಕ ಎಲ್ಲಾ ಮಾಂಸಖಂಡಗಳು ಸಂಕುಚನ ಮತ್ತು ವಿಕಸನ

ಗೊಳ್ಳುತ್ತವೆ .ಇದನ್ನೇ ಫಿಟ್ಸ್ ಎಂದು ಕರೆಯುವುದು .ರೋಗಿಯು ನಾಲಿಗೆ ಕಚ್ಚ


ಬಹುದು ಮತ್ತು  ಮೂತ್ರ ವಿಸರ್ಜನೆ ಮಾಡಿಕೊಳ್ಳ ಬಹುದು .ಇದಾದ ಕೆಲ

ಹೊತ್ತು  ಪ್ರಜ್ಞೆ ಇರದು .ಕ್ರಮೇಣ ಎಚ್ಚರ ಬರುವುದು .

       ಈ  ತರಹದ ರೋಗಿಗಳು ಕಂಡು ಬಂದರೆ  ಅವರನ್ನು ಒಂದು ಪಾರ್ಶ್ವಕ್ಕೆ

ತಿರುಗಿಸಿ ಮಲಗಿಸಿದರೆ  ಅಪ್ರಜ್ಞಾವಸ್ಥೆಯಲ್ಲಿ  ಬಾಯಿಂದ ನೀರು ಶ್ವಾಸನಾಳ

ಸೇರಿ ಉಸಿರುಗಟ್ಟದಂತೆ  ಮಾಡ ಬಹುದು .ಕೈಯಲ್ಲಿ ಕಬ್ಬಿಣದ ತುಂಡು ಇಡಲು

ಯತ್ನಿಸ ಬಾರದು .ಇದರಿಂದ ರೋಗಿಯು ತನಗೇ ಗಾಯ ಮಾಡಿ ಕೊಳ್ಳುವ


ಸಂಭವ ಇದೆ .ಕಬ್ಬಿಣದ ತುಂಡಿಗೂ ಅಪಸ್ಮಾರಕ್ಕೂ ಯಾವುದೇ ಸಂಭಂದ

ಇಲ್ಲ .
                                     

ಕೆಲವೊಮ್ಮೆ ಅಪಸ್ಮಾರ ಒಂದು ಕೈ ಅಥವಾ ಕಾಲಿಗೆ ಸೀಮಿತ ವಾಗಿರ ಬಹುದು .

ಇದನ್ನು ಸೀಮಿತ ಅಪಸ್ಮಾರ (Focal Epilepsy) ಎಂದು ಕರೆಯುವರು .ಇದರಲ್ಲಿ


ರೋಗಿಯು ಎಚ್ಚರವಾಗಿ ಇರುವನು .

ಮೆದುಳಿನ ಗಡ್ಡೆಗಳು ,ಸೋಂಕುಗಳು,ರಕ್ತದಲ್ಲಿ ಉಪ್ಪಿನ ಮತ್ತು ಸಕ್ಕರೆ ಅಂಶ ದ

ಏರು ಪೇರು ,ಅತೀವ ಮದ್ಯಪಾನ ,ಮದ್ಯ ವ್ಯಸನಿಗಳು ಹಠಾತ್ ಮದ್ಯ ಸೇವನೆ

ನಿಲ್ಲಿಸುವುದು  ಅಪಸ್ಮಾರಕ್ಕೆ ಕಾರಣವಾಗ ಬಹುದು . ಮೆದುಳಿನ 

ರಕ್ತಸ್ರಾವ ,ಅವಘಡ ಗಳಿಂದ ಮೆದುಳಿಗೆ ಆದ ಗಾಯ ಗಳೂ ಸಾಮಾನ್ಯ

ಕಾರಣಗಳು . ಮಕ್ಕಳಲ್ಲಿತೀವ್ರ  ಜ್ವರ ಅಪಸ್ಮಾರ ಉಂಟು ಮಾಡುವುದು .ಇವುಗಳ

ಮೂಲ ಕಾರಣಗಳಿಗೆ ಚಿಕಿತ್ಸೆ ಮಾಡ ಬೇಕು .

ಕೆಲವೊಮ್ಮೆ ಅಪಸ್ಮಾರವೋ ಅಥವಾ ಅಲ್ಲವೋ ಎಂದು ಸಂಶಯ ಇದ್ದಾಗ

ಮೆದುಳಿನ ಸಂದೇಶ ಮಾಪನ (ಎಲೆಕ್ಟ್ರೋಎನ್ಸೆಫಾಲೋಗ್ರಾಮ್ -ಇ ಇ ಜಿ )


ಮಾಡುವರು .

ತಲೆಯ ಸ್ಕ್ಯಾನ್ ಮಾಡ ಬೇಕಾಗಿಯೂ ಬರ ಬಹುದು .