ಬೆಂಬಲಿಗರು

ಭಾನುವಾರ, ಅಕ್ಟೋಬರ್ 25, 2015

ಕಣ್ಣಿದ್ದೂ ಕಾಣದ ಸ್ಥಿತಿ ಮೆದುಳಿನ ಅಂಧತ್ವ

ಕಣ್ಣಿದ್ದೂ ಕಾಣರು ,ಒಳಗಿನ ಕಣ್ಣನು ತೆರೆದು ನೋಡು ಇತ್ಯಾದಿ ನಾವು ಆಗಾಗ್ಗೆ 

ಕೇಳುತ್ತಿರುತ್ತೇವೆ.ಇದರ ವಾಸ್ತವ ಅಂಶ ಏನು ?ನಮ್ಮ ಕಣ್ಣುಗಳೇ ದೃಷ್ಟಿ ನೀಡಲು 

ಸಾಕೇ?

ನಮ್ಮ ಕಣ್ಣಿನ ಅಕ್ಷಿಪಟಲದ ಮೇಲೆ ಬಿದ್ದ ಬಿಂಬವು ಸಂದೇಶ ರೂಪದಲ್ಲಿ  ನರಗಳ 

ಮೂಲಕ ಮೆದುಳಿಗೆ ಸಾಗುವುದು .ಮೆದುಳಿನ ಹಿಂಬಾಗದಲ್ಲಿ  ದೃಷ್ಟಿ ವೀಕ್ಷಕ ಕೇಂದ್ರ 

ಇದೆ .ಇಲ್ಲಿ ಕಣ್ಣಿನಿಂದ ಬಂದ ಸಂದೇಶವನ್ನು ವಿಶ್ಲೇಷಿಸಿ ಕಂಡ ಬಿಂಬದ ದ ರೂಪ 

ಗ್ರಹಣ ಆಗುವುದು .

                                     

ಕಣ್ಣು ಸರಿ ಇದ್ದರೂ ಮೆದುಳಿನ ಈ ಭಾಗ ಸರಿ ಇಲ್ಲದಿದ್ದಲ್ಲಿ  ಮನುಷ್ಯ 

ಅಂಧನಾಗುವನು.ಇದನ್ನು ಮೆದುಳಿನ ಅಂಧತ್ವ ಎನ್ನುವರು (Cortical Blindness)

ಕೆಲವು ಪರೀಕ್ಷಣ ಗಳಿಂದ ಈ ಕುರುಡನ್ನು ಕಂಡು ಹಿಡಿಯ ಬಹುದು .ಉದಾ 

ಕಣ್ಣಿನ ಮೇಲೆ ಬೆಳಕು ಹಾಯಿಸಿದಾಗ ಕಣ್ಣ ಪಾಪೆ ಕುಗ್ಗುವುದು .ಕಣ್ಣಿನ ಮಸೂರ 

,ಅಕ್ಷಿಪಟ ಅಥವಾ ನರದ ತೊಂದರೆ ಇದ್ದರೆ ಈ ಪ್ರತಿಕ್ರಿಯೆ ಕಾಣಿಸದು .ಆದರೆ

ಮೆದುಳಿನ ಅಂಧತ್ವದಲ್ಲಿ  ಇದು ಅಭಾದಿತ ವಾಗಿರುವುದು .ಆದರೂ ಏನೂ 

ಕಾಣಿಸದು .ಇದನ್ನು ಮೆದುಳಿನ ತೊಂದರೆ ಎನ್ನಿರಿ ,ಒಳಗಿನ ಕಣ್ಣಿನ ತೊಂದರೆ 

ಎನ್ನಿರಿ .

ಮೆದುಳಿನ ರಕ್ತ ನಾಳದ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸ್ರಾವ ದಿಂದ 

ಉಂಟಾಗುವ  ಮೆದುಳಿನ ಆಘಾತ (ಸ್ಟ್ರೋಕ್) ಇದಕ್ಕೆ ಮುಖ್ಯ ಕಾರಣ .

ತಲೆಯ  ಸಿ ಟಿ ಅಥವಾ  ಎಂ ಆರ್ ಐ ಸ್ಕ್ಯಾನ್ ಮೂಲಕ ಇದನ್ನು  

ದೃಡೀಕರಿಸುವರು.




ಸಿ ಟಿ ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ರಕ್ತ ಹೆಪ್ಪು ಕಟ್ಟುವಿಕೆ


MRI ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ಆಘಾತ ಚಿತ್ರಣ .
(ಚಿತ್ರಗಳ ಮೂಲಗಳಿಗೆ ಅಭಾರಿ )

ಭಾನುವಾರ, ಅಕ್ಟೋಬರ್ 11, 2015

ತಂದೆಯ ನೆನಪು



ಅರಿವು ಬಂದಾಗ ದಿಂದ  ನನ್ನ ತಂದೆಯವರನ್ನು ನಾನು ನೆನಪಿಸಿ ಕೊಳ್ಳುವುದು 

ಓರ್ವ ಸ್ಥಿತ ಪ್ರಜ್ನ ಕರ್ಮಯೋಗಿಯಾಗಿ .ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ 

ಪಶುಗಳ ಆರೈಕೆಯಲ್ಲಿ ತೊಡಗಿಸಿ ಕೊಳ್ಳುವರು .ಅಡಿಗೆ ಮನೆಯಿಂದ ಪಶು ಆಹಾರ 

(ಮಡ್ಡಿ ಎನ್ನುತ್ತೇವೆ ) ದ ಪಾತ್ರೆಯನ್ನು ಒಂದು ಹೆಗಲಿಗೆ ಏರಿಸಿ ದನಗಳ ಕೊಟ್ಟಿಗೆಗೆ 

ಹೋಗಿ ಅವುಗಳ ಆರೈಕೆ ಮಾಡುವರು .ಅವರಿಗೆ ಅತೀ ಪ್ರಿಯವಾಗಿದ್ದ ಕೆಲಸ ಅದು .

ಆಗೆಲ್ಲ ಐದಾರು ದನಗಳೂ ,ಎರಡು ಎಮ್ಮೆ ಮತ್ತು ಎರಡು ಜತೆ ಹೋರಿಗಳೂ 

ಇರುತ್ತಿದ್ದವು  .ನನ್ನ ಬಾಲ್ಯದಲ್ಲಿ ಓಟದ ಕೋಣಗಳೂ ಇರುತ್ತಿದ್ದವು .ಹಲವು ಬಾರಿ 

ಬೆಳಗಿನ ತಿಂಡಿಗೆ ಕರೆಯುವಾಗ ಅವರ ಕೆಲಸ ಅಪೂರ್ಣವಾಗಿರುತ್ತಿದ್ದುದರಿಂದ 

ಅಸಹನೆಯ ಛಾಯೆ ಇರುತ್ತಿತ್ತು .

ಇದರ ನಡುವೆ ನಾವು ನಮ್ಮ ರಜೆ ಅರ್ಜಿ ,ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ 

ಮಾಡಿಸಲು ಹೋದರೆ ಕಣ್ಣು ಮುಚ್ಚ್ಚಿ ಸಹಿ ಮಾಡುವರು .ಒಂದೇ ಒಂದು ಸಾರಿ 

ಅಂಕ ಕಡಿಮೆ ಏಕೆ ಬಂತು .ಏಕೆ ಫೈಲ್ ಆದೆ ಅಂದವರಲ್ಲ .

 ತಿಂಡಿ ಕಾಫಿಯ ನಂತರ ಹಸು ಕರುಗಳನ್ನು ಮೇಯ ಬಿಟ್ಟು ತೋಟಕ್ಕೆ 

ಹೋಗುವರು .ಕಾರ್ಮಿಕರೊಡನೆ ತಾವೂ ದುಡಿಯುವರು ,ಅವರ ಉಡುಗೆ ಒಂದು 

ತುಂಡು ವಸ್ತ್ರ ಸೊಂಟಕ್ಕೆ  ಮತ್ತು ತಲೆಗೆ ಒಂದು ಬೈರಾಸಿನ ಮುಂಡಾಸು .


      ಮಧ್ಯಾಹ್ನ  ಮನೆಗೆ ಮರಳಿ ಸ್ನಾನ ,ಪೂಜೆ ,ಊಟ ಮತ್ತು ಸಣ್ಣ ನಿದ್ದೆ .ಮತ್ತೆ 

ಎದ್ದು  ತೋಟದತ್ತ .ಸಂಜೆ ಮರಳಿದಾಗ ಹಸು ಕರುಗಳು  ಗುಡ್ಡದಿಂದ ಮರಳಿ 

ಗೇಟ್ ನ ಹೊರಗೆ ಕಾಯುತ್ತಲಿರುವವು .ಅವುಗಳನ್ನು ಒಳ ಮಾಡಿ ಅವುಗಳ 

ಆರೈಕೆ .ಇಷ್ಟರಲ್ಲಿ ಮುಸ್ಸಂಜೆ .ಕೆಲಸದವರ ಲೆಕ್ಕ ಬರೆಯುವರು ,ಅವರ ಒಂದು 

ಟ್ರಂಕ್ ನಲ್ಲಿ ಲೆಕ್ಕ ಪುಸ್ತಕ ,ಪೆನ್ಸಿಲ್ ಇತ್ಯಾದಿ ಇರುತ್ತಿದ್ದುವು ,ಒಂದು ಕಾಲು 

ಪದ್ಮಾಸನ ,ಇನ್ನೊಂದು ಮೇಲಕ್ಕೆ ಮಡಿಸಿ ಅವರು ಕುಳಿತು ಲೆಕ್ಕ ಬರೆಯುತ್ತಿದ್ದುದು 

ಈಗಲೂ ಕಣ್ಣಿಗೆ ಕಟ್ಟಿದಂತಿದೆ .

ತಂದೆಯವರು ಮಕ್ಕಳಿಗೆ ಏಟು ಕೊಡರು ,ಬೆದರಿಸರು ,ತಾಯಿ ಶಿಕ್ಷಿಸುವಾಗ ನಾವು 

ರಕ್ಷಣೆಗೆ ಅವರತ್ತ ಧಾವಿಸುತ್ತಿದ್ದೆವು .ಅವರಿಗೆ ಕಿರಿ ಕಿರಿ ಎನಿಸುತ್ತಿತ್ತು ,

ರಾತ್ರಿ ತೋಟಕ್ಕೆ ಒಂದು ಸುತ್ತು ಬಂದು ಊಟ .ಆಮೇಲೆ ರೇಡಿಯೋದಲ್ಲಿ 

ಯಕ್ಷಗಾನ ತಾಳ ಮದ್ದಲೆ ಇದ್ದ ದಿನ ಆಸಕ್ತಿಯಿಂದ ಕೇಳುವರು ,ಮೊಮ್ಮಕ್ಕಳು 

ಇದ್ದಾಗ ಅವರಿಗೆ ಕತೆ ಹೇಳುವರು .

  ಸುತ್ತ ಮುತ್ತಲಿನ ಜಾತ್ರೆ ,ಭೂತ ಕೋಲ ಗಳಿಗೆ ಹೋಗುವಾಗ ಅವರೊಡನೆ 

ನಾವೂ ಹೋಗುತ್ತಿದ್ದೆವು .ಮಾಂಕಾಳಿ ಭೂತ ಮಕ್ಕಳೆಲ್ಲರೂ ಕ್ಷೆಮವೇ ಎಂದು 

ಕೇಳುವುದು .ಕೋಲದ ಸಮಯದಲ್ಲಿ ವಿದ್ಯಾಭ್ಯಾಸಕ್ಕಾಗಿ  ಊರಿಂದ ಹೊರಗೆ 

ಇರುತ್ತಿದ್ದ ಅಣ್ಣಂದಿರ ತಪ್ಪಿಗೆ ಕಾಣಿಕೆ ಹಾಕುತ್ತಿದ್ದರು .

ನಾನು ಮೊದಲ ಯಕ್ಷಗಾನ ಶ್ವೇತಕುಮಾರ ಚರಿತ್ರೆ ವಿಟ್ಲ ಜಾತ್ರೆಯಲ್ಲಿ 

ತಂದೆಯವರ ಜೊತೆಗೇ ನೋಡಿದ್ದು .ಆಗೆಲ್ಲಾ ವಿಟ್ಲ ಪುತ್ತೂರು ಜಾತ್ರೆಗೆ ಹೋದರೆ 

ಬೆಡಿಯ ನಂತರ ಯಕ್ಷಗಾನ ಬಯಲಾಟಕ್ಕೆ ಹೋಗಿ ರಾತ್ರೆ ಕಳೆದು ಬೆಳಗಿನ 

ಬಸ್ಸಿನಲ್ಲಿ ಮರಳುತ್ತಿದ್ದೆವು .

ಪುತ್ತೂರು ಜಾತ್ರೆಗೆ ಆರೇಳು ಮೇಳಗಳು ಏಕ ಕಾಲಕ್ಕೆ ಬಂದುದು ಇದೆ .ಈಗ 

ಒಂದು ಮೇಳವೂ ಬರುತ್ತಿಲ್ಲ .


   ತಂದೆಯವರು ಸುಮ್ಮನೆ ಪೇಟೆ ತಿರುಗುವರಲ್ಲ .ನಾವು ರಜೆಯಲ್ಲಿ ಅಜ್ಜನ 

ಮನೆಗೋ ಅಕ್ಕನ ಮನೆಗೋ ಹೋಗುವಾಗ ನಮಗೆ ದಾರಿ ಖರ್ಚಿಗೆ ಹಣ 

ಕೊಡುವರು ,ಯಾವಾಗಲೂ ಚಿಲ್ಲರೆ ತೆಗೆದುಕೊಂಡು ಹೋಗಲು ಹೇಳುವರು .ಚಿಲ್ಲರೆ 

ಹಣಕ್ಕೆ ಹೊಡಿ ಚುಂಗುಡಿ ಎನ್ನುತ್ತಿದ್ದರು ,ಪುತ್ತೂರು ಪೇಟೆಯಲ್ಲಿ ಬಸ್ ಸ್ಟಾಂಡ್ 

ಎದುರು ಜನತಾ ಫುಟ್ ವೇರ್ ಎಂಬ ಅಂಗಡಿ .ಅದರ ಧಣಿ ಒಬ್ಬ ಸಾಹೇಬರು .

ನಮಗೆ ಚಪ್ಪಲಿ ಬೇಕಾದಾಗ ಅವರ ಅಂಗಡಿಗೆ ಹೋಗಿ ಬೇಕಾದ್ದು ಕೊಂಡು ,ದುಡ್ಡು

ತಂದೆ ಕೊಡುತ್ತಾರೆ ಎಂದು ಬರುತ್ತಿದ್ದೆವು .ನಿಮ್ಮ ತಂದೆಯ ಹೆಸರು ವಿಳಾಸ ಏನು 

ಎಂದು ಅವರು ಕೇಳಿದ್ದಿಲ್ಲ .ತಂದೆಯವರು ಆ ಕಡೆ ಹೋದಾಗ ಸಾಲ ತಿರಿಸುವರು .

ನಂಬಿಕೆಯಲ್ಲಿ ನಡೆಯುತ್ತಿದ್ದ ವ್ಯವಹಾರಗಳು.

 ಮಕ್ಕಳು ಕಲಿತು ಡಾಕ್ಟರ ,ಇಂಜಿನಿಯರ್ ಆಗ ಬೇಕೆಂದು ಅವರು ಬಯಸಿದವರಲ್ಲ .

ವಕೀಲರು ಮತ್ತು ಅಧ್ಯಾಪಕರು ಎಂದರೆ ಅವರಿಗೆ ಗೌರವ ಇತ್ತು ,ಅವರ ಅಧ್ಯಾಪಕ 

ರಾಗಿದ್ದ ಕಾರಂತ ಮೇಸ್ಟ್ರು ಎಂಬವರು ಆಗಾಗ್ಗೆ ನಮ್ಮ ಮನೆಗೆ ರಾತ್ರಿ ಬಂದು 

ಒಂದು ದಿನ ಇದ್ದು ಹೋಗುತ್ತ್ತಿದ್ದರು ,ಆಗೆಲ್ಲ ದೂರದ ನೆಂಟರೂ ,ಅಷ್ಟೊಂದು 

ಅನುಕೂಲ ಇಲ್ಲದವರೂ ಬೇರೆಯವರ ಮನೆಗಳಿಗೆ ಹೋಗಿ ಆತಿಥ್ಯ 

ಸ್ವೀಕರಿಸುತ್ತಿದ್ದುದು ಸಾಮನ್ಯ.ಎಷ್ಟು ಬಡ ತನ ಇದ್ದರೂ ಅತಿಥಿಗಳು ಬಂದಾಗ 

ಯಾರೂ ಗೊಣಗುತ್ತಿದ್ದಿಲ್ಲ ,

ತಂದೆಯವರು ಅಡಿಕೆ ಮಾರಾಟ ಮಾಡಿದ ಹಣ ತರಲು ಮಂಗಳೂರಿಗೆ 

ಹೋಗುವ ಸಂಧರ್ಭ ಬೆಳಿಗಿನ ಮೊದಲನೇ ಬಸ್ ಹಿಡಿದು ಹೋಗುವರು .

ಮಂಗಳೂರು ಬಸ್ ಸ್ಟಾಂಡ್ ಹೋಟೆಲ್ ನಲ್ಲಿ  ಬನ್ಸ್ ಮತ್ತು ಚಹಾ ಸೇವಿಸುವರು .

ಹೋಟೆಲ್ ನಲ್ಲಿ ಅವರು ಯಾವಾಗಲೂ ಎರಡು ಚಹಾ ತರಿಸುವರು ,ಹಳ್ಳಿಯ 

ಲೆಕ್ಕದಲ್ಲಿ ಹೋಟೆಲ್ ನ ಒಂದು ಲೋಟ ಚಹಾ ಗಂಟಲು ಇಳಿಯುವಷ್ಟರಲ್ಲಿ ಮುಗಿದು 

ಹೋಗುತ್ತದೆ . ಆಮೇಲೆ ನಡೆದುಕೊಂಡು ಬಂದರು ಪ್ರದೇಶದಲ್ಲಿ ಅಡಿಕೆ ಮಂಡಿಗೆ 

ಹೋಗಿ ವ್ಯವಹಾರ ಮುಗಿಸಿ ಮರಳಿ ಬಸ್ ಸ್ಟಾಂಡ್ ಸಮೀಪದ ಗಣೇಶ ಭವನದಲ್ಲಿ 

ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿ ವಿರಮಿಸಿ ಮನೆಗೆ ಮರಳುವರು .ಮಂಗಳೂರಿಗೆ 

ಹೋಗುವ ಅಪ್ಪ ಚಿಕ್ಕಪ್ಪ ನವರಿಗೆ  ಮನೆಯವರೆಲ್ಲ ತಮ್ಮ ತಮ್ಮ ಭಾವಕ್ಕೆ  

ಸರಿಯಾದ ಸಾಮಗ್ರಿಗಳ ಪಟ್ಟಿ ಕೊಡುತ್ತಿದ್ದೆವು .ಅದಕ್ಕೆ ಮತ್ತು ಅವರು ಮಕ್ಕಳಿಗೆ 

ತರುತ್ತಿದ್ದ ಪೆಪ್ಪರ್ ಮಿಂಟ್ ಮತ್ತು ಚಾಕಲೇಟ್ ಗಳಿಗಾಗಿ ನಾವು ಕಾಯುತ್ತಿದ್ದೆವು ,


   ನಮ್ಮ ಮನೆಯಿಂದ ಬಸ್ ಮಾರ್ಗಕ್ಕೆ ಒಂದೂವರೆ ಮೈಲು ,ಗುಡ್ಡ ಹತ್ತಿ ಇಳಿಯ

ಬೇಕು .ಬೈರಿಕಟ್ಟೆ ಎಂಬಲ್ಲಿ ಬಸ್ ಹಿಡಿಯುತ್ತಿದ್ದೆವು ,ಬಹಳಷ್ಟು ಸಾರಿ ನಾವು ಗುಡ್ಡೆ 

ಶಿಖರದಲ್ಲಿ ಇರುವಾಗ ಉದ್ದೇಶಿತ ಬಸ್ ಹೋಗುವುದು ಕಾಣಿಸುವುದು .ಮತ್ತೆ 

ಬಸ್ಸಿಗೆ ಗಂಟೆ ಗಟ್ಟಲೆ ಕಾಯ ಬೇಕು .ಅಲ್ಲಿ ಶಂಕರ ನಾರಾಯಣ ರಾಯರೆಮ್ಬುವರ

ಹೋಟೆಲ್ ಇತ್ತು .ತಂದೆಯವರ ಆಪ್ತರು .ಅಲ್ಲಿಯ ಕಾರದ ಕಡ್ಡಿ ,ಅವಲಕ್ಕಿ ಚಹಾ 

ತಂದೆಯವರಿಗೆ ಬಹಳ ಪ್ರೀತಿ .ನಾವು ಅವರೊಂದಿಗೆ ಇದ್ದರೆ ನಮಗೂ ತಿನಿಸುವರು .

     ತಮ್ಮ ಅರೋಗ್ಯ ಕೈಕೊಡುವ ವರೆಗೂ  ಕೃಷಿ ಯನ್ನು ಅಚ್ಚು ಕಟ್ಟಾಗಿ 

ನಡೆಸಿದರು .ನಾವೆಲ್ಲಾ ಕಲಿತು ಬೇರೆ ಬೇರೆ ಉದ್ಯೋಗ ಹಿಡಿದು ಹೋದ ಮೇಲೆ 

ಭೂಮಿ ಮಾರಿದೆವು .ತಂದೆಯವರಿಗೆ ನೀರು ಬಿಟ್ಟ ಮೀನಿನಂತೆ ಆಯಿತು .ಅಲ್ಪ 

ಸಮಯದಲ್ಲಿಯೆ ಮೆದುಳಿನ ರಕ್ತ ಸ್ರಾವದಿಂದ ಇಹಲೋಕ ತ್ಯಜಿಸಿದರು .

 ತಂದೆಯವರ ಜ್ಞಾಪಕ ಬರುವಾಗ  ಕರ್ಮಯೋಗಿಯ ಚಿತ್ರಣ ಕಣ್ಣ ಮುಂದೆ 

ಬರುತ್ತದೆ .

ಸಂತೋಷದಿಂದ ಅತಿಯಾಗಿ ಹಿಗ್ಗಿದುದನ್ನೂ ,ದುಃಖ ದಿಂದ ಕುಗ್ಗಿ ದ್ದನ್ನೂ 

ತಂದೆಯವರಲ್ಲಿ ನಾವು ಕಂಡದ್ದಿಲ್ಲ .ಪಶುಪಾಲನೆ ಮತ್ತು ಕೃಷಿ ,ಸಣ್ಣ ಸಣ್ಣ 

ಸಂತೋಷಗಳಲ್ಲಿ ಸಂತೃಪ್ತಿ ಪಟ್ಟವರು.