ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 30, 2013

ಮೊಬೈಲ್ ಆವಾಂತರಗಳು

                               







 ಚರವಾಣಿಯಿದ್ದವರು  ಬೇಡದಾ ಕರೆಯ ಕರಕರೆಗೆ ಬೆಚ್ಚಿದೊಡೆ೦ತಯ್ಯಾ

ಕರೆದುಮಾತನಾಡದವರೂ ತಾಸು ಗಟ್ಟಲೆ ಫೋನಿಸುವರು

ನೂತನ ಪರಿಕರಗಳು ವರವೋ ಶಾಪವೋ ಅರಿಯದಾದೆನಯ್ಯಾ

ಕೂಡಲ ಸಂಗಮ ದೇವಾ

ನಿನ್ನ ಪೂಜಿಸುವ ಅರ್ಚಕನ ಕೈಲೂ ಜಂಗಮವಾಣಿ , ಏನೆಂಬೆ ಜಗದ ಪರಿಗೆ .



                                            ನಾನೊಬ್ಬ ಸಾದಾರಣ  ಪ್ರಾಕ್ಟೀಸ್ ಇರುವ ವೈದ್ಯ. ಎಲ್ಲರಂತೆ ನನ್ನಲ್ಲೂ ಒಂದು ಮೊಬೈಲ್

ಫೋನ್ ಇದೆ.ಬರುವ ರೋಗಿಗಳು ಕೆಲವರು ಚರವಾಣಿ ನಂಬರ್ ಕೇಳಿ ತೆಗೆದು ಕೊಳ್ಳುವರು.ಅತೀ ಅವಶ್ಯ ಇದ್ದರೆ ಮಾತ್ರ

ಉಪಯೋಗಕ್ಕೆ ಎಂಬ ಕಂಡೀಶನ್ ಅವರೇ ಒಪ್ಪಿ ಕೊಳ್ಳುವರು .ಉಳಿದಂತೆ ನಮ್ಮ  ಸ್ಥಿರ ವಾಣಿ ಯನ್ನುಆಸ್ಪತ್ರೆ ಅವಧಿಯಲ್ಲಿ

ಸಪರ್ಕಿಸ ಬಹುದು.ಆದರೆ  ಆಗುವುದು ಬೇರೆ.

ಕೆಲವು  ಚರವಾಣಿ ಸಂಭಾಷಣೆ ಈ ತರಹ ಇರುತ್ತದೆ ,  " ದಾಕ್ತ್ರೆ ನೀವು ಮೊನ್ನ್ನೆ ಕೊಟ್ಟ ಹಳದಿ ಮಾತ್ರೆ ಇನ್ನು ಒಂದು ಮಾತ್ರ

ಉಳಿದಿದೆ ,ನಾಳೆ ಏನು ಮಾಡಲಿ ?"

"ನೀವು ನಾಳೆ ಹನ್ನೆರಡು ಗಂಟೆಗೆ ಇದ್ದೀರಾ ?"

"ಒಂದು ವಾರದಿಂದ ಹಸಿವು ಸ್ವಲ್ಪ ಕಡಿಮೆ ,ನಿಮ್ಮನ್ನು ಬಂದು ನೋಡಲೋ ?"

"ನೀವು ಕೊಟ್ಟ ಔಷಧಿ ಇನ್ನೂ ತೆಗೆದುಕೊಂಡಿಲ್ಲ ,ಜ್ವರ ಹಾಗೆಯೇ ಇದೆ ಏನು ಮಾಡಲಿ ?"

ಈ  ತರಹದ ಕಾಲ್ ಗಳು  ನಾನು ಐ ಸಿ ಯು ನಲ್ಲಿ  ಸೀರಿಯಸ್ ರೋಗಿಯನ್ನು ನೋಡುತ್ತಿರುವ ವೇಳೆ ,ಡ್ರೈವ್ ಮಾಡುವಾಗ

ಮುಂಜಾನೆ ಸ್ನಾನ ಅಥವಾ ಅಧ್ಯಯನ ಮಾಡುವ ವೇಳೆ ಬರುತ್ತವೆ .ಫೋನಾಯಿಸುವವರಿಗೆ ತಾವು ಮಾಡುತ್ತಿರುವ

ಅನಾನುಕೂಲತೆ ಯ ಬಗ್ಗೆ  ಅರಿವೇ ಇರುವುದಿಲ್ಲ .ದುರದ್ರುಷ್ಟವಶಾತ್  ಈ ತರಹ ಮಾಡುವವರು ವಿದ್ಯಾವ೦ತರೆ.

ಮೊನ್ನೆ ಒಬ್ಬರಿಗೆ ಹೇಳಿದೆ ,ನೀವು ಇಂತಹ ವಿಷಯಗಳನ್ನು  ಆಸ್ಪತ್ರೆಯ ಸ್ಥಿರವಾಣಿ ಗೆ  ಸಂಪರ್ಕಿಸಿದರೆ ಒಳಿತಲ್ಲವೇ ಎಂದು .

ಅಷ್ಟಕ್ಕೆ ಅವರಿಗೆ ಕಂಡಾಬಟ್ಟೆ ಸಿಟ್ಟು.ಚರವಾಣಿಯಿದ ಸ್ತಿರ ಸ್ನೇಹಕ್ಕೆ ಬಂತಯ್ಯ ಕುತ್ತು !

ಇನ್ನು ಡಾಕ್ಟರ ಎಂದರೆ ಹಣವಂತರು ಎಂದು ಕೊಂಡು ಕಾರ್ ,ಆಸ್ತಿ  ಮತ್ತು ಹಾಲಿಡೇ ರೆಸಾರ್ಟ್ಸ್ ಮಾರಾಟ ಮಾಡುವವರ

ಕಾಟ ಬೇರೆ ಇರುತ್ತದೆ .

ನಡುವೆ ರಾಂಗ್ ನಂಬರ್ ಗಳು

ಇವುಗಳೆನ್ನೆಲ್ಲಾ ಸಹಿಸುವಾಗ  ಇದು ವರವೋ ಶಾಪವೋ ಎಂಬ ಜಿಜ್ಞಾಸೆ

( ಚಿತ್ರದ ಮೂಲ ವಿಕಿಪೀಡಿಯಕ್ಕೆ ಆಭಾರಿ.)

ಭಾನುವಾರ, ಸೆಪ್ಟೆಂಬರ್ 29, 2013

ಲವ್ ಇನ್ ಟೋಕಿಯೋ

೧೯೬೬ ರಲ್ಲಿ ಬಂದ ಹಿಂದಿ ಸಿನಿಮಾ  ಲವ್ ಇನ್ ಟೋಕಿಯೋ ಬಹಳ ಜನಪ್ರಿಯ 

ವಾಯಿತು. ಆಶಾ ಪರೇಖ್ ಮತ್ತು ಜಾಯ್ ಮುಖರ್ಜಿ ಮುಖ್ಯ ಪಾತ್ರದಲ್ಲಿ ಇದ್ದರು .

ಅದರಲ್ಲಿನ  ಹಾಡುಗಳೆಲ್ಲ ಹಿಟ್ ಆದುವು .ಸಯನೋರ ಸಯನೋರ ,ಓ ಮೇರೆ 

ಶಹೆಕುಬಾನ್ ಎಲ್ಲ್ಲರ ಬಾಯಲ್ಲಿ ಕೇಳಿ ಬರುತ್ತಿದ್ದುವು.
                                      

ಈ ಚಿತ್ರದಲ್ಲಿ ನಾಯಕಿ ಕೇಶ ಬಂಧನಕ್ಕೆ ಬಳಸಿದ ಸಾಧನ ಲವ್ ಇನ್ ಟೋಕಿಯೋ 

ಎಂದು ಪ್ರಸಿದ್ಧವಾಯಿತು .ಎರಡು  ಕಡೆ ಪ್ಲಾಸ್ಟಿಕ್ ಗೋಲಿಗಳು ,ನಡುವೆ ಕೇಶ ಬಂಧ 

ದಾರ .  ನಮಗೆ ಈ ಹೆಸರು ಏಕೆ ಬಂತು ಎಂಬ ಅರಿವು ಇರಲಿಲ್ಲ .ಅದು ನಮ್ಮ 

ಬಾಯಲ್ಲಿ  ಲವಿನ್ ಟಕಿ ಆಯಿತು .ಒಮ್ಮೆ ನನ್ನ ತಂಗಿ ತಂದೆಯವರು ಪೇಟೆಗೆ 

ಹೋಗುವಾಗ ತನಗೆ ಒಂದು ಲವಿನ್ ಟಕಿ ತರಳು ಹೇಳಿದಳು .ತಂದೆಯವರು 

ಅಂಗಡಿಗೆ ತಲಪುವಾಗ ಅವರ ಬಾಯಲ್ಲಿ ಅದು ಟ೦ಗ್ ಟಕಿ ಆಯಿತು .ಕೂದಲಿಗೆ 

ಸಿಕ್ಕಿಸುವ  ಸಾಧನ ಎಂದು ಹೇಳಿದ್ದರಿಂದ ಸರಿಯಾದ ವಸ್ತುವೇ ಮನೆಗೆ ಬಂತು.

 ಈ ಚಿತ್ರದ ಒಂದು ಮಧುರ ಗಾನ ಆಲಿಸಲು
http://www.youtube.com/watch?feature=player_detailpage&v=Lv5StHC5OH8

ಶನಿವಾರ, ಸೆಪ್ಟೆಂಬರ್ 28, 2013

ಮುಂಜಾನೆ ವಾಕಿಂಗ್ ಹೊರಟಾಗ ಕಂಡಿದ್ದು

ವರುಣ  ನೀರ ಸಾಲದ ಅಸಲು ಮಳೆಯಾಗಿ ನೀಡಿ ಬಡ್ಡಿ ಇಬ್ಬನಿ ರೂಪದಲ್ಲಿ ಹಿಂತಿರಿಗಿಸುತ್ತಿದ್ದ

ದೂರದ ಕಾಡಿನಲ್ಲಿ ಮರಗಳು ಮಂಜಿನ ಮುಸುಕು ಹೊದೆದು ಮಲಗಿದ್ದವು .


ಹಕ್ಕಿಗಳು ಮರಿಗಳಿಗೆ ಮಗ್ಗಿ ಪಾಠ ಮಾಡುತ್ತಿದ್ದವು .



ಗಡಿಯಾರದ ಅಂಗಡಿ ಗಂಟೆಗಳಂತೆ ಒಂದೊಂದೇ ಕೋಳಿಗಳು ಅಲಾರಂ ಕೂಗುತ್ತಿದ್ದವು.


ಪೆಟ್ರೋಲ್  ಬ೦ಕಿನಲ್ಲಿ ಮಲಗಿದ್ದ ಬಸ್ ಗಳು ಎದ್ದು  ಮೈಮುರಿದು ಓಡಿದವು .


ಮನೆಗಳಿಂದ ಒಗ್ಗರಣೆ ಪರಿಮಳ ,ಮಿಕ್ಷಿಗಳ ತಳಮಳ ,

ದೇವಳದ ಸುಪ್ರಭಾತ , ರೇಡಿಯೋ ಸಂಗೀತ ಗಳ

ಮಿಶ್ರಣ   ಹಾಲು ಪತ್ರಿಕೆಯವರು ಸೂರ್ಯನಿಗೆ 

ಬೆಂಗಾವಲು ಮೇಳ .




ಮಂಗಳವಾರ, ಸೆಪ್ಟೆಂಬರ್ 24, 2013

ಸಂಗೀತ ಪ್ರಧಾನ ಚಲನಚಿತ್ರಗಳು

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ  ಗಾನರಸಂ ಪಾಹಿನಿ (ಸಂಗೀತ  ಶಿಶು ,ಪ್ರಾಣಿ  ಮತ್ತು ಹಾವುಗಳಿಂದಲೂ


ಅಸ್ವಾದಿಸಲ್ಪಡುತ್ತದೆ) ಇದು ೧೯೭೯ರಲ್ಲಿ ತೆರೆಕಂಡ ಸೂಪರ್ ಹಿಟ್ ತೆಲುಗು ಚಿತ್ರ ಶಂಕರಾಭರಣಂ ನ


ಆರಂಭ ನುಡಿಗಳು .ಕೆ ವಿ ಮಹಾದೇವನ್ ಅವರ ಸಂಗೀತ .ಚಿತ್ರ ಪೂರ್ಣ ಶಾಸ್ತ್ರಿಯ ನೆಲೆಯ ಹಾಡುಗಳು

                      .ಎಸ್ ಪಿ ಬಿ ,ಎಸ ಜಾನಕಿ ಹಿನ್ನಲೆ ಗಾಯಕಿಯರು
                                               

 1985 ರಲ್ಲಿ ತೆರೆ ಕಂಡ ತಮಿಳ್ ಚಿತ್ರ ಸಿಂಧು ಭೈರವಿ .ಖ್ಯಾತ ನಿರ್ದೇಶಕ  ಕೆ ಬಾಲಚಂದರ್ ಅವರ ಈ ಚಿತ್ರಕ್ಕೆ


ಸಂಗೀತ ಕೊಟ್ಟವರು ಇಳಯರಾಜ .ಒಳ್ಳೆಯ ಹಾಡುಗಳಿವೆ .ಯೇಸುದಾಸ್ ,ಚಿತ್ರಾ ಅವರ ಕೊರಳು .
                                        

1986 ಕನ್ನಡದಲ್ಲಿ   ಮಲಯ ಮಾರುತ  ಚಿತ್ರ ಬಂತು.ವಿಜಯ ಭಾಸ್ಕರ್ ಸಂಗೀತದ ಈ ಚಿತ್ರದಲ್ಲಿ ಏಸುದಾಸ್ ವಾಣಿ

ಜಯರಾಂ ಹಾಡಿದ ಇಂಪಾದ ಗೀತೆಗಳಿವೆ
                                

1990 ರಲ್ಲಿ ಬಂದ ಮಲಯಾಳಂ ಚಿತ್ರ ಹಿಸ್ ಹೈ ನೆಸ್ ಅಬ್ದುಲ್ಲ  ಸಂಗೀತ ಪ್ರಿಯರು ಮಿಸ್ ಮಾಡಿಕೊಳ್ಳ ಬಾರದ

ನಿರ್ಮಾಣ.ಅಭಿನಯ ಕತೆ ಸಂಗೀತ ಎಲ್ಲಾ  ಅತ್ಯುತ್ತಮ .ರವೀಂದ್ರನ್ ಅವರ ಸಂಗೀತ ದಲ್ಲಿ  ಹಾಡಿದವರು ಎಂ ಜಿ

ಶ್ರೀಕುಮಾರ್ ,ಏಸುದಾಸ್ ,ನೆಯ್ಯತ್ತಕೆರ ವಾಸುದೇವನ್ .೧೯೯೧ರಲ್ಲಿ ತೆರೆ ಕಂಡ ಭರತನ್ ಇಂತಹದೇ ಇನ್ನೊಂದು

ಕೊಡುಗೆ .ಮೇಲಿನ ಎರಡು ಚಿತ್ರಗಳ ನಿರ್ಮಾಪಕರು ನಟ ಮೋಹನಲಾಲ್ .ನಿರ್ದೇಶನ ಸಿಬಿ ಮಲಯಿಲ್ .ಮಲಯಾಳದಲ್ಲಿ

ಇದಕ್ಕೂ ಮೊದಲು ಸ್ವಾತಿ ತಿರುನಾಳ್ ಎಂಬ ಸಂಗೀತ ಪ್ರಧಾನ ಚಿತ್ರ ಬಂದಿತ್ತು .ಅನಂತ್ ನಾಗ್ ನಾಯಕ.ಆದರೆ

ಕತೆಯ ಹಂದರ ದುರ್ಬಲವಾಗಿತ್ತು. ಮಲಯಾಳ ಚಲನಚಿತ್ರ ಹಾಡುಗಳು ಶಾಸ್ತ್ರಿಯ ಸಂಗೀತ ಮೂಲದವು ಹೆಚ್ಚು.ಚಿತ್ರ೦,

ಸರ್ಗಂ ,ಆರನ್ ತಂಬುರಾನ್ ಚಿತ್ರಗಳಲ್ಲಿ ಕ್ಲಾಸಿಕಲ್ ಹಾಡುಗಳಿವೆ .

                 

ಆಂಟಿಬಯೋಟಿಕ್ ಮತ್ತು ಮನುಕುಲ ಎರಡನ್ನೂ ಉಳಿಸೋಣ

ರೋಗಾಣು ವಿರೋಧಿ ಆಂಟಿಬಯೋಟಿಕ್ ಗಳು  ಮನುಕುಲವನ್ನು ರೋಗಗಳಿಂದ ರಕ್ಷಿಸಿದವು .ಗಂಭೀರವಾದ ಕಾಯಿಲೆಗಳಾದ

ಕ್ಷಯ , ನ್ಯುಮೋನಿಯಾ ,ಟೈಫಾಯಿಡ್ ,ಗುಹ್ಯ ರೋಗಗಳಿಗೆ ತಕ್ಕ ಔಷಧಗಳು ಬಂದು ಕೋಟ್ಯಂತರ ಜೀವಗಳು ಉಳಿದುವು .


ಆದರೆ ಇತ್ತೀಚಿಗೆ  ರೋಗಾಣುಗಳು ,ಶಿವನಿಂದ ವರ ಪಡೆದ ರಾಕ್ಷಸರಂತೆ , ಹೊಸ ರೂಪದಲ್ಲಿ ಬರುತ್ತಿವೆ .ಯಾವ

ಆಂಟಿಬಯೋಟಿಕ್ ಗಳೂ ಇವನ್ನು ಕೊಲ್ಲಲಾರವು .ಇವು ಉಂಟು ಮಾಡುವ ಸಣ್ಣ  ಮೂತ್ರದ ಸೋಂಕು (urinary infection)


ನ್ಯುಮೋನಿಯಾ ,ಕರುಳ ಸೋಂಕುಗಳು ರೋಗ ಪ್ರತಿರೋಧ ಕ್ಷಮತೆ ಇರುವವರಲ್ಲೂ  ಪ್ರಾಣಾಂತಿಕ  ಪರಿಸ್ತಿತಿ  ಉಂಟು

ಮಾಡುತ್ತಿವೆ .ಶಕ್ತಿಶಾಲೀ  ಆಂಟಿಬಯೋಟಿಕ್ ಗಳೂ ಇವುಗಳ  ಮುಂದೆ ಸೋಲುತ್ತಿವೆ .

  ಇದು  ಸ್ಪೋಟಿಸಲು ಕಾಯುತ್ತಿರುವ   ಟೈಮ್ ಬಾಂಬ್ 

   ಅಮೇರಿಕಾ ದೇಶದ  ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್  ಈ ವಿಷಯ ವನ್ನು ಗಂಭೀರವಾಗಿ ತೆಗೆದುಕೊಂಡು  ಇದನ್ನು

ಎದುರಿಸುವ ಮಾರ್ಗೋಪಾಯ ಗಳನ್ನು ಸೂಚಿಸಿದೆ .


ಈ  ಸಮಸ್ಯೆ ಬಂದುದೇಕೆ ?

೧ ರೋಗಾಣುಗಳು  ರೂಪ ರಚನೆ ಬದಲಿಸಿ ಕೊಂಡು ಬರುತ್ತಿರುವುದು

೨  ಯದ್ವಾ ತದ್ವಾ ಆಂಟಿಬಯೋಟಿಕ್ ಬಳಕೆ  .  ಅನಾವಶ್ಯಕವಾಗಿ   ಆಂಟಿಬಯೋಟಿಕ್  ಉಪಯೋಗ .ಉದಾ :  ಶೇಕಡಾ  

೯೦ ಕ್ಕಿಂತಲೂ ಅಧಿಕ  ಶೀತ  ಜ್ವರ ,ಸೈನಸೈಟಿಸ್  ಸ್ಯಯಂ ಶಮನ ವಾಗುವ  ವೈರಸ್ ಜನ್ಯ ಕಾಯಿಲೆಗಳು .ಇವುಗಳಿಗೆ

ಬ್ಯಾಕ್ಟೀರಿಯಾ ನಿರೋಧಕ ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಬಳಸುವರು .ಅಂತೆಯೇ ಹೆಚ್ಚಿನ ವಾಂತಿಭೇಧಿ

ಕಾಯಿಲೆಗಳಲ್ಲಿ  ಜಲಮರುಪೂರಣ  ಚಿಕಿತ್ಸೆ ಮಾತ್ರ ಸಾಕು .ಆದರೂ ವೈದ್ಯರೂ ,ರೋಗಿಗಳೂ  ಎಲ್ಲಾ ಕಡೆ  ಆಂಟಿಬಯೋಟಿಕ್

ದುರುಪಯೋಗ (abuse)ಮಾಡಿ  ಈಗ  ಅತೀ ಅವಶ್ಯಕತೆ ಇರುವಲ್ಲ್ಲಿ  ಅವು ಕ್ರಿಯಾ ಹೀನ ವಾಗುವ ಸ್ತಿತಿ ಬಂದಿದೆ .

೩.  ಮಾಂಸಕ್ಕಾಗಿ ಸಾಕುವ  ಪ್ರಾಣಿ ಪಕ್ಷಿಗಳೂ  ಆಂಟಿಬಯೋಟಿಕ್ ಗಳ  ಬಳಕೆಯಿಂದ ತಮ್ಮಲ್ಲ್ಲಿ  ರಾಕ್ಷಸೀ ಶಕ್ತಿಯ

ರೋಗಾಣುಗಳನ್ನು  ಬೆಳೆಯಬಿಟ್ಟು    ಸೇವಿಸಿದ ಮನುಷ್ಯರಲ್ಲಿ  ಔಷಧಿಗೆ  ನಾಟದ ರೋಗಗಳನ್ನು ಉಂಟು ಮಾಡುತ್ತಿವೆ

೩  ಅತಿಯಾದ ಸೂಕ್ಶ್ಮಾಣು  ನಿರೋಧಕಗಳ  ಬಳಕೆ .ಉದಾಹರಣೆಗೆ  ಸೋಪ್ ,ಹಲ್ಲುಜ್ಜುವ ಪೇಸ್ಟ್ ,ಪಾತ್ರೆ ತೊಳೆಯುವ

ದ್ರಾವಣದಲ್ಲಿ  .ಇದರಿಂದ  ಶರೀರದ ಒಳ್ಳೆಯ ಮತ್ತು ನಿರುಪದ್ರವೀ  ಬ್ಯಾಕ್ಟೀರಿಯಾ ಗಳು ನಾಶ ಹೊಂದಿ ರೋಗಾಣುಗಳು

ಅಟ್ಟಹಾಸ ಮಾಡುವ ಸನ್ನಿವೇಶ ಸೃಷ್ಟಿ ಆಗುತ್ತವೆ .ಜಾಹೀರಾತುಗಳಲ್ಲಿ ಇಂತಹ ಉತ್ಪನ್ನಗಳ ಬಗ್ಗೆ  ನೋಡಿ ನೀವೂ

ಮರುಳಾಗಿರ ಬಹುದು ,\.


ನೆನಪಿಡಿ  ನಮ್ಮ ತ್ವಚೆ ,ಬಾಯಿ , ದೊಡ್ಡ ಕರುಳು ,ಸ್ತ್ರೀಯರ ಜನನಾಂಗ ಗಳಲ್ಲಿ  ನಿರುಪದ್ರವಿ ಮತ್ತು  ರಕ್ಷಕ  ಸೂಕ್ಶ್ಮಾಣು

 ಗಳಿರುತ್ತವೆ.ಅವುಗಳನ್ನು ನಾಶ ಪಡಿಸುವುದು ಅನಾಹುತಕ್ಕೆ  ದಾರಿಯಾದೀತು .

ಸಣ್ಣ ಮಕ್ಕಳ ಶೀತ ಜ್ವರಕ್ಕೆಲ್ಲಾ ಆಂಟಿಬಯೋಟಿಕ್  ಕೊಡಬೇಡಿ .ಅದಕ್ಕಾಗಿ ವೈದ್ಯರನ್ನು ಒತ್ತಾಯಿಸ ಬೇಡಿ .






ಸೋಮವಾರ, ಸೆಪ್ಟೆಂಬರ್ 23, 2013

ಅಕ್ಕ್ಕನ ಸಂಗೀತ ಪರಂಪರೆ

ನನ್ನ ದೊಡ್ಡ ಅಕ್ಕ ನನಗಿಂತ ಎಂಟು ವರುಷ ದೊಡ್ಡವಳು .ಅವಳು ಅಜ್ಜನ ಮನೆ ಯಿಂದ ಶಾಲೆಗೆ ಹೋಗುತ್ತಿದುದರಿಂದ

ನಮಗೆ ಚಿಕ್ಕಂದಿನಲ್ಲಿ ಅವಳ ಒಡನಾಟ ಇರಲಿಲ್ಲ .ನನಗೆ ಬುದ್ದಿ ತಿಳಿಯುವಾಗ ಅವಳ ಮದುವೆಯೂ ಆಗಿ ಹೋಗಿತ್ತು .

ಆಗಿನ ಒಂಬತ್ತು ದಿವಸಗಳ ಮದುವೆ ಯ ನೆನಪು ಅಲ್ಪ ಸ್ವಲ್ಪ ಇದೆ.ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ. ಕೇರಳ

ರಾಜ್ಯ ಕಾಸರಗೋಡು ಜಿಲ್ಲೆಯಲ್ಲಿದೆ.ಅಲ್ಲೇ ಸಮೀಪ ಗುತ್ತು ಎಂಬಲ್ಲಿ  ವಿದ್ವಾನ್ ಗೋವಿಂದ ಭಟ್ ಎಂಬ ಪಿಟೀಲ್

 ವಾದಕರಿದ್ದರು .ಅವರ ಮಗಳನ್ನು ನನ್ನ ದೊಡ್ಡಪ್ಪ ಸಿನಿಮಾ ನಟರಾಗಿದ್ದ  ಗಣಪತಿ ಭಟ್ ವಿವಾಹವಾಗಿದ್ದುದರಿಂದ ನಮಗೆ

ನೆಂಟರೂ ಆಗಿದ್ದರು.ಅಕ್ಕ್ಕ  ಅವರ ಶಿಷ್ಯೆಯಾಗಿ ಸಂಗೀತದ ಓನಾಮ ಕಲಿತುದಲ್ಲದೆ ಪಿಟೀಲು ನುಡಿಸುವುದಕ್ಕೂ ಕಲಿತಳು

.ಮನೆಗೆ ಬಂದಾಗ ರಾ ರಾ ವೇಣು ಗೋಪಾ ಬಾಲಾ ಹಾಡುತ್ತಿದ್ದ ನೆನಪಿದೆ

                                        

                 ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಪಿಟೀಲು ಅಟ್ಟಕ್ಕೆ ಏರಿದರೆ ದಿನ ನಿತ್ಯ ಜಂಜಡದಲ್ಲಿ ಸಂಗೀತ

ಮರೆಯಾಯಿತು .ಬಹಳ ವರ್ಷಗಳ ನಂತರ ಅಟ್ಟದಲ್ಲಿದ್ದ  ಪಿಟೀಲು ತೆರೆದರೆ ಇಲಿ ಮರಿಗಳು ಅದರಿಂದ ಹೊರ ಬಂದವು

 .ಅಕ್ಕನ  ಮನೆಗೆ ಹೋಗಲು ಬಸ್ ಮಾರ್ಗದಿಂದ ೫ ಮೈಲು ನಡೆಯ ಬೇಕಿತ್ತು.ಹತ್ತಿರದ ಪೇಟೆ ಉಪ್ಪಿನಂಗಡಿ ಗೆ ಹೋಗಲು

ನೇತ್ರಾವತಿ ನದಿ  ದಾಟ ಬೇಕು .ಎಂತಹ ಕುಗ್ರಾಮ ಎಂದು ಊಹಿಸಲೂ ಕಷ್ಟ .ಅಕ್ಕ ಹೆರಿಗೆಗೆಂದು ತವರಿಗೆ ಬಂದಾಗ

ರಜಾ ದಿವಸಗಳಲ್ಲಿ ನಾವು ಭಾವನಿಗೆ ಸಂಗಾತಿಗಳಾಗಿ ಇರುತ್ತಿದೆವು.ಅಲ್ಲಿ ಸಮಯ ಕಳೆಯುವುದು ಕಷ್ಟ ವಾಗುತ್ತಿತ್ತು .


ಬಾಣಸಿಗರಾಗಿ  ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದೆವು.ಒಮ್ಮೆ ಅಕ್ಕಿ ರೊಟ್ಟಿ ಮಾಡಲು ಅಕ್ಕಿರುಬ್ಬಿ ಆದ ಮೇಲೆ  ಉಪ್ಪು

ಹಾಕಲು ಮರೆತ ವಿಚಾರ ತಿಳಿಯಿತು.ರೊಟ್ಟಿ ಹಿಟ್ಟು ಗಟ್ಟಿಯಾಗಿರುವುದರಿಂದ ಆ ಮೇಲೆ ಉಪ್ಪು ಸೇರಿಸುವುದು ಕಷ್ಟ .ಆದರಿಂದ

ಸಾಂಭಾರಿನಲ್ಲಿ ಉಪ್ಪು ಇದೆಯಲ್ಲ ಎಂದು ಸೇರಿಸಿ ತಿಂದೆವು .ಅಕ್ಕನ ಮನೆಗೆ ಹೋಗುವುದು ಎಷ್ಟು ಸಂತೋಷಕರ

ವಿಷಯವೋ  ಅಸ್ಟೇ ತವರಿನವರು ಬರುವಾಗ ಅಕ್ಕಂದಿರಿಗೆ .ಅದೊಂದು ಸಂಭ್ರಮ. ಈಗಿನ ತಲೆಮಾರಿನವರಿಗೆ

ಅರ್ಥವಾಗುವುದು  ಸ್ವಲ್ಪ ಕಷ್ಟ .


     ಅಂತಹ  ಅಕ್ಕ ಎರಡು ಮಕ್ಕಳಾದ ಮೇಲೆ ಪುನಃ ಸಂಗೀತ ಅಭ್ಯಾಸ ತೊಡಗಿಸಿ ಕೊಂಡುದು ವಿಶೇಷ .ತನ್ನ ಮಗಳು

ಸಂಗೀತ  ಅಭ್ಯಾಸ ಮಾಡುವಾಗ ತಾನೂ ಸೇರಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ  ಉತ್ತೀರ್ಣ ಳಾದಳು.ಉರುವಾಲು

ಎಂಬ ಹಳ್ಳಿಯಲ್ಲಿ  ಕಾಂಚನ ಐಯ್ಯರ್ ರವರ  ಸಹಕಾರದಿಂದ  ಸಂಗೀತ ಶಾಲೆ ಇವರ ಪ್ರಯತ್ನ ದಿಂದ ಶುರುವಾಯಿತು.

      ಈಕೆಯ ಮಗಳು ಉಷಾ ಸಂಗೀತ ವಿದುಷಿ ,ಖ್ಯಾತ ಗಾಯಕಿ ಎಂ ಎಸ್ ಶೀ ಲಾ ಅವರ ಶಿಷ್ಯೆ.ಅವಳ ಮಗಳು

ಶಿಖಾ ವೃತ್ತಿಯಲ್ಲಿ ಇಂಜಿನಿಯರ್ ಅಧ್ಯಾಪಿಕೆ.  .ಪ್ರವೃತ್ತಿ ಸಂಗೀತ .



ಇವರೆಲ್ಲರ ಸಂಗೀತ ಗಾಳಿ ನಮಗೆ ಬೀಸದೆ ಇರುತ್ತದೆಯೇ .ನಾವು ಅಣ್ಣ ತಮ್ಮ ಅಕ್ಕ ತಂಗಿಯರೂ ಸಂಗೀತ ಅಭಿಮಾನಿಗಳು .

ನಮ್ಮಲ್ಲಿ ಕೆಲವರು ಸಂಗೀತದ ವಿದ್ಯಾರ್ಥಿಗಳು .

ಒಳ್ಳೆಯ ಸಂಗೀತ ಕೊಡುವ ಆನಂದ ಬಲ್ಲವನೇ ಬಲ್ಲ .















ನೋಡಲೇ ಬೇಕಾದ ಮಲಯಾಳ ಚಿತ್ರ ೧ ಸಂದೇಶಂ

 ೯೦  -೨೦೦೦  ರ ದಶಕ ದಲ್ಲಿ ಮಲಯಾಳದಲ್ಲಿ ಕೆಲವು  ಅದ್ಭುತ  ಸಿನಿಮಾ ಗಳು ಬಂದಿದ್ದವು.ಅವುಗಳಲ್ಲಿ ಸಂದೇಶಂ ಒಂದು .


ಖ್ಯಾತ ನಿರ್ದೇಶಕ ಸತ್ಯನ್ ಅನ್ತಿಕಾಡ್ ಅವರು ನಟ ಚಿತ್ರ ಕತೆ ಗಾರ ಶ್ರೀನಿವಾಸನ್ ಅವರ ಕತೆಯನ್ನು ಆಧರಿಸಿ ನಿರ್ಮಿಸಿದ


ಈ ಚಿತ್ರವು ಮಲಯಾಳ ಚಿತ್ರ ರಂಗದಲ್ಲಿ ದಾಖಲೆ ಸೃಷ್ಟಿಸಿತು.


ಜೀವಮಾನ ಇಡೀ ತಮಿಳ್ನಾಡಿನಲ್ಲಿ ರೈಲ್ವೆ ನೌಕರನಾಗಿ ಕಳೆದು ಸುಖ ವಿಶ್ರಾಂತ ಜೀವನ ಹಂಬಲಿಸಿ ಊರಿಗೆ ಬಂದ

ರಾಘವನ್ ನಾಯರ್ ಅವರಿಗೆ  ಪ್ರಭಾಕರನ್ ಮತ್ತು ಪ್ರಕಾಶನ್ ಇಬ್ಬರು ಗಂಡು ಮಕ್ಕಳು .ವಿದ್ಯಾವಂತರಾಗಿದ್ದರೂ

ಕೆಲಸಕ್ಕೆ ಹೋಗದೆ  ರಾಜಕೀಯದಲ್ಲಿ ತೊಡಗಿಸಿ ಕೊಂಡ ಇವರಲ್ಲಿ ಒಬ್ಬನು ಎಡಪಂತೀಯ  ರೆವೊಲ್ಯುಶನರಿ ಡೆಮೋಕ್ರಾಟಿಕ್

ಪಾರ್ಟಿ ಯಾದರೆ ಮತ್ತೊಬ್ಬನು ಇಂಡಿಯನ್ ನ್ಯಾಷನಲ್ ಸೆಕ್ಯುಲರ್ ಪಾರ್ಟಿ ಕಾರ್ಯಕರ್ತ .ಕೇರಳ ದಲ್ಲಿ  ಸಾಮಾನ್ಯ ವಾಗಿ

ಕಂಡು ಬರುವ ಅತಿಯಾದ ಪೊಲಿಟಿಕಲ್ ಅವೇರ್ನೆಸ್ ಮತ್ತು ಇನ್ವಾಲ್ವ್ಮೆಂಟ್.

ಆರಂಭದಲ್ಲಿ  ಮಕ್ಕಳ ಆಟವೆಂದು ತಿಳಿದು ಕೊಂಡರೆ ಇಬ್ಬರ ನಡವಳಿಕೆಗಳು ಅತಿರೇಕಕ್ಕೆ ಹೋದಾಗ ಶಾಸಿಸಿ  ಮಕ್ಕಳನ್ನು

ದಾರಿಗೆ ತರುವ ಕತೆ .ಇದರಲ್ಲಿ ಹಲವು ಮೆಲುಕು ಹಾಕುವ  ಸಂಭಾಷಣೆ ಗಳೂ .ಹಾಸ್ಯ ಸನ್ನಿವೇಶಗಳೂ ಇವೆ.

 ನಟರೆಲ್ಲಾ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ  ಜೀವ ತುಂಬಿದ್ದಾರೆ .

ಕೊನೆಯ ಸಂಭಾಷಣೆ  ಮೊದಲು ತಮ್ಮ ಮನೆಯನ್ನು ಸರಿ ಮಾಡಿ .ಮನೆ ನೋಡಿಕೊಳ್ಳದವರು ದೇಶ ಉದ್ಧಾರ ಮಾಡುವುದು

ಹೇಗೆ ?

ನೀವು ಈಗಾಗಲೇ ನೋಡಿರದಿದ್ದರೆ  ನೋಡಿ .