ಪಂಜೆ ಮಂಗೇಶ ರಾಯರು.
ಎಂ ಆರ್ ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ನೀವೆಲ್ಲ ಓದಿರಬಹುದು..ಅದನ್ನು ಹಾಸ್ಯ ಬರಹಗಳ ಸಂಕಲನ ಎಂದು ಪ್ರಕಟಿಸಿದ್ದಾರೆ.ಕುವೆಂಪು ಅವರು ಇದನ್ನು ಚಿತ್ರ ಕಾದಂಬರಿ ಎಂದು ಕರೆದಿದ್ದರು.ಬಿ ಜಿ ಎಲ್ ಸ್ವಾಮಿಯವರ ಕಾಲೇಜು ರಂಗ ಕಾಲೇಜ್ ತರಂಗ ,ಪ್ರಾಧ್ಯಾಪಕನ ಪೀಠದಲ್ಲಿ ಕೃತಿಗಳೂ ಹಾಗೆಯೇ.ಮೇಲ್ನೋಟಕ್ಕೆ ಕಾಣುವ ಹಾಸ್ಯದ ಹಿಂದೆ ಶಿಕ್ಷಣ ವ್ಯವಸ್ಥೆ
ಯ ಬಗೆಗಿನ ನೋವಿದೆ. ರಂಗಣ್ಣನ ಕನಸಿನ ದಿನಗಳಲ್ಲಿ ಬೋರ್ಡು ಒರಸುವ ಬಟ್ಟೆ ಎಂಬ ಅಧ್ಯಾಯವಿದೆ.ಬಡ ಅಧ್ಯಾಪಕನೋರ್ವಇನ್ಸ್ಪೆಕ್ಸನ್ ದಿನ ಬೋರ್ಡು ಒರಸಲು ತಮ್ಮ ಮುಂಡಾಸು ಬಟ್ಟೆಯನ್ನೇ ಕೊಡುತ್ತಾರೆ.ಕೇಳಿದಾಗ ಸಾದಿಲ್ವಾರ್ ಲೆಕ್ಕದಲ್ಲೇ
ಕೊಂಡುದಾಗಿಯೂ ,ತಲೆಗೆ ರುಮಾಲು ಇಲ್ಲದೆ ಬರಬಾರದೆಂಬ ಸರ್ಕ್ಯುಲರ್ ಇದ್ದುದರಿ೦ದ ಬಡವನಾದ ತಾನು ಅದನ್ನೇ ರುಮಾಲು ಆಗಿಯೂ ಬಳಸುತ್ತೀನೆ೦ದು ಹೇಳುತ್ತಾರೆ.ಈ ಅಧ್ಯಾಪಕರು ಪಾಠ ಪ್ರವಚನದಲ್ಲಿ ಸಮರ್ಥರು ಹಾಗು ಪ್ರಾಮಾಣಿಕರು.
ಪಂಜೆ ಮಂಗೇಶ ರಾಯರ ಹಳೆಯ ಸಬ್ ಅಸಿಸ್ಟೆ೦ಟನ ಸುಳ್ಳು ಡೈರಿಯಿಂದ ಎಂಬ ಲೇಖನವೂ ಮೇಲ್ನೋಟಕ್ಕೆ ಲಲಿತ ಪ್ರಬಂಧದಂತೆ ಕಂಡು ಬಂದರೂ ಅದರಲ್ಲಿ ಸಹೃದಯಿ ಇನ್ಸ್ಪೆಕ್ಟರ್ ನ ನೋವು ಇದೆ. ಅಧ್ಯಾಪಕರ ಸ್ತಿತಿ ಗತಿಗಳ ಬಗ್ಗೆ ಅನುಕಂಪ
ಇದೆ.
ಮಂಗಳೂರು ಸರಕಾರೀ ಕಾಲೇಜಿನಲ್ಲಿ ಮತ್ತು ಸರ್ವಿಸಿನ ಕೊನೆಯ ಅಧ್ಯಾಪನ ದಿನಗಳ ಮಧ್ಯೆ ಕಡುಬಿನೊಳಗಿನ ಹೂರಣದಂತೆ ಹದಿನಾಲ್ಕು ವರುಷ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟೆಂಟ್( ಎಂದರೆ ಮೊದಲಿನ ಡೆಪ್ಯುಟಿ ಇನ್ಸ್ಪೆಕ್ಟರ್ ನ ರೂಪಾಂತರ ) ಆಗಿ ಕಾರ್ಯ ನಿರ್ವಹಿಸುವಾಗ ಕಂಡ ಕೆಲವು ಚಿತ್ರಣ ಗಳು ಇಲ್ಲಿವೆ.
ಒಮ್ಮೆ ಇವರು ಇನ್ಸ್ಪೆಕ್ಷನ್ ಕಾರ್ಯಾರ್ಥ ಮಧ್ಯಾಹ್ನ ಗುಡ್ಡದ ಪದವಿನಿಂದ ಬಯಲಿಗೆ ಇಳಿಯುತ್ತಿದ್ದಾಗ ದೊಡ್ಡ ಮನುಷ್ಯರೊಬ್ಬರು ಕೈಯ್ಯಲ್ಲಿದ್ದ ಕೊಡೆಯನ್ನು ಮಡಿಸಿ ಕೆರ ಕಳಚಿ ಕೈಮುಗಿದು ತಾವಾಗಿ ಹಿಂದೆ ಬರುವಂತಾವರದರು .ಪೋಲಿಸ್ ಇನ್ಸ್ಪೆಕ್ಟರ್ ಗೆ
ಕಾಯುತ್ತಲಿದ್ದವರು .ಇವರ ನಿಜವರಿತೊಡನೆ ಉಂಟೆ ಇದು? ನಾನು ಪೋಲಿಸ್ ಎಂದು ಗ್ರಹಿಸಿ ಸುಮ್ಮನೆ ಬ೦ದದ್ದಾಯಿತು. ಪೋಲಿ ಮಕ್ಕಳನ್ನು ನೋಡ ಬ೦ದ ಇದಕ್ಕೆ ನಾನು ಕೈಯೇತ್ತುವುವುದು ಉಂಟೆ ಎಂದು ಪ್ರಲಾಪಿಸುತ್ತಾರೆ.
ನಮಸ್ಕಾರ ಅಂದರೆ ಅಧಿಕಾರಕ್ಕೆ ಸಲ್ಲತಕ್ಕ ಪುರಸ್ಕಾರ ಎಂಬತಿಳುವಳಿಕೆ.ಹುದ್ದೆದಾರಣ ಮೈಬಣ್ಣ,ಉಡುಪಿನ ತಳಕು,ಸಂಬಳದ
ಮಹತ್ವ,ಇಲಾಖೆಯ ಹಿರಿಮೆ,ಜಾತಿಯ ಅಂತಸ್ತು, ಮುಖ್ಯವಾಗಿ ಅಧಿಕಾರಿಯ ಉಪದ್ರ ಕಾರಕ ಶಕ್ತಿಯನ್ನ ಹೊಂದಿಕೊಂಡು ನಮಸ್ಕಾರ ವಿಧಿಯು ಮಾರ್ಪಡುತ್ತದೆ.ಹಳ್ಳಿಯವರಿಗೆ ಸರಕಾರಿ ಉದ್ಯೋಗಸ್ತರ ಮೇಲೆ ಅಳುಕು,ಅಂಜಿಕೆ ,ಅಪಾಯ ಭೀತಿ ಇದೆ, ಅಕ್ಕರೆ ಕಡಿಮೆ.ಅಕ್ಕರೆ ಇದ್ದಲ್ಲಿ ಅಭಿಮಾನವಿದೆ.ಅದು ಇಲ್ಲದಿದ್ದಲ್ಲಿ ಅವರ ಮನಸಿನೊಳಗಣ ನಂಬಿಕೆ ಹೀಗಿದೆ.’ಮುಕ್ಕಾಲು ಮೂರು
ವೀಸಾ ಅಧಿಕಾರಿಗಳು ಸರೀಸೃಪಗಳಂತೆ,ಉದರ ಗಾಮಿಗಳು. ‘ಸರಕಾರದವರಲ್ಲಿ ಸಿವಿಲಿನವರು ಹೆಬ್ಬಾವುಗಳು,ಪೋಲಿಸಿನವರು ನಾಗರ ಹಾವುಗಳು ಅಬಕಾರಿ ಅರಣ್ಯ ಇಲಾಖೆಯವರು ಮಂಡಲಿಗಳು.ತಪ್ಪಾಲಿನವರೋ?ಹಸಿರು ಹಾವು ಸರ್.ರೆವೆನ್ಯೂ ಇನ್ಸ್ಪೆಕ್ಟರ್ ಕೇರೆ ಹಾವು ಸರ್.
ಶಾಲಾ ಇನ್ಸ್ಪೆಕ್ಟರ್ ಯಾವ ವರ್ಗ? ಎಂದುದಕ್ಕೆ ಮಾಸ್ತರರೆಂದರಂತೆ ನಿಮ್ಮ ವರ್ಗ ವೊಳ್ಳೆಯದು!(ಒಳ್ಳೆ ಹಾವು )
ಆಗಿ ಹೋದ ಇನ್ಸ್ಪೆಕ್ಟರ್ ಗಳನ್ನು ಉಪಾಧ್ಯಾಯರು ನೆನೆಸಿ ಕೊಳ್ಳುತ್ತಿದ್ದುದು ಹೀಗೆ.’ಆ ರಾಯರು ನಮ್ಮನ್ನು ಕಾಯಿದೆ ಬಿಡದೆ ಕಾಯುತ್ತಿದ್ದರು.ಕಾಯಿಸುತ್ತಿರಲಿಲ್ಲ' ‘ಈ ರಾಯರು ಬೆನ್ನಿಗೆ ಬಡಿಯುತ್ತಿದ್ದರು.ಆದರೆ ಹೊಟ್ಟೆಗೆ ಹೊಡೆಯುತ್ತಿರಲಿಲ್ಲ..’ಅವರು ಇದ್ದ ಕಾಲಕ್ಕೆಬೆಲ್ಲ ಕೊಟ್ಟರು,ಇಲ್ಲದ ಕಾಲಕ್ಕೆ ಬೆಲ್ಲದಂತಹ ಮಾತು ಕೊಟ್ಟರು,’ಅವರು ಉಪಾಧ್ಯಾಯ ಕುಟುಂಬಿ ಸರ್ !ಅವರಿಗೆ ಹೆಂಡತಿ ಮಕ್ಕಳಚಿಂತೆಗಿಂತ ಶಾಲೆ ಮಾಸ್ತರರ ಚಿಂತೆ ಹೆಚ್ಚು ‘
ಹೊಸಂಗಡಿ ಶಾಲೆಯ ಮಾಸ್ತರು ಇನ್ಸ್ಪೆಕ್ಷನ್ ಮುಗಿದ ರಾತ್ರಿಯೇ ಸ್ತಳ ಖಾಲಿ ಮಾಡಿ ಪರವೂರಿಗೆ ತೆರಳುವುದು ಸಾಲತೀರಿಸಲಾಗದೆ.ಏಕೆಂದರೆ ಸರಕಾರದವರು ಪಕ್ಕದ ಊರಿನಲ್ಲಿ ಬೋರ್ಡ್ ಶಾಲೆ ಹಾಕಿ ಇವರ ಗ್ರಾಂಟ್ ಕಡಿತಗೊಳಿಸಿದರು.
ಕಳೆದ ವರುಷ ಮಗನಿಗೆ ಒಂದು ಅಂಗಡಿ ಹಾಕಲು ಜೈನ ಪೇಟೆಯಿಂದ ಸಾಲ ತಂದು ಮಂದಿ ಮೇಲೆ ಕುಳ್ಳಿರಿಸಿದರೆ ಎರಡು ದಿವಸದಜ್ವರದಲ್ಲಿ ದೇವರಿಗೆ ಸಂದ.ಅವನ ಹನ್ನೆರಡು ದಿನ ಕಳೆಯಲಿಲ್ಲ ಅವನ ತಾಯಿ ನೀರಿಗೆಂದು ಹೋದವಳು ಕಾಲು ಜಾರಿ ಗಂಗಮ್ಮನ ಪಾದ ಸೇರಿದಳು.ಇನ್ನು ಏಳು ವರ್ಷದ ಕೂಸು ಒಂದಿದೆ ,ಅದನ್ನು ಕಟ್ಟಿಕೊಂಡು ಈಹಳ್ಳಿಯಲ್ಲಿ ನಾನೇನು ಮಾಡಲಿ?
ಇದು ಸಂಸಾರ ಕಷ್ಟದಿಂದ ಬೆಂದ ಉಪಾಧ್ಯಾಯನ ಮೊರೆ.ಈ ಮೊ ರೆಯಲ್ಲಿ ಮಾತಿನ ಮೆರಗು ಇಲ್ಲ,ಸಲುಗೆಯ ಭರವಸೆಯಿಂದ ಹೇಳಿದ ಮಾತಿನಲಿ ಸುಳ್ಳಿನ ಸುಳಿವು ಇಲ್ಲ.ನಾವು ಸುಳ್ಳು ಎಂದು ಸಂದೇಹ ಪಟ್ಟು ಹಳ್ಳಿಯ ಮಾಸ್ತರನ ಶಾಲೆಯ ಹಣೆಬರಹದ ಮೇಲೆ ಕೆಂಪು ಗೀಟು ಎಳೆಯುವ ಮುನ್ನ ಆತನ ಬಡತನದ ಬಾಳಿನ ಸಾಲಸೋಲಗಳನ್ನು ವಿಚಾರಿಸಿಕೊಲ್ಲತಕ್ಕದ್ದೆಂಬ ಮೂಲ ಪಾಟವನ್ನು ನಾನು
ಹೊಸಂಗಡಿಯ ಉಪಾಧ್ಯಾಯ ರಿಂದ ಕಲಿತೆ ಎನ್ನುತ್ತಾರೆ ಪಂಜೆಯವರು.ಬಡತನದಿಂದ ಸಾಲ ಹುಟ್ಟಿತೋ ಇಲ್ಲಾ ಸಾಲದಿದ ಆತನ
ಬಡತನ ಹುಟ್ಟಿತೋ ನಾನು ಹೇಳಲಾರೆ,ಆದರೆ ಬಡತನದಿಂದ ಹಳ್ಳಿಯ ಮಾಸ್ತರನು ನನಗೆ ಬಸವಳಿದುದು ಗೊತ್ತು ಎನ್ನುತ್ತಾರೆ.
"ಈ ಅಧ್ಯಾಪಕರು ವಾಸವಾಗಿದ್ದ ಹುಲ್ಲು ಗುಡಿಸಲುಗಳು ಈಗ ಪಾಳು ಬಿದ್ದಿರಬಹುದು.ಮೇಸ್ಟರ ಹೆಸರು ಹಳ್ಳಿಯವರು ಮರೆತಿರಬಹುದು.ಇದರಿಂದ ಅವರು ಮಾಡಿದ ಸತ್ಕಾರ್ಯಗಳೆಲ್ಲ ಅವರ ಹಿಂದೆಯೇ ನಶಿಸಿ ಹೋದವೆಂದು ಭಾವಿಸಲಾಗದು.
ಹಸಿರಿಂದ ಕಂಗೊಳಿಸುತ್ತಿರುವ ಹೊಲವನ್ನು ಕಂಡಾಗ ಅದರ ರೂವಾರಿಗಳಾದ ಬಡ ಕೂಲಿ ಯವರ ಕಾಯ ಕಷ್ಟ ನೆನಪಾಗುವುದಿಲ್ಲ.ಮಂಗಳೂರು ಸೇತುವೆಯ ಮೇಲೆ ನೇತ್ರಾವತಿಯ ಸೊಬಗು ಆನಂದಿಸುವಾಗ ಇದರ ವಿಸ್ತಾರ ಸೌಂದರ್ಯಕ್ಕೆ
ಕಾರಣವಾದ ಹಳ್ಳಿ ಹಳ್ಳಿಯಿಂದ ಬಂದ ಹಳ್ಳಗಳ ನೆನಪಾಗುವುದಿಲ್ಲ.ನಮ್ಮ ಜಿಲ್ಲೆಯಿಂದ ವಿವಿಧ ರಂಗಗಳಲ್ಲಿ ಉತ್ತುಂಗ ಸ್ಥಾನಕ್ಕೆ ಏರಿದವರನ್ನು ಕಂಡಾಗ ;ಇದೆಲ್ಲ ಬಹು ಮಟ್ಟಿಗೆ ಅರೆಯುಣ್ಣುವ ಮಕ್ಕಳೊ೦ದಿಗನಾದ ಹಳ್ಳಿಯ ಮಾಸ್ತರನು ಹರಡಿದ ಬೀಜದ
ಫಲ ;ಎಂಬೊಂದು ಸೊಲ್ಲು ನನ್ನ ಅಂತರಂಗದಲ್ಲಿ ಜಿನುಗುತ್ತಿದೆ." ಇವು ಇನ್ಸ್ಪೆಕ್ಟರ್ ಪಂಜೆಯವರ ಮಾತುಗಳು.