ಬೆಂಬಲಿಗರು
ಶುಕ್ರವಾರ, ಅಕ್ಟೋಬರ್ 11, 2013
M Srinivasa Rao My teacher (Shrinivasa mastru )
ಒಪ್ಪಕ್ಕ
.ಮಲಯಾಳಂ ನಲ್ಲಿಯೂ ಒಪ್ಪೋಳ್ ಎಂದು ಅಕ್ಕನಿಗೆ ಕರೆಯುವುದಿದೆ.ನನ್ನ ಎರಡನೇ ಅಕ್ಕ ಭಾಗ್ಯಲಕ್ಷ್ಮಿ .ನನಗಿಂತ
ಎರಡು ವರ್ಷ ದೊಡ್ಡವಳು .ನನ್ನಿಂದ ಹಿಡಿದು ತಮ್ಮ೦ದಿರಿಗೆಲ್ಲಾ ಅವಳೇ caretaker.ಎರಡು ಜಡೆ ಹಾಕಿಕೊಂಡು ಉದ್ದ ಲಂಗ
ರವಿಕೆ ಧರಿಸಿ ಸಂಭ್ರಮ ದಿಂದ ನಾಯಕಿಯಾಗಿ ನಮ್ಮನ್ನು ನಡೆಸಿದವಳು . ನಮ್ಮ ಶಾಲಾ ಬ್ಯಾಗ್ ಮೊದಲೆರಡು
ವರ್ಷಗಳಲ್ಲಿ ಹೊತ್ತವಳು ,ಬುತ್ತಿ ಯನ್ನು ಹೊರುವುದಲ್ಲದೆ ಮಧ್ಯಾಹ್ನ ನಮ್ಮನ್ನು ಉಣ್ಣಿಸಿ ತೊಳೆವ ಕೆಲಸ ಮಾಡಿದವಳು .
ನಾವು ನಡೆವಾಗ ,ಆಡುವಾಗ ಬಿದ್ದರೆ ಎಬ್ಬಿಸಿ ಸಾಂತ್ವನ ಹೇಳಿದವಳು .ಅವಳಿಗೆ ತುಂಬಾ ಸಹನೆ .ದಾರಿಯಲ್ಲಿ
ಗೆಳತಿಯರ ಮನೆಯಿಂದ ಹೂ ,ಹೂವಿನ ಸಸಿ ಸಂಗ್ರಹ ಅವಳ ಹವ್ಯಾಸ .ಗೆಳತಿಯರ ಜತೆ ಮಾವಿನ ಕಾಯಿ ,ಹುಣಿಸೇ ಬೀಜ
ನೆಲ್ಲಿಕಾಯಿ ಬಾರ್ಟರ್ ಆಗುತ್ತಿತ್ತು .ಆದರಲ್ಲಿ ನಮಗೂ ಪಾಲು ಸಿಗುತ್ತಿತ್ತು .
ಟೆನ್ನಿಕೊಯಿಟ್ ಚೆನ್ನಾಗಿ ಆಡುತ್ತಿದ್ದಳು .ಹೈ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಚಾಂಪಿಯನ್
ಆಗಿದ್ದಳು .ಆಗೆಲ್ಲ ತಡವಾಗಿ ಮನೆಗೆ ಹೋಗುವುದಿದ್ದರೆ ನಾವು ತಮ್ಮಂದಿರು ಯಾರಾದರೂ ಅವಳ ಜತೆ ಕಾದು ನಿಂತು
ಬರಬೇಕಿತ್ತು .ಈಗಲೂ ಪರಿಸ್ತಿತಿ ಬದಲಾಗಿಲ್ಲ .ಹೊತ್ತು ಕಂತಿದ ಮೇಲೆ ಹುಡುಗಿಯರು ಒಬ್ಬರೇ ನಡೆದು ಹೋಗುವುದು
ಅಪಾಯಕಾರಿ.
ಮನೆಯಲ್ಲೂ ಹುಡುಗಿಯರು ಮನೆ ಕಾರ್ಯದಲ್ಲ್ಲಿ ಹಿರಿಯರಿಗೆ ಸಹಾಯ ಮಾಡುತ್ತಿದ್ದರು .ಆ ಮೇಲೆ ರಾತ್ರಿ ಚಿಮ್ಮಿಣಿ ದೀಪದ
ಬೆಳಕಿನಲ್ಲಿ ಓದು .ಇಬ್ಬರಿಗೆ ಒಂದು ದೀಪ. ಇದರಿಂದಾಗಿ ಅಕ್ಕ ಓದುತ್ತಿದ್ದ್ದುದು ನನಗೂ ಬಾಯಿ ಪಾಠ ಆಗಿ ಬರುತ್ತಿತ್ತು .
ಆಗೆಲ್ಲ ಅಧ್ಯಯನ ಎಂದರೆ ಪಾಠ ಪುಸ್ತಕ ಮತ್ತು ನೋಟ್ಸ್ ಉರು ಹಾಕುವುದೇ ಆಗಿತ್ತು .
ಈಗ ಒಪ್ಪಕ್ಕ ಅಜ್ಜಿ ಆಗಿದ್ದಾಳೆ .ನಮಗಂತೂ ಈಗಲೂ ನಮ್ಮನ್ನು ಕೈ ಹಿಡಿದು ಹೆಮ್ಮೆಯಿಂದ ನಡೆಯುತ್ತಿದ್ದ
ಅಕ್ಕನಗಿಯೇ ಇದ್ದಾಳೆ .
ಗುರುವಾರ, ಅಕ್ಟೋಬರ್ 10, 2013
ಸಾರ್ಥಕ ಶತಮಾನದ ಹೊಸ್ತಿಲಲ್ಲಿ ನನ್ನ ಶಾಲೆ
ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಕನ್ಯಾನ .ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ
ತಾಲೂಕಿನಲ್ಲಿ ಇದೆ .ಕೇರಳ ಗಡಿಗೆ ತಾಗಿ ಇರುವ ಹಳ್ಳಿ ಶಾಲೆ .ಕನ್ಯಾನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಇದೆ.ಉತ್ತರಕ್ಕೆ
ತಲೆಯೆತ್ತಿ ನಿಂತ ಕಳಂಜಿಮಳೆ ಕನ್ಯಾನ ಗ್ರಾಮವನ್ನು ಮಂಚಿ ಕೊಲ್ನಾಡು ಗಳಿಂದ ಪ್ರತ್ಯೇಕಿಸುತ್ತದೆ .ಈ ಗುಡ್ಡ ದಾಟಿ
ನಮ್ಮ ಹೈ ಸ್ಕೂಲ್ ಗೆ ವಿದ್ಯಾರ್ಥಿಗಳು ಬರುತ್ತಿದ್ದರು . ದಕ್ಷಿಣ ದಲ್ಲಿ ಪಿಲಿ೦ಗುಳಿ ಶಿರಂಕಲ್ಲು .ವಿಟ್ಲದಿಂದ ಬರುವ ಮುಖ್ಯ ರಸ್ತೆ
ಕಳ೦ಜಿಮಲೆಯ ತಳ ಭಾಗಕ್ಕೆ ಸುತ್ತಿ ಬಂದು ಕನ್ಯಾನದಲ್ಲಿ ಕವಲೊಡೆದು ಒಂದು ಉಪ್ಪಳ ಕ್ಕೂ ಇನ್ನೊಂದು ಮಂಜೆಶ್ವರಕ್ಕೂ
ಹೋಗುತ್ತವೆ .ಗ್ರಾಮದ ಮೂಲೆ ಮೂಲೆಗಳಿಂದ ಮಕ್ಕಳು ನಡೆದು ಶಾಲೆಗೆ ಬರುತ್ತಿದ್ದರು .
ನಮ್ಮ ಮನೆ ಅಂಗ್ರಿ ಕನ್ಯಾನ ಗ್ರಾಮದ ಒಂದು ಮೂಲೆಯಲ್ಲಿ ಅಳಿಕೆ ಗ್ರಾಮಕ್ಕೆ ತಾಗಿ ಇತ್ತು .ಅಲ್ಲಿಂದ ಕನ್ಯಾನಕ್ಕೆ ಮೂರು
ಮೈಲು .ಎರಡು ಮೂರು ಕಾಲು ದಾರಿಗಳಿದ್ದವು .ಹೆಚ್ಚಾಗಿ ಕಿರಿನ್ಚಿಮೂಲೆ ಕೆಪ್ಲ ಗುಡ್ಡೆ ಗಾಗಿ ಹೋಗುತ್ತಿದ್ದೆವು .ಹೊರಡುವಾಗ
ನಮ್ಮ ಏಳೆಂಟು ಮಂದಿಯ ಸೈನ್ಯ ದಾರಿಯಲ್ಲಿ ಸೇರ್ಪಡೆಯಿಂದ ಹತ್ತಿಪ್ಪತ್ತು ಮಕ್ಕಳ ದಂಡೇ ಆಗುತ್ತಿತ್ತು. ಸಣ್ಣ ಮಕ್ಕಳು
ದೊಡ್ಡವರ ಸುಪರ್ದಿಯಲ್ಲಿ .ಹೊಲ ಗದ್ದೆ ,ಗುಡ್ಡ ಝರಿ ಗಳನ್ನು ದಾಟಿ ಹೋಗುವ ನಮಗೆ ಪ್ರಕೃತಿಯಿಂದಲೇ ಮೊದಲ
ಪಾಠ ಆಗುತ್ತಿತ್ತು.ಜೊತೆಗೆ ನಮಗರಿವಿಲ್ಲದಂತೆಯೇ ವ್ಯಾಯಾಮ .
(ಮುಂದುವರಿಯುವುದು)
ಬುಧವಾರ, ಅಕ್ಟೋಬರ್ 2, 2013
ಬೆಲ್ಟ್ ಏರಿಯ
ಸಾಗಣೆಗೆ ನಿರ್ಬಂಧ ಇತ್ತು .ಇದರ ಪ್ರಕಾರ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಸರಕಾರದ
ಅನುಮತಿಯಿಲ್ಲದೆ ಸಾಗಿಸುವಂತೆ ಇಲ್ಲ. ಇದಕ್ಕಾಗಿ ಕೇರಳ ಗಡಿಗಿಂತ ಹತ್ತು ಹನ್ನೆರಡು ಮೈಲು ಈ ಕಡೆ ಮುಖ್ಯ ರಸ್ತೆಯಲ್ಲಿ
ತಪಾಸಣಾ ಗೇಟ್ ಹಾಕಿದ್ದರು .ಈ ಗೇಟ್ ನಿಂದ ಕೇರಳ ಗಡಿಯ ವರೆಗೆ ಇರುವ ಪ್ರದೇಶವನ್ನು ಬೆಲ್ಟ್ಏರಿಯ ಎಂದು
ಕರೆಯುತ್ತಿದ್ದರು.ಕನ್ಯಾನ ,ಕರೋಪಾಡಿ ,ಅಳಿಕೆ ಗ್ರಾಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತಿದ್ದವು .ವ್ಯಾವಹಾರಿಕವಾಗಿ ಇದು
ಬೇರೆ ರಾಜ್ಯದಂತೆ ಆಗಿತ್ತು .ಕೇಂದ್ರ ಭಾಗದಿಂದ ಬೆಲ್ಟ್ ಏರಿಯದೊಳಗೆ ಆಹಾರ ಧನ್ಯ ಸಾಗಣೆಗೆ ನಿಷೇಧ ಇತ್ತು .
ಸಮಾರಂಭಗಳಿಗೆ ತಹಶೀಲ್ದಾರ್ ಅವರ ವಿಶೇಷ ಅನುಮತಿ (ಪರ್ಮಿಟ್ ) ಪಡೆದು ಧಾನ್ಯಗಳನ್ನು ಸಾಗಿಸ ಬೇಕಿತ್ತು .
ವಿಟ್ಲದ ಸಮೀಪ ಉಕ್ಕುಡ ದಲ್ಲಿ ಒಂದು ತಪಾಸಣಾ ಗೇಟ್ .ಇಲ್ಲಿ ಎಲ್ಲಾ ವಾಹನಗಳನ್ನು ನಿಲ್ಲಿಸಿ
ಚೆಕ್ ಮಾಡುತ್ತಿದ್ದರು .ಮೀನು ಮಾರುವ ಹೆಂಗಸರ ಬುಟ್ಟಿ,ಪ್ರಯಾಣಿಕರ ಚೀಲ ದೊಳಗೆ ಅಕ್ಕಿ ,ಅವಲಕ್ಕಿ ಇತ್ಯಾದಿ
ಇದೆಯೋ ಎಂದು ನೋಡುತ್ತಿದ್ದರು .
ಬಹಳ ಮಂದಿ ಕಾಡಿನ ದಾರಿಯ ಮೂಲಕ ತಲೆ ಹೊರೆಯಲ್ಲಿ ಅಕ್ಕಿಯನ್ನು ಕೇರಳಕ್ಕೆ
ಸಾಗಿಸಿ ಹಣ ಸಂಪಾದಿಸುತ್ತಿದ್ದರು .ಕೆಲವರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೋದದ್ದೂ ಇದೆ .ಈ ಸಂಬಂಧ
ಅನೇಕ ಕೇಸುಗಳು ಇನ್ನೂ ಇತ್ಯರ್ಥವಾಗಿಲ್ಲವೆಂದು ಓದಿದ ನೆನಪು.ಸಂದರ್ಭಾನುಸಾರವಾಗಿ ಮನುಷ್ಯನು ಜೀವನ
ಮಾರ್ಗ ಕಂಡು ಹಿಡಿಯುತ್ತಾನೆ ಎಂಬುದಕ್ಕೆ ನಿದರ್ಶನ .
ಇದೇ ದೇಶದ ನಾಗರಿಕರಾಗಿ ಇದೇ ರಾಜ್ಯದ ಒಂದು ಭಾಗವಾಗಿದ್ದೂ ಆಹಾರ ಧಾನ್ಯ ವನ್ನು ಕಳ್ಳರಂತೆ
ಸಾಗಿಸ ಬೇಕಾದ ದೌರ್ಭಾಗ್ಯ ಈ ಭಾಗ ದವರದು ಆಗಿತ್ತು .ಅರ್ಧ ಕಿಲೋ ಒಂದು ಕಿಲೋ ಅಕ್ಕಿಯನ್ನೂ ನಿರ್ದಾಕ್ಷಿಣ್ಯವಾಗಿ
ವಶ ಪಡಿಸಿ ಕೊಳ್ಳಲಾಗುತ್ತಿದ್ದ ಆ ದೃಶ್ಯವನ್ನು ನೆನೆಸಿ ಕೊಂಡರೆ ಹೊಟ್ಟೆ ತೊಳಸಿದಂತೆ ಆಗುವುದು .
೧೯೭೭ರಲ್ಲಿ ಕೇಂದ್ರದಲ್ಲಿ ಜನತಾ ಸರಕಾರ ಬಂದಾಗ ಅಂತರ ರಾಜ್ಯ ಆಹಾರ ಸಾಗಾಟ ನಿರ್ಬಂಧ ತೆಗೆಯುವುದರೊಂದಿದೆ
ಈ ಗೇಟುಗಳೂ ಗತ ಕಾಲಕ್ಕೆ ಸೇರಿದವು.
ಸೋಮವಾರ, ಸೆಪ್ಟೆಂಬರ್ 30, 2013
ಮೊಬೈಲ್ ಆವಾಂತರಗಳು
ಚರವಾಣಿಯಿದ್ದವರು ಬೇಡದಾ ಕರೆಯ ಕರಕರೆಗೆ ಬೆಚ್ಚಿದೊಡೆ೦ತಯ್ಯಾ
ಕರೆದುಮಾತನಾಡದವರೂ ತಾಸು ಗಟ್ಟಲೆ ಫೋನಿಸುವರು
ನೂತನ ಪರಿಕರಗಳು ವರವೋ ಶಾಪವೋ ಅರಿಯದಾದೆನಯ್ಯಾ
ಕೂಡಲ ಸಂಗಮ ದೇವಾ
ನಿನ್ನ ಪೂಜಿಸುವ ಅರ್ಚಕನ ಕೈಲೂ ಜಂಗಮವಾಣಿ , ಏನೆಂಬೆ ಜಗದ ಪರಿಗೆ .
ನಾನೊಬ್ಬ ಸಾದಾರಣ ಪ್ರಾಕ್ಟೀಸ್ ಇರುವ ವೈದ್ಯ. ಎಲ್ಲರಂತೆ ನನ್ನಲ್ಲೂ ಒಂದು ಮೊಬೈಲ್
ಫೋನ್ ಇದೆ.ಬರುವ ರೋಗಿಗಳು ಕೆಲವರು ಚರವಾಣಿ ನಂಬರ್ ಕೇಳಿ ತೆಗೆದು ಕೊಳ್ಳುವರು.ಅತೀ ಅವಶ್ಯ ಇದ್ದರೆ ಮಾತ್ರ
ಉಪಯೋಗಕ್ಕೆ ಎಂಬ ಕಂಡೀಶನ್ ಅವರೇ ಒಪ್ಪಿ ಕೊಳ್ಳುವರು .ಉಳಿದಂತೆ ನಮ್ಮ ಸ್ಥಿರ ವಾಣಿ ಯನ್ನುಆಸ್ಪತ್ರೆ ಅವಧಿಯಲ್ಲಿ
ಸಪರ್ಕಿಸ ಬಹುದು.ಆದರೆ ಆಗುವುದು ಬೇರೆ.
ಕೆಲವು ಚರವಾಣಿ ಸಂಭಾಷಣೆ ಈ ತರಹ ಇರುತ್ತದೆ , " ದಾಕ್ತ್ರೆ ನೀವು ಮೊನ್ನ್ನೆ ಕೊಟ್ಟ ಹಳದಿ ಮಾತ್ರೆ ಇನ್ನು ಒಂದು ಮಾತ್ರ
ಉಳಿದಿದೆ ,ನಾಳೆ ಏನು ಮಾಡಲಿ ?"
"ನೀವು ನಾಳೆ ಹನ್ನೆರಡು ಗಂಟೆಗೆ ಇದ್ದೀರಾ ?"
"ಒಂದು ವಾರದಿಂದ ಹಸಿವು ಸ್ವಲ್ಪ ಕಡಿಮೆ ,ನಿಮ್ಮನ್ನು ಬಂದು ನೋಡಲೋ ?"
"ನೀವು ಕೊಟ್ಟ ಔಷಧಿ ಇನ್ನೂ ತೆಗೆದುಕೊಂಡಿಲ್ಲ ,ಜ್ವರ ಹಾಗೆಯೇ ಇದೆ ಏನು ಮಾಡಲಿ ?"
ಈ ತರಹದ ಕಾಲ್ ಗಳು ನಾನು ಐ ಸಿ ಯು ನಲ್ಲಿ ಸೀರಿಯಸ್ ರೋಗಿಯನ್ನು ನೋಡುತ್ತಿರುವ ವೇಳೆ ,ಡ್ರೈವ್ ಮಾಡುವಾಗ
ಮುಂಜಾನೆ ಸ್ನಾನ ಅಥವಾ ಅಧ್ಯಯನ ಮಾಡುವ ವೇಳೆ ಬರುತ್ತವೆ .ಫೋನಾಯಿಸುವವರಿಗೆ ತಾವು ಮಾಡುತ್ತಿರುವ
ಅನಾನುಕೂಲತೆ ಯ ಬಗ್ಗೆ ಅರಿವೇ ಇರುವುದಿಲ್ಲ .ದುರದ್ರುಷ್ಟವಶಾತ್ ಈ ತರಹ ಮಾಡುವವರು ವಿದ್ಯಾವ೦ತರೆ.
ಮೊನ್ನೆ ಒಬ್ಬರಿಗೆ ಹೇಳಿದೆ ,ನೀವು ಇಂತಹ ವಿಷಯಗಳನ್ನು ಆಸ್ಪತ್ರೆಯ ಸ್ಥಿರವಾಣಿ ಗೆ ಸಂಪರ್ಕಿಸಿದರೆ ಒಳಿತಲ್ಲವೇ ಎಂದು .
ಅಷ್ಟಕ್ಕೆ ಅವರಿಗೆ ಕಂಡಾಬಟ್ಟೆ ಸಿಟ್ಟು.ಚರವಾಣಿಯಿದ ಸ್ತಿರ ಸ್ನೇಹಕ್ಕೆ ಬಂತಯ್ಯ ಕುತ್ತು !
ಇನ್ನು ಡಾಕ್ಟರ ಎಂದರೆ ಹಣವಂತರು ಎಂದು ಕೊಂಡು ಕಾರ್ ,ಆಸ್ತಿ ಮತ್ತು ಹಾಲಿಡೇ ರೆಸಾರ್ಟ್ಸ್ ಮಾರಾಟ ಮಾಡುವವರ
ಕಾಟ ಬೇರೆ ಇರುತ್ತದೆ .
ನಡುವೆ ರಾಂಗ್ ನಂಬರ್ ಗಳು
ಇವುಗಳೆನ್ನೆಲ್ಲಾ ಸಹಿಸುವಾಗ ಇದು ವರವೋ ಶಾಪವೋ ಎಂಬ ಜಿಜ್ಞಾಸೆ
( ಚಿತ್ರದ ಮೂಲ ವಿಕಿಪೀಡಿಯಕ್ಕೆ ಆಭಾರಿ.)
ಭಾನುವಾರ, ಸೆಪ್ಟೆಂಬರ್ 29, 2013
ಲವ್ ಇನ್ ಟೋಕಿಯೋ
ವಾಯಿತು. ಆಶಾ ಪರೇಖ್ ಮತ್ತು ಜಾಯ್ ಮುಖರ್ಜಿ ಮುಖ್ಯ ಪಾತ್ರದಲ್ಲಿ ಇದ್ದರು .
ಅದರಲ್ಲಿನ ಹಾಡುಗಳೆಲ್ಲ ಹಿಟ್ ಆದುವು .ಸಯನೋರ ಸಯನೋರ ,ಓ ಮೇರೆ
ಶಹೆಕುಬಾನ್ ಎಲ್ಲ್ಲರ ಬಾಯಲ್ಲಿ ಕೇಳಿ ಬರುತ್ತಿದ್ದುವು.
ಈ ಚಿತ್ರದಲ್ಲಿ ನಾಯಕಿ ಕೇಶ ಬಂಧನಕ್ಕೆ ಬಳಸಿದ ಸಾಧನ ಲವ್ ಇನ್ ಟೋಕಿಯೋ
ಎಂದು ಪ್ರಸಿದ್ಧವಾಯಿತು .ಎರಡು ಕಡೆ ಪ್ಲಾಸ್ಟಿಕ್ ಗೋಲಿಗಳು ,ನಡುವೆ ಕೇಶ ಬಂಧ
ದಾರ . ನಮಗೆ ಈ ಹೆಸರು ಏಕೆ ಬಂತು ಎಂಬ ಅರಿವು ಇರಲಿಲ್ಲ .ಅದು ನಮ್ಮ
ಬಾಯಲ್ಲಿ ಲವಿನ್ ಟಕಿ ಆಯಿತು .ಒಮ್ಮೆ ನನ್ನ ತಂಗಿ ತಂದೆಯವರು ಪೇಟೆಗೆ
ಹೋಗುವಾಗ ತನಗೆ ಒಂದು ಲವಿನ್ ಟಕಿ ತರಳು ಹೇಳಿದಳು .ತಂದೆಯವರು
ಅಂಗಡಿಗೆ ತಲಪುವಾಗ ಅವರ ಬಾಯಲ್ಲಿ ಅದು ಟ೦ಗ್ ಟಕಿ ಆಯಿತು .ಕೂದಲಿಗೆ
ಸಿಕ್ಕಿಸುವ ಸಾಧನ ಎಂದು ಹೇಳಿದ್ದರಿಂದ ಸರಿಯಾದ ವಸ್ತುವೇ ಮನೆಗೆ ಬಂತು.
ಈ ಚಿತ್ರದ ಒಂದು ಮಧುರ ಗಾನ ಆಲಿಸಲು
http://www.youtube.com/watch?feature=player_detailpage&v=Lv5StHC5OH8
ಶನಿವಾರ, ಸೆಪ್ಟೆಂಬರ್ 28, 2013
ಮುಂಜಾನೆ ವಾಕಿಂಗ್ ಹೊರಟಾಗ ಕಂಡಿದ್ದು
ದೂರದ ಕಾಡಿನಲ್ಲಿ ಮರಗಳು ಮಂಜಿನ ಮುಸುಕು ಹೊದೆದು ಮಲಗಿದ್ದವು .
ಹಕ್ಕಿಗಳು ಮರಿಗಳಿಗೆ ಮಗ್ಗಿ ಪಾಠ ಮಾಡುತ್ತಿದ್ದವು .
ಗಡಿಯಾರದ ಅಂಗಡಿ ಗಂಟೆಗಳಂತೆ ಒಂದೊಂದೇ ಕೋಳಿಗಳು ಅಲಾರಂ ಕೂಗುತ್ತಿದ್ದವು.
ಪೆಟ್ರೋಲ್ ಬ೦ಕಿನಲ್ಲಿ ಮಲಗಿದ್ದ ಬಸ್ ಗಳು ಎದ್ದು ಮೈಮುರಿದು ಓಡಿದವು .
ಮನೆಗಳಿಂದ ಒಗ್ಗರಣೆ ಪರಿಮಳ ,ಮಿಕ್ಷಿಗಳ ತಳಮಳ ,
ದೇವಳದ ಸುಪ್ರಭಾತ , ರೇಡಿಯೋ ಸಂಗೀತ ಗಳ
ಮಿಶ್ರಣ ಹಾಲು ಪತ್ರಿಕೆಯವರು ಸೂರ್ಯನಿಗೆ
ಬೆಂಗಾವಲು ಮೇಳ .
ಮಂಗಳವಾರ, ಸೆಪ್ಟೆಂಬರ್ 24, 2013
ಸಂಗೀತ ಪ್ರಧಾನ ಚಲನಚಿತ್ರಗಳು
ಅಸ್ವಾದಿಸಲ್ಪಡುತ್ತದೆ) ಇದು ೧೯೭೯ರಲ್ಲಿ ತೆರೆಕಂಡ ಸೂಪರ್ ಹಿಟ್ ತೆಲುಗು ಚಿತ್ರ ಶಂಕರಾಭರಣಂ ನ
ಆರಂಭ ನುಡಿಗಳು .ಕೆ ವಿ ಮಹಾದೇವನ್ ಅವರ ಸಂಗೀತ .ಚಿತ್ರ ಪೂರ್ಣ ಶಾಸ್ತ್ರಿಯ ನೆಲೆಯ ಹಾಡುಗಳು
.ಎಸ್ ಪಿ ಬಿ ,ಎಸ ಜಾನಕಿ ಹಿನ್ನಲೆ ಗಾಯಕಿಯರು
1985 ರಲ್ಲಿ ತೆರೆ ಕಂಡ ತಮಿಳ್ ಚಿತ್ರ ಸಿಂಧು ಭೈರವಿ .ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಈ ಚಿತ್ರಕ್ಕೆ
ಸಂಗೀತ ಕೊಟ್ಟವರು ಇಳಯರಾಜ .ಒಳ್ಳೆಯ ಹಾಡುಗಳಿವೆ .ಯೇಸುದಾಸ್ ,ಚಿತ್ರಾ ಅವರ ಕೊರಳು .
1986 ಕನ್ನಡದಲ್ಲಿ ಮಲಯ ಮಾರುತ ಚಿತ್ರ ಬಂತು.ವಿಜಯ ಭಾಸ್ಕರ್ ಸಂಗೀತದ ಈ ಚಿತ್ರದಲ್ಲಿ ಏಸುದಾಸ್ ವಾಣಿ
ಜಯರಾಂ ಹಾಡಿದ ಇಂಪಾದ ಗೀತೆಗಳಿವೆ
1990 ರಲ್ಲಿ ಬಂದ ಮಲಯಾಳಂ ಚಿತ್ರ ಹಿಸ್ ಹೈ ನೆಸ್ ಅಬ್ದುಲ್ಲ ಸಂಗೀತ ಪ್ರಿಯರು ಮಿಸ್ ಮಾಡಿಕೊಳ್ಳ ಬಾರದ
ನಿರ್ಮಾಣ.ಅಭಿನಯ ಕತೆ ಸಂಗೀತ ಎಲ್ಲಾ ಅತ್ಯುತ್ತಮ .ರವೀಂದ್ರನ್ ಅವರ ಸಂಗೀತ ದಲ್ಲಿ ಹಾಡಿದವರು ಎಂ ಜಿ
ಶ್ರೀಕುಮಾರ್ ,ಏಸುದಾಸ್ ,ನೆಯ್ಯತ್ತಕೆರ ವಾಸುದೇವನ್ .೧೯೯೧ರಲ್ಲಿ ತೆರೆ ಕಂಡ ಭರತನ್ ಇಂತಹದೇ ಇನ್ನೊಂದು
ಕೊಡುಗೆ .ಮೇಲಿನ ಎರಡು ಚಿತ್ರಗಳ ನಿರ್ಮಾಪಕರು ನಟ ಮೋಹನಲಾಲ್ .ನಿರ್ದೇಶನ ಸಿಬಿ ಮಲಯಿಲ್ .ಮಲಯಾಳದಲ್ಲಿ
ಇದಕ್ಕೂ ಮೊದಲು ಸ್ವಾತಿ ತಿರುನಾಳ್ ಎಂಬ ಸಂಗೀತ ಪ್ರಧಾನ ಚಿತ್ರ ಬಂದಿತ್ತು .ಅನಂತ್ ನಾಗ್ ನಾಯಕ.ಆದರೆ
ಕತೆಯ ಹಂದರ ದುರ್ಬಲವಾಗಿತ್ತು. ಮಲಯಾಳ ಚಲನಚಿತ್ರ ಹಾಡುಗಳು ಶಾಸ್ತ್ರಿಯ ಸಂಗೀತ ಮೂಲದವು ಹೆಚ್ಚು.ಚಿತ್ರ೦,
ಸರ್ಗಂ ,ಆರನ್ ತಂಬುರಾನ್ ಚಿತ್ರಗಳಲ್ಲಿ ಕ್ಲಾಸಿಕಲ್ ಹಾಡುಗಳಿವೆ .
ಆಂಟಿಬಯೋಟಿಕ್ ಮತ್ತು ಮನುಕುಲ ಎರಡನ್ನೂ ಉಳಿಸೋಣ
ಕ್ಷಯ , ನ್ಯುಮೋನಿಯಾ ,ಟೈಫಾಯಿಡ್ ,ಗುಹ್ಯ ರೋಗಗಳಿಗೆ ತಕ್ಕ ಔಷಧಗಳು ಬಂದು ಕೋಟ್ಯಂತರ ಜೀವಗಳು ಉಳಿದುವು .
ಆದರೆ ಇತ್ತೀಚಿಗೆ ರೋಗಾಣುಗಳು ,ಶಿವನಿಂದ ವರ ಪಡೆದ ರಾಕ್ಷಸರಂತೆ , ಹೊಸ ರೂಪದಲ್ಲಿ ಬರುತ್ತಿವೆ .ಯಾವ
ಆಂಟಿಬಯೋಟಿಕ್ ಗಳೂ ಇವನ್ನು ಕೊಲ್ಲಲಾರವು .ಇವು ಉಂಟು ಮಾಡುವ ಸಣ್ಣ ಮೂತ್ರದ ಸೋಂಕು (urinary infection)
ನ್ಯುಮೋನಿಯಾ ,ಕರುಳ ಸೋಂಕುಗಳು ರೋಗ ಪ್ರತಿರೋಧ ಕ್ಷಮತೆ ಇರುವವರಲ್ಲೂ ಪ್ರಾಣಾಂತಿಕ ಪರಿಸ್ತಿತಿ ಉಂಟು
ಮಾಡುತ್ತಿವೆ .ಶಕ್ತಿಶಾಲೀ ಆಂಟಿಬಯೋಟಿಕ್ ಗಳೂ ಇವುಗಳ ಮುಂದೆ ಸೋಲುತ್ತಿವೆ .
ಇದು ಸ್ಪೋಟಿಸಲು ಕಾಯುತ್ತಿರುವ ಟೈಮ್ ಬಾಂಬ್
ಅಮೇರಿಕಾ ದೇಶದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಈ ವಿಷಯ ವನ್ನು ಗಂಭೀರವಾಗಿ ತೆಗೆದುಕೊಂಡು ಇದನ್ನು
ಎದುರಿಸುವ ಮಾರ್ಗೋಪಾಯ ಗಳನ್ನು ಸೂಚಿಸಿದೆ .
ಈ ಸಮಸ್ಯೆ ಬಂದುದೇಕೆ ?
೧ ರೋಗಾಣುಗಳು ರೂಪ ರಚನೆ ಬದಲಿಸಿ ಕೊಂಡು ಬರುತ್ತಿರುವುದು
೨ ಯದ್ವಾ ತದ್ವಾ ಆಂಟಿಬಯೋಟಿಕ್ ಬಳಕೆ . ಅನಾವಶ್ಯಕವಾಗಿ ಆಂಟಿಬಯೋಟಿಕ್ ಉಪಯೋಗ .ಉದಾ : ಶೇಕಡಾ
೯೦ ಕ್ಕಿಂತಲೂ ಅಧಿಕ ಶೀತ ಜ್ವರ ,ಸೈನಸೈಟಿಸ್ ಸ್ಯಯಂ ಶಮನ ವಾಗುವ ವೈರಸ್ ಜನ್ಯ ಕಾಯಿಲೆಗಳು .ಇವುಗಳಿಗೆ
ಬ್ಯಾಕ್ಟೀರಿಯಾ ನಿರೋಧಕ ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಬಳಸುವರು .ಅಂತೆಯೇ ಹೆಚ್ಚಿನ ವಾಂತಿಭೇಧಿ
ಕಾಯಿಲೆಗಳಲ್ಲಿ ಜಲಮರುಪೂರಣ ಚಿಕಿತ್ಸೆ ಮಾತ್ರ ಸಾಕು .ಆದರೂ ವೈದ್ಯರೂ ,ರೋಗಿಗಳೂ ಎಲ್ಲಾ ಕಡೆ ಆಂಟಿಬಯೋಟಿಕ್
ದುರುಪಯೋಗ (abuse)ಮಾಡಿ ಈಗ ಅತೀ ಅವಶ್ಯಕತೆ ಇರುವಲ್ಲ್ಲಿ ಅವು ಕ್ರಿಯಾ ಹೀನ ವಾಗುವ ಸ್ತಿತಿ ಬಂದಿದೆ .
೩. ಮಾಂಸಕ್ಕಾಗಿ ಸಾಕುವ ಪ್ರಾಣಿ ಪಕ್ಷಿಗಳೂ ಆಂಟಿಬಯೋಟಿಕ್ ಗಳ ಬಳಕೆಯಿಂದ ತಮ್ಮಲ್ಲ್ಲಿ ರಾಕ್ಷಸೀ ಶಕ್ತಿಯ
ರೋಗಾಣುಗಳನ್ನು ಬೆಳೆಯಬಿಟ್ಟು ಸೇವಿಸಿದ ಮನುಷ್ಯರಲ್ಲಿ ಔಷಧಿಗೆ ನಾಟದ ರೋಗಗಳನ್ನು ಉಂಟು ಮಾಡುತ್ತಿವೆ
೩ ಅತಿಯಾದ ಸೂಕ್ಶ್ಮಾಣು ನಿರೋಧಕಗಳ ಬಳಕೆ .ಉದಾಹರಣೆಗೆ ಸೋಪ್ ,ಹಲ್ಲುಜ್ಜುವ ಪೇಸ್ಟ್ ,ಪಾತ್ರೆ ತೊಳೆಯುವ
ದ್ರಾವಣದಲ್ಲಿ .ಇದರಿಂದ ಶರೀರದ ಒಳ್ಳೆಯ ಮತ್ತು ನಿರುಪದ್ರವೀ ಬ್ಯಾಕ್ಟೀರಿಯಾ ಗಳು ನಾಶ ಹೊಂದಿ ರೋಗಾಣುಗಳು
ಅಟ್ಟಹಾಸ ಮಾಡುವ ಸನ್ನಿವೇಶ ಸೃಷ್ಟಿ ಆಗುತ್ತವೆ .ಜಾಹೀರಾತುಗಳಲ್ಲಿ ಇಂತಹ ಉತ್ಪನ್ನಗಳ ಬಗ್ಗೆ ನೋಡಿ ನೀವೂ
ಮರುಳಾಗಿರ ಬಹುದು ,\.
ನೆನಪಿಡಿ ನಮ್ಮ ತ್ವಚೆ ,ಬಾಯಿ , ದೊಡ್ಡ ಕರುಳು ,ಸ್ತ್ರೀಯರ ಜನನಾಂಗ ಗಳಲ್ಲಿ ನಿರುಪದ್ರವಿ ಮತ್ತು ರಕ್ಷಕ ಸೂಕ್ಶ್ಮಾಣು
ಗಳಿರುತ್ತವೆ.ಅವುಗಳನ್ನು ನಾಶ ಪಡಿಸುವುದು ಅನಾಹುತಕ್ಕೆ ದಾರಿಯಾದೀತು .
ಸಣ್ಣ ಮಕ್ಕಳ ಶೀತ ಜ್ವರಕ್ಕೆಲ್ಲಾ ಆಂಟಿಬಯೋಟಿಕ್ ಕೊಡಬೇಡಿ .ಅದಕ್ಕಾಗಿ ವೈದ್ಯರನ್ನು ಒತ್ತಾಯಿಸ ಬೇಡಿ .
ಸೋಮವಾರ, ಸೆಪ್ಟೆಂಬರ್ 23, 2013
ಅಕ್ಕ್ಕನ ಸಂಗೀತ ಪರಂಪರೆ
ನಮಗೆ ಚಿಕ್ಕಂದಿನಲ್ಲಿ ಅವಳ ಒಡನಾಟ ಇರಲಿಲ್ಲ .ನನಗೆ ಬುದ್ದಿ ತಿಳಿಯುವಾಗ ಅವಳ ಮದುವೆಯೂ ಆಗಿ ಹೋಗಿತ್ತು .
ಆಗಿನ ಒಂಬತ್ತು ದಿವಸಗಳ ಮದುವೆ ಯ ನೆನಪು ಅಲ್ಪ ಸ್ವಲ್ಪ ಇದೆ.ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ. ಕೇರಳ
ರಾಜ್ಯ ಕಾಸರಗೋಡು ಜಿಲ್ಲೆಯಲ್ಲಿದೆ.ಅಲ್ಲೇ ಸಮೀಪ ಗುತ್ತು ಎಂಬಲ್ಲಿ ವಿದ್ವಾನ್ ಗೋವಿಂದ ಭಟ್ ಎಂಬ ಪಿಟೀಲ್
ವಾದಕರಿದ್ದರು .ಅವರ ಮಗಳನ್ನು ನನ್ನ ದೊಡ್ಡಪ್ಪ ಸಿನಿಮಾ ನಟರಾಗಿದ್ದ ಗಣಪತಿ ಭಟ್ ವಿವಾಹವಾಗಿದ್ದುದರಿಂದ ನಮಗೆ
ನೆಂಟರೂ ಆಗಿದ್ದರು.ಅಕ್ಕ್ಕ ಅವರ ಶಿಷ್ಯೆಯಾಗಿ ಸಂಗೀತದ ಓನಾಮ ಕಲಿತುದಲ್ಲದೆ ಪಿಟೀಲು ನುಡಿಸುವುದಕ್ಕೂ ಕಲಿತಳು
.ಮನೆಗೆ ಬಂದಾಗ ರಾ ರಾ ವೇಣು ಗೋಪಾ ಬಾಲಾ ಹಾಡುತ್ತಿದ್ದ ನೆನಪಿದೆ
ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಪಿಟೀಲು ಅಟ್ಟಕ್ಕೆ ಏರಿದರೆ ದಿನ ನಿತ್ಯ ಜಂಜಡದಲ್ಲಿ ಸಂಗೀತ
ಮರೆಯಾಯಿತು .ಬಹಳ ವರ್ಷಗಳ ನಂತರ ಅಟ್ಟದಲ್ಲಿದ್ದ ಪಿಟೀಲು ತೆರೆದರೆ ಇಲಿ ಮರಿಗಳು ಅದರಿಂದ ಹೊರ ಬಂದವು
.ಅಕ್ಕನ ಮನೆಗೆ ಹೋಗಲು ಬಸ್ ಮಾರ್ಗದಿಂದ ೫ ಮೈಲು ನಡೆಯ ಬೇಕಿತ್ತು.ಹತ್ತಿರದ ಪೇಟೆ ಉಪ್ಪಿನಂಗಡಿ ಗೆ ಹೋಗಲು
ನೇತ್ರಾವತಿ ನದಿ ದಾಟ ಬೇಕು .ಎಂತಹ ಕುಗ್ರಾಮ ಎಂದು ಊಹಿಸಲೂ ಕಷ್ಟ .ಅಕ್ಕ ಹೆರಿಗೆಗೆಂದು ತವರಿಗೆ ಬಂದಾಗ
ರಜಾ ದಿವಸಗಳಲ್ಲಿ ನಾವು ಭಾವನಿಗೆ ಸಂಗಾತಿಗಳಾಗಿ ಇರುತ್ತಿದೆವು.ಅಲ್ಲಿ ಸಮಯ ಕಳೆಯುವುದು ಕಷ್ಟ ವಾಗುತ್ತಿತ್ತು .
ಬಾಣಸಿಗರಾಗಿ ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದೆವು.ಒಮ್ಮೆ ಅಕ್ಕಿ ರೊಟ್ಟಿ ಮಾಡಲು ಅಕ್ಕಿರುಬ್ಬಿ ಆದ ಮೇಲೆ ಉಪ್ಪು
ಹಾಕಲು ಮರೆತ ವಿಚಾರ ತಿಳಿಯಿತು.ರೊಟ್ಟಿ ಹಿಟ್ಟು ಗಟ್ಟಿಯಾಗಿರುವುದರಿಂದ ಆ ಮೇಲೆ ಉಪ್ಪು ಸೇರಿಸುವುದು ಕಷ್ಟ .ಆದರಿಂದ
ಸಾಂಭಾರಿನಲ್ಲಿ ಉಪ್ಪು ಇದೆಯಲ್ಲ ಎಂದು ಸೇರಿಸಿ ತಿಂದೆವು .ಅಕ್ಕನ ಮನೆಗೆ ಹೋಗುವುದು ಎಷ್ಟು ಸಂತೋಷಕರ
ವಿಷಯವೋ ಅಸ್ಟೇ ತವರಿನವರು ಬರುವಾಗ ಅಕ್ಕಂದಿರಿಗೆ .ಅದೊಂದು ಸಂಭ್ರಮ. ಈಗಿನ ತಲೆಮಾರಿನವರಿಗೆ
ಅರ್ಥವಾಗುವುದು ಸ್ವಲ್ಪ ಕಷ್ಟ .
ಅಂತಹ ಅಕ್ಕ ಎರಡು ಮಕ್ಕಳಾದ ಮೇಲೆ ಪುನಃ ಸಂಗೀತ ಅಭ್ಯಾಸ ತೊಡಗಿಸಿ ಕೊಂಡುದು ವಿಶೇಷ .ತನ್ನ ಮಗಳು
ಸಂಗೀತ ಅಭ್ಯಾಸ ಮಾಡುವಾಗ ತಾನೂ ಸೇರಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಉತ್ತೀರ್ಣ ಳಾದಳು.ಉರುವಾಲು
ಎಂಬ ಹಳ್ಳಿಯಲ್ಲಿ ಕಾಂಚನ ಐಯ್ಯರ್ ರವರ ಸಹಕಾರದಿಂದ ಸಂಗೀತ ಶಾಲೆ ಇವರ ಪ್ರಯತ್ನ ದಿಂದ ಶುರುವಾಯಿತು.
ಈಕೆಯ ಮಗಳು ಉಷಾ ಸಂಗೀತ ವಿದುಷಿ ,ಖ್ಯಾತ ಗಾಯಕಿ ಎಂ ಎಸ್ ಶೀ ಲಾ ಅವರ ಶಿಷ್ಯೆ.ಅವಳ ಮಗಳು
ಶಿಖಾ ವೃತ್ತಿಯಲ್ಲಿ ಇಂಜಿನಿಯರ್ ಅಧ್ಯಾಪಿಕೆ. .ಪ್ರವೃತ್ತಿ ಸಂಗೀತ .
ಇವರೆಲ್ಲರ ಸಂಗೀತ ಗಾಳಿ ನಮಗೆ ಬೀಸದೆ ಇರುತ್ತದೆಯೇ .ನಾವು ಅಣ್ಣ ತಮ್ಮ ಅಕ್ಕ ತಂಗಿಯರೂ ಸಂಗೀತ ಅಭಿಮಾನಿಗಳು .
ನಮ್ಮಲ್ಲಿ ಕೆಲವರು ಸಂಗೀತದ ವಿದ್ಯಾರ್ಥಿಗಳು .
ಒಳ್ಳೆಯ ಸಂಗೀತ ಕೊಡುವ ಆನಂದ ಬಲ್ಲವನೇ ಬಲ್ಲ .
ನೋಡಲೇ ಬೇಕಾದ ಮಲಯಾಳ ಚಿತ್ರ ೧ ಸಂದೇಶಂ
ಖ್ಯಾತ ನಿರ್ದೇಶಕ ಸತ್ಯನ್ ಅನ್ತಿಕಾಡ್ ಅವರು ನಟ ಚಿತ್ರ ಕತೆ ಗಾರ ಶ್ರೀನಿವಾಸನ್ ಅವರ ಕತೆಯನ್ನು ಆಧರಿಸಿ ನಿರ್ಮಿಸಿದ
ಈ ಚಿತ್ರವು ಮಲಯಾಳ ಚಿತ್ರ ರಂಗದಲ್ಲಿ ದಾಖಲೆ ಸೃಷ್ಟಿಸಿತು.
ಜೀವಮಾನ ಇಡೀ ತಮಿಳ್ನಾಡಿನಲ್ಲಿ ರೈಲ್ವೆ ನೌಕರನಾಗಿ ಕಳೆದು ಸುಖ ವಿಶ್ರಾಂತ ಜೀವನ ಹಂಬಲಿಸಿ ಊರಿಗೆ ಬಂದ
ರಾಘವನ್ ನಾಯರ್ ಅವರಿಗೆ ಪ್ರಭಾಕರನ್ ಮತ್ತು ಪ್ರಕಾಶನ್ ಇಬ್ಬರು ಗಂಡು ಮಕ್ಕಳು .ವಿದ್ಯಾವಂತರಾಗಿದ್ದರೂ
ಕೆಲಸಕ್ಕೆ ಹೋಗದೆ ರಾಜಕೀಯದಲ್ಲಿ ತೊಡಗಿಸಿ ಕೊಂಡ ಇವರಲ್ಲಿ ಒಬ್ಬನು ಎಡಪಂತೀಯ ರೆವೊಲ್ಯುಶನರಿ ಡೆಮೋಕ್ರಾಟಿಕ್
ಪಾರ್ಟಿ ಯಾದರೆ ಮತ್ತೊಬ್ಬನು ಇಂಡಿಯನ್ ನ್ಯಾಷನಲ್ ಸೆಕ್ಯುಲರ್ ಪಾರ್ಟಿ ಕಾರ್ಯಕರ್ತ .ಕೇರಳ ದಲ್ಲಿ ಸಾಮಾನ್ಯ ವಾಗಿ
ಕಂಡು ಬರುವ ಅತಿಯಾದ ಪೊಲಿಟಿಕಲ್ ಅವೇರ್ನೆಸ್ ಮತ್ತು ಇನ್ವಾಲ್ವ್ಮೆಂಟ್.
ಆರಂಭದಲ್ಲಿ ಮಕ್ಕಳ ಆಟವೆಂದು ತಿಳಿದು ಕೊಂಡರೆ ಇಬ್ಬರ ನಡವಳಿಕೆಗಳು ಅತಿರೇಕಕ್ಕೆ ಹೋದಾಗ ಶಾಸಿಸಿ ಮಕ್ಕಳನ್ನು
ದಾರಿಗೆ ತರುವ ಕತೆ .ಇದರಲ್ಲಿ ಹಲವು ಮೆಲುಕು ಹಾಕುವ ಸಂಭಾಷಣೆ ಗಳೂ .ಹಾಸ್ಯ ಸನ್ನಿವೇಶಗಳೂ ಇವೆ.
ನಟರೆಲ್ಲಾ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ಜೀವ ತುಂಬಿದ್ದಾರೆ .
ಕೊನೆಯ ಸಂಭಾಷಣೆ ಮೊದಲು ತಮ್ಮ ಮನೆಯನ್ನು ಸರಿ ಮಾಡಿ .ಮನೆ ನೋಡಿಕೊಳ್ಳದವರು ದೇಶ ಉದ್ಧಾರ ಮಾಡುವುದು
ಹೇಗೆ ?
ನೀವು ಈಗಾಗಲೇ ನೋಡಿರದಿದ್ದರೆ ನೋಡಿ .
ಭಾನುವಾರ, ಆಗಸ್ಟ್ 18, 2013
ಏರುತ್ತಿರುವ ಆತ್ಮಹತ್ಯಾ ಪ್ರಕರಣಗಳು
ನಳಿಗೆ ಹಾಕಿ ತೊಳೆದು ಪ್ರತಿ ವಿಷ ಕೊಡುತ್ತೇವೆ .ಆಸಿಡ್ ,ಎಣ್ಣೆ ಇತ್ಯಾದಿ ಸೇವಿಸಿದರೆ ಹೊಟ್ಟೆ ತೊಳೆಯುವುದು ನಿಷಿದ್ದ.
ಇತ್ತೀಚೆಗೆ ಆತ್ಮಹತ್ಯಾ ಪ್ರಕರಣಗಳು ಏರುತ್ತಿವೆ .ಕುಟುಂಬ ಕಲಹ ,ಪರೀಕ್ಷೆ ಪ್ರೇಮಪ್ರಕರಣದ ವೈಫಲ್ಯ ,ಸಾಲ ಬಾಧೆ ಹೀಗೆ
ಹಲವು ಕಾರಣಗಳು .ಇವು ಹಿಂದೆಯೂ ಇದ್ದವು .ಆದರೆ ಕೂಡು ಕುಟುಂಬ ಒಂದು ಶಾಕ್ ಅಬ್ಸೋಬರ್ ಆಗಿ ಕೆಲಸ
ಮಾಡುತ್ತಿತ್ತು .ಈಗ ಉದ್ವೇಗ ಸೃಷ್ಟಿಸುವ ವಾತಾವರಣ ಎಲ್ಲೆಲ್ಲೂ .ತಣಿಸುವ ಪರಿಸರ ಇಲ್ಲ.
ತಾಯಿ ಮಗುವಿಗೆ ಟಿ ವಿ ನೋಡುವುದು ಕಮ್ಮಿ ಮಾಡಿ ಸ್ವಲ್ಪ ಹೊರಗೆ ಆಡು ಅಥವಾ ಓದು ಎಂದುದೇ ಕಾರಣ ,ಅವಮಾನ
ದಿಂದ ಮಕ್ಕಳು ಜೀವ ಕೊನೆಗಾಣಿಸಲು ಯತ್ನಿಸುತ್ತವೆ .ಇದುವೇ ಪ್ರಕರಣಕ್ಕೆ ಅಮ್ಮನ ಬದಲು ಶಾಲೆಯ ಶಿಕ್ಷಕ ಕಾರಣ
ನಾದರೆ ಇಡೀ ಸಮಾಜ ಮತ್ತು ಮಾಧ್ಯಮಗಳು ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ.
ರೈತರು ಕೆಲವು ಸಾವಿರ ಸಾಲ ಮರು ಪಾವತಿ ಸಾಧ್ಯವಾಗಲಿಲ್ಲ ಎಂದು ಅಭಿಮಾನಕ್ಕೆ ಕುಂದು ಬಂದು ಆತ್ಮ ಹತ್ಯೆಗೆ
ಶರಣಾದರೆ ಉದ್ದೇಶ ಪೂರ್ವಕ ಕೋಟಿ ಕಟ್ಟಳೆ ಬಾಕಿ ಇಟ್ಟವರು ರಾಜಾರೋಷವಾಗಿ ಬದುಕುತ್ತಿದ್ದಾರೆ.ಸ್ವಾಭಿಮಾನದ ಎಲ್ಲೆ
ಎಲ್ಲಿ ವರೆಗೆ ಇರ ಬೇಕು ?
ಪ್ರವಾಹದಂತೆ ಕಾಲವು ಬದಲಾಗುತ್ತಿದೆ .ನಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟುದು ಎಂದು
ನಿಂತು ಯೋಚಿಸಲು ನಮಗೆ ವ್ಯವಧಾನ ಇಲ್ಲ .ಸಮಾಜದ ಸ್ವಾಸ್ಥ್ಯ ಕೆಟ್ಟಾಗ ವೈಯುಕ್ತಿಕ ಆರೋಗ್ಯದ ಮೇಲೂ ಪರಿಣಾಮ
ಬೀರುವುದು.
ಬೊಜ್ಜು ಎಂಬ ಕಾಯಿಲೆ
ಈಗ ಮಕ್ಕಳಲ್ಲೇ ಆರಂಭವಾಗುತ್ತಿದೆ.ಅತಿಯಾಗಿ ತಿನ್ನುವುದು,ಕಡಿಮೆ ಶರೀರ ಶ್ರಮ ಮೇಲ್ನೋಟಕ್ಕೆ ಕಾರಣವಾಗಿ ಕಂಡರೂ
ವಂಶವಾಹಿಗಳ ಪಾತ್ರವೂ ಕಂಡು ಬ೦ದಿದೆ.ಜಾಹಿರಾತುಗಳಲ್ಲಿ ಕಾಣುವ ಚಬ್ಬಿ ಮಕ್ಕಳೇ ಆರೋಗ್ಯವಂತರು ಎಂದು
ಹೆತ್ತವರ ನಂಬಿಕೆ ಅಸ್ಟು ಸರಿಯಲ್ಲ .
ಶರೀರ ಸಾಂದ್ರತೆ ಸೂಚಕಾಂಕ (ಬಾಡಿ ಮಾಸ್ ಇಂಡೆಕ್ಸ್ ): ಶರೀರದ ತೂಕ (ಕಿಲೋಗ್ರಾಂ ಗಳಲ್ಲಿ )
ಎತ್ತರ (ಮೀಟರ್ )Xಎತ್ತರ (ಮೀಟರ್ )
ಈ ಸೂಚಕಾಂಕ 30 ಕ್ಕಿಂತ ಹೆಚ್ಚು ಇದ್ದರೆ ಬೊಜ್ಜು ಎಂದು ಕರೆಯುತ್ತಾರೆ.
ಬೊಜ್ಜಿನಲ್ಲ್ಲಿಯೂ ಹೊಟ್ಟೆ ಸುತ್ತದ ಕೊಬ್ಬು ಹೆಚ್ಚು ಅಪಾಯಕಾರಿ.
ಅತಿಯಾದ ಕೊಬ್ಬು ಇರುವವರಲ್ಲಿ ಅತಿ ರಕ್ತದ ಒತ್ತಡ ,ಹೃದಯಾಘಾತ, ಸಕ್ಕರೆ ಕಾಯಿಲೆ ,ಸ್ಟ್ರೋಕ್
ಮನಸಿನ ಖಿನ್ನತೆ ಹೆಚ್ಚು ಕಂಡು ಬರುತ್ತದೆ.ಶರೀರದ ಭಾರ ತಾಳಲಾರದೆ ಕಾಲಿನ ಗಂಟುಗಳು ಅಕಾಲಿಕ ವಾಗಿ
ಸವೆದು ಸಂದಿವಾತ ಬರುತ್ತದೆ.ಅಲ್ಲದೆ ಸ್ತನ ,ಕರುಳು ಗಳ ಕ್ಯಾನ್ಸರ್ ಸ್ಥೂಲ ವ್ಯಕ್ತಿಗಳಲ್ಲಿ ಹೆಚ್ಚು.ಪಿತ್ತ ಕೋಶದ ಕಲ್ಲು ,ನಿದ್ರೆ
ಸಂಬಂದಿ ಕಾಯಿಲೆಗಳಿಗೂ ಅತಿ ಸ್ಥೂಲಕಾಯದವರಲ್ಲಿ ಹೆಚ್ಚು .ಕಮಲೇ ಕಮಲೋತ್ಪತ್ತಿ ಎಂದಂತೆ ಸ್ಥೂಲ ಕಾಯೇ ಸ್ಥೂಲ ಕಾಯೋತ್ಪತ್ತಿ.ಏಕೆಂದರೆ ಬೊಜ್ಜು ಶರೀರದವರಿಗೆ ನಡೆಯಲು ,ಕೆಲಸ ಮಾಡಲು ಬೇಗನೆ ಆಯಾಸ ಆಗುವುದರಿಂದ ತೂಕ ಇಳಿಕೆಯ ಮಾರ್ಗ ತಪ್ಪುವುದು .
ಮಿತಿಯಾದ ಆಹಾರ ,ವ್ಯಾಯಾಮ ಇವುಗಳಿಂದ ಒಂದು ಪರಿಧಿಯ ವರೆಗೆ ಈ ರೋಗವನ್ನು ಹತೋಟಿಯಲ್ಲಿ ಇಡ ಬಹುದು .
ಮೃಷ್ಟಾನ್ನ ಸಿಕ್ಕಿದಾಗ ಅದೃಷ್ಟವೆ೦ದು ಸಂಭ್ರಮಿಸದೆ ಮೈ ಮುರಿದು ಕೆಲಸ ಮಾಡಬೇಕಾದಾಗ ವಿಧಿಯ ಹಳಿಯದೆ ಇರಿ .
ಅದು ನಮಗೆ ದೈವ ಕೊಟ್ಟ ವರ ಇರ ಬಹುದು.
ಶುಕ್ರವಾರ, ಆಗಸ್ಟ್ 16, 2013
ಗೊರಕೆ
ಇಲ್ಲಿ ಸೌಂಡ್ ಇದ್ದ್ದರೂ ಒಳ್ಳೆಯ ನಿದ್ರೆ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಶ್ವಾಸ ಮಾರ್ಗದಲ್ಲಿ ಅಡಚಣೆ ಇರುವುದರಿಂದ
ಗೊರಕೆ ಉಂಟಾಗುವುದು.ಇದರಿಂದ ಕೆಲವೊಮ್ಮೆ ತಾತ್ಕಾಲಿಕ ಶ್ವಾಸ ಸ್ಥಂಭನ ಆಗ ಬಹುದು .ಗೊರಕೆ ಹೊಡೆಯುವವರು
ಹಟಾತ್ ಉಸಿರು ನಿಲ್ಲಿಸುವುದು ಕೇಳಿರಬಹುದು.ಇದನ್ನು ಸ್ಲೀಪ್ ಅಪ್ನಿಯ ಎಂದು ಕರೆಯುತ್ತಾರೆ.ಇದು ಒಂದು ಕಾಯಿಲೆ.
ಈ ತರಹದ ನಿದ್ರೆ ಇರುವವರು ಎದ್ದಾಗ ಇನ್ನೂ ಬಳಲಿದವರಂತೆ ಇರುವರು .ಹಗಲಲ್ಲೂ
ತೂಕಡಿಸುವರು .ತಲೆ ನೋವು ,ಯಾವುದೇ ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು ಇತ್ಯಾದಿ ಇದರ ಲಕ್ಷಣಗಳು.
ಕೆಲವೊಮ್ಮೆ ಹೃದಯ ಯದ್ವಾತದ್ವಾ ಬಡಿದುಕೊಳ್ಳ ಬಹುದು.
ಈ ಕಾಯಿಲೆಗೆ ತೃಪ್ತಿಕರ ಚಿಕಿತ್ಸೆ ಕಂಡು ಹಿಡಿದಿಲ್ಲ . ತೂಕ ಇಳಿಸುವುದು ,ಶ್ವಾಸ ಮಾರ್ಗ ದ ಅಡಚಣೆ ನಿವಾರಣಾ ಶಸ್ತ್ರ ಚಿಕಿತ್ಸೆ
ಉಸಿರಾಟಕ್ಕೆ ಕೃತಕ ಉಪಕರಣಗಳ ಬಳಕೆ ಇತ್ಯಾದಿ ಬಳಕೆಯಲ್ಲಿವೆ
ಆದುದರಿಂದ ಗೊರಕೆ ನಿದ್ರೆ ಸುಖ ನಿದ್ರೆ ಅಲ್ಲ , ರೋಗದ ಮುನ್ಸೂಚನೆ.
ಸೋಮವಾರ, ಜುಲೈ 29, 2013
ಕಾರ್ಡಿಯೋ ಮಯೋಪತಿ
ಕೆಲವೊಮ್ಮೆ ಆರೋಗ್ಯವಂತ ಕ್ರೀಡಾಳುಗಳು ಮೈದಾನದಲ್ಲಿ ಹಟಾತ್ ಹೃದಯ ಸ್ತಂಭನ ಆಗಿ ಸಾಯುವುದನ್ನ್ನು ಕೇಳಿದ್ದೇವೆ.
ಇದಕ್ಕೆ ಒಂದು ಪ್ರಮುಖ ಕಾರಣ ಈ ಕಾಯಿಲೆ.ಕೆಲವರಿಗೆ ಹುಟ್ಟಿದಾರಭ್ಯ ಹೃದಯದ ಮಾಂಸ ಖಂಡ ಗಳು ವಾಡಿಕೆಗಿಂತ
ಹೆಚ್ಚು ದಪ್ಪವಾಗಿರುತ್ತವೆ .ಇದನ್ನು ಹೈಪರ್ ಟ್ರೋಪಿಕ್ ಕಾರ್ಡಿಯೋ ಮಯೋಪಥಿ ಎಂದು ಕರೆಯುತ್ತಾರೆ.ಇಂಥವರಲ್ಲಿ
ಕೆಲವೊಮ್ಮ್ಮೆ ಹೃದಯ ಸಾಮಾನ್ಯವಾದ ಸಂಕುಚನ ವಿಕಸನಕ್ಕೆ ಬದಲಾಗಿ ಯದ್ವಾ ತದ್ವಾ ಕಂಪಿಸುತ್ತದೆ .(ventricular
fibrillation)ಇದರಿಂದ ರಕ್ತದ ಒತ್ತಡ ಕುಸಿದು ಮೆದುಳಿಗೆ ರಕ್ತ ಸರಬರಾಜು ನಿಂತು ವ್ಯಕ್ತಿ ಸಾವನಪ್ಪುತ್ತಾನೆ.
ಇದು ಹೃದಯದ ರಕ್ತನಾಳಗಳು ಬ್ಲಾಕ್ ಆಗಿ ಸಂಭವಿಸುವ ಸಾಮಾನ್ಯ ಹೃದಯಾಘಾತ ವಲ್ಲ.ಇಲ್ಲಿ ಮಾಂಸ
ಖಂಡಗಳ ಹುಟ್ಟು ವೈಕಲ್ಯದಿಂದಾಗಿ ಹೃದಯದ ಎಲೆಕ್ಟ್ರಿಕ್ ವ್ಯವಸ್ತೆ ಏರುಪೇರಾಗಿ ಸಂಭವಿಸುವ೦ತಹುದು.
ಇಂತಹ ರೋಗವನ್ನು ಆರಂಭದಲ್ಲಿ ಕಂಡು ಹಿಡಿದರೆ ಈ ತರಹದ ತೊಂದರೆ (ventricular fibrillation) ಬರದಂತೆ
ತಡೆಗಟ್ಟುವ ಮಾತ್ರೆಗಳನ್ನು ವೈದ್ಯರು ಕೊಡುತ್ತಾರೆ
ಹೃದಯದ ಸ್ಕ್ಯಾನ್ ಎಕೋ ಕಾರ್ಡಿಯೋ ಗ್ರಫಿ ಮೂಲಕ ಈ ರೋಗವನ್ನು ಪತ್ತೆ ಹಚ್ಚ ಬಹುದು.
ನಾರ್ಮಲ್ ಹೃದಯ ಮಾಂಸ ಖಂಡಗಳು ದಪ್ಪನೆ ಇರುವ ಹೃದಯ
.
ಶನಿವಾರ, ಜುಲೈ 27, 2013
ಬಳಪ ಒರೆಸುವ ಬಟ್ಟೆ
ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||
ಮುಂಜಾನೆ ವಾಕಿಂಗ್ ಹೋಗುವಾಗ ಸ್ಲೇಟು ನ ಒಂದು ತುಂಡು ಸಿಕ್ಕಿತು.ಒಡನೆ ನೆನಪಿಗೆ ಬಂದುದು ಕುಮಾರ ವ್ಯಾಸನ ಪದ್ಯ .ಹಲಗೆ
ಬಳಪವ ಹಿಡಿಯದೊಂದಗ್ಗಳಿಕೆ .ಸ್ಲೇಟು ಕಡ್ಡಿ ,ಪುಸ್ತಕ ಇಲ್ಲದೆ ಮಹಾ ಕಾವ್ಯ ರಚಿಸಿದ ಆತನನ್ನು ಮೆಚ್ಚಿದೆ.ಅವನ ಹೆಮ್ಮೆ ಸಕಾರಣ
ವಾದುದು. ನಾವು ಚಿಕ್ಕಂದಿನಲ್ಲಿ ಒಯ್ಯುತ್ತಿದ್ದ ಸ್ಲೇಟು ನೆನಪಿಗೆ ಬಂತು. ಮೊದಲ ಎರಡು ತರಗತಿಗಳಲ್ಲಿ ಅದುವೇ ನಮ್ಮ ಬರಹದ
ಅಂಗಣ.ವರ್ಷದ ಕೊನೆಯಲ್ಲಿ ಬಳಪದ ಚೌಕಟ್ಟು ಹೋಗಿ ರೊಟ್ಟಿಯಾಕಾರ ತಳೆಯುತ್ತಿತ್ತು.
ಸ್ಲೇಟು ಇದ್ದಾರೆ ಆಯಿತೆ? ಅದನ್ನು ಒರಸಲು ಬಟ್ಟೆ ನೀರು ಬೇಕು. ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳ ಬೋರ್ಡ್
ಒರಸುವ ಬಟ್ಟೆ ನೆನಪಿಗೆ ಬಂತು. ನಾವು ಹಳೆ ಬಟ್ಟೆಯ ತುಂಡನ್ನು ಬಳಪ ಒರಸಲು ಒಯ್ಯುತ್ತಿದ್ದೆವು.ಹಲವೊಮ್ಮೆ ಅಂಗಿ ಚಡ್ಡಿಗೆ
ಒರಸುತ್ತಿದ್ದೆವು .ಹುಡುಗಿಯರು ಲಂಗದ ಬಟ್ಟೆಗೆ .
ಬಟ್ಟೆ ಒದ್ದೆ ಮಾಡಲು ನೀರು ಬೇಕಲ್ಲ. ತಮ್ಮ ತಮ್ಮ ಲಾಲಾರಸವೆ ದ್ರವ.ಮಳೆಗಾಲದಲ್ಲಿ ಚಾವಣಿಯಿಂದ ಬೀಳುತ್ತಿದ್ದ ನೀರು.ಶಾಲೆಗೆ
ಹೋಗುವ ದಾರಿಯಲ್ಲಿ ನೀರು ಕಡ್ಡಿ ಎಂಬ ಸಣ್ಣ ಸಣ್ಣ ಸಸಿಗಳು ಸಿಗುತ್ತಿದ್ದವು. ಇವುಗಳ ಕಾಂಡದಿಂದ ಶುಧ್ಧವಾದ ನೀರು ಒಸರುತ್ತಿತ್ತು.
ಇವುಗಳನ್ನು ಕಟ್ಟು ಮಾಡಿ ಒಯ್ಯುತ್ತಿದ್ದೆವು. ಉಕ್ತ ಲೇಖನ ,ಕಾಪಿ ತಪ್ಪು ಬರೆದಾಗ ಅಧ್ಯಾಪಕರ ಬೆತ್ತದಿಂದ ಎರಡು ಬಿದ್ದಾಗ
ಬಂದ ಕಣ್ಣೀರೇ ಬಳಪವನ್ನು ಒದ್ದೆ ಮಾಡಿ ಕೊಡುತ್ತಿತ್ತು.
ಬಳಪ ದ ಕಡ್ಡಿ ,ಅಂದರ ತುಂಡುಗಳು ,ಕೆಲವೊಮ್ಮೆ ಕೊಳ್ಳುತ್ತಿದ್ದ ಬಣ್ಣದ ಕಡ್ಡಿಗಳೂ ನೆನಪಾದವು .ಬಳಪ ಚೀಲ ಗಳನ್ನ ಹೆಗಲಿಗೆ
ಹಾಕಿ ಅಕ್ಕನ ಕೈ ಹಿಡಿದು ನಡೆಯುತ್ತಿದ್ದ ದಿನಗಳು.
ಈಗ ಕಾಲ ಒಂದು ಪೂರ್ಣ ಸುತ್ತು ಹಾಕಿದೆ.ಈಗಿನ ಮಕ್ಕಳಿಗೂ ಹಲಗೆ ಬಳಪವ ಹಿಡಿಯದೆ ಕಲಿಯುವ ಅಗ್ಗಳಿಕೆ.ಕಂಪ್ಯೂಟರ್
ಟಚ್ ಸ್ಕ್ರೀನ್ ನಲ್ಲಿಯೇ ಬರೆಯುವ ದಿನಗಳಲ್ಲವೇ ?
ಮೇಲಿನ ಚಿತ್ರಗಳ ಮೂಲಗಳಿಗೆ ಆಭಾರಿ
ಗುರುವಾರ, ಜುಲೈ 25, 2013
ಎರಡು ಒಳ್ಳೆಯ ಕಾದಂಬರಿಗಳು
ಹಿಂದೆ ಓದಿದ ಎರಡು ಕಾದಂಬರಿಗಳು
. ಮೊದಲನೆಯದು ಖ್ಯಾತ ಮಲಯಾಳಿ ಬರಹಗಾರ ಡಾ
ಪುನಥಿಲ್ ಕುಂಞಬ್ದುಲ್ಲಾ ಅವರ ಕಾದಂಬರಿ ಸ್ಮಾರಕ ಶಿಲೈ ಗಳ್ ಯಇಂಗ್ಲಿಷ್ ಅನುವಾದ ಮೆಮೋರಿಯಲ್ ಸ್ಟೋನ್ ಸ್
.ಮಲಬಾರಿನ
ದೊಡ್ಡ ಮುಸ್ಲಿಂ ಮತೆತನದ ಕತೆ.ಅರಕ್ಕಲ್ ತರವಾಡಿನ ಪುಕ್ಕೊಯ ತಂಗಳ್.ಇದರ ಕಥಾನಾಯಕ.ಘನತೆ ,ಪುರೋಗಾಮಿ
ನಡೆ ,ತ್ಯಾಗಶೀಲತೆ ,ವಿದ್ಯಾ ಪಕ್ಷಪಾತ ಮತ್ತು ದಾನ ಶೀಲತೆ ಒಂದು ಕಡೆಯಾದರೆ ತೀರದ ಲೈಂಗಿಕತೆ ಇನ್ನೊಂದು
ಕಡೆ.ಕೊನೆಗೆ
ಈ ದೌರ್ಬಲ್ಯವೇ ಮನೆತನದ ಅವನತಿಗೆ ಕಾರಣವಾಗುವ ದುರಂತ.ಇವುಗಳ ನಡುವೆ ಆ ಊರಿನ ಅನೇಕ ವಿದ್ಯಮಾನಗಳು
ವರ್ಣಮಯವಾಗಿ ಮೂಡಿ ಬಂದಿವೆ.ಅನಾಥ ಮಗು ಕು೦ಞಾಲಿ ,ಮಗಳು ಪೂಕು೦ಞಿ,ಪತ್ನಿ ಅತ್ತಾಬಿ ಇತ್ಯಾದಿ ಮುಖ್ಯ
ಪಾತ್ರಗಳೊಡನೆ
ಶಾಲೆ ಅಧ್ಯಾಪಕರು ,ಮುಸ್ಲಿಯಾರ್ ಇತ್ಯಾದಿ ಗಳು ಲವಲವಿಕೆಯಿಂದ ಕೂಡಿದ್ದರೂ ಬರಹಗಾರ ಯಾವುದೇ
ಭಾವನಾತ್ಮಕತೆಯಿಂದ
ತನ್ನನ್ನು ದೂರ ಇಟ್ಟಿದ್ದಾನೆ.ಪುಸ್ತಕ ಕೆಳಗಿಟ್ಟಾಗ ಮುಗಿಯಿತೇ ಎಂದನಿಸುತ್ತದೆ.ಇವರ ಇನ್ನೊಂದು ಪ್ರಸಿದ್ಧ ಕೃತಿ ಮರುನ್ನು
ಕನ್ನಡದಲ್ಲಿ ಔಷಧಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.
ಇನ್ನೊಂದು ತಮಿಳು ಬರಹಾಗಾರ ತ್ಹೊಪ್ಪಿಲ್ ಮೊಹಮ್ಮದ್ ಮೀರಾನ್ ಅವರ ಕಾದಂಬರಿ ಚೈವು ನಾರ್ಕಾಲಿ ಯ ಇಂಗ್ಲಿಷ್
ಅನುವಾದ
ದಿ ರೆಕ್ಲೈನಿಂಗ್ ಚೇರ್.ಕಾದಂಬರಿ ಮಳೆಯ ವರ್ಣನೆಯೊಂದಿಗೆ ಆರಂಭವಾಗುತ್ತದೆ.ಇಡೀ ಕಾದಂಬರಿ ಮತ್ತು ಅದರ ಅನುವಾದ
ಹಿತವಾದ
ತಂಗಾಳಿಯಂತೆ ಇದೆ.ಕತೆ ಕನ್ಯಾಕುಮಾರಿ ನಾಗರಕೊಯಿಲ್ ಸರಹದ್ದಿನ ತಿರುವಾ೦ಕೂರ ಗೆ ಸೇರಿದ ಪ್ರದೇಶ.ಮಲಯಾಳ
,ತಮಿಳು
ಗಳ ಮಿಶ್ರಣ.ಕಥಾನಾಯಕ ಮುಸ್ತಾಫಾ ಕಣ್ಣು ದೊಡ್ಡ ತರವಾಡಿನ ಕೊನೆಯ ದುರಂತ ನಾಯಕ.ಆಲಸಿ,ಕಾಮುಕ.ಅವನ ಪತ್ನಿ
ಮರಿಯಂ ಅವನ ಹಿಂಸೆ ಮತ್ತು ಅವಗಣನೆಗೆ ಗುರಿಯಾಗ್ತ್ತಾಳೆ.ಅವಳ ಒಂದು ಮಾತು ಹೀಗಿದೆ ‘ನಾವು ಹೆಂಗಸರು
ಎಂದಾದರೂ
ಬದುಕಿದ್ದೆವೆಯೇ ?ನಾವು ಇಂಚು ಇಂಚಾಗಿ ಸಾಯುವುದು ಮಾತ್ರ.ದೇವರು ನಮ್ಮನ್ನು ಗಂಡಸರ ಕೈಯ್ಯಲ್ಲಿ ಸಾಯಲೆಂದೇ
ಹುಟ್ಟಿಸಿದ್ದಾನೆ.':
ಈ ಕಾದಂಬರಿಯಲ್ಲಿ ಮುಸ್ತಫಾನ ಭವ್ಯ ಮನೆ ಸೌದಾ ಮಂಜಿಲ್ ನ ಒಂದೊಂದು ವಸ್ತುವೂ ಒಂದು ರೋಚಕ ಕತೆ ಹೇಳುತ್ತದೆ.
ಬೆಳ್ಳಿಯ ಖಡ್ಗ ,ಶ್ರೀಗಂಧದ ಕಪಾಟು, ಕುಳಿತುಕೊಳ್ಳುವ ಕುರ್ಚಿ ಮತ್ತು ಸೌದಾ ಮಂಜಿಲ್ ,ಅದರ ಕೊಳ ಎಲ್ಲವಕ್ಕೂ
ಇತಹಾಸ ರೂಪದಲ್ಲಿ ಕತೆ ಹಣೆದಿದ್ದಾರೆ ಮೀರಾನ್.
ಎರಡು ಕಾದಂಬರಿಗಳ ಕತೆ ನಡೆದ ಊರು ಬೇರೆ ಬೇರೆಯಾದರೂ ಎರಡರಲ್ಲೂ ಬಹಳ ಸಾಮ್ಯತೆ ಇದೆ.ಎರಡೂ ದೊಡ್ಡ
ಮನೆತನದ ಅವನತಿಯ ಕತೆಗಳು.ಜಿನ್(ದೆವ್ವ),ಮಂತ್ರವಾದಿಗಳು,ಅಡಿಗೆ ಮನೆ ವರ್ಣನೆ ಇತ್ಯಾದಿ ಎರಡರಲ್ಲೂ ಸಾಕಷ್ಟಿವೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಅನುವಾದಗಳ ಪ್ರಕಾಶಕರು ಕೇಂದ್ರ ಸಾಹಿತ್ಯ ಅಕಾಡೆಮಿ.
ಬುಧವಾರ, ಜುಲೈ 24, 2013
ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಗಮನಿಸ ಬೇಕಾದ ಕೆಲವು ಅಂಶಗಳು
ರೋಗಿಯು ಪ್ರಜ್ಞಾ ಶೂನ್ಯ ಅಥವಾ ಅರೆ ಪ್ರಜ್ಞೆಯಲ್ಲಿ ಇದ್ದರೆ ಮಲಗಿಸಿಯೇ ಸಾಗಿಸಿ.ಕುಳ್ಳಿರಿಸ ಬೇಡಿ.ಇದರಿಂದ ಮೆದುಳಿಗೆ
ರಕ್ತ ಸಂಚಾರ ಉತ್ತಮವಾಗಿರುವುದಲ್ಲದೆ ಬಾಯಿಯಿಂದ ದ್ರವ ಶ್ವಾಸ ಕೋಶಕ್ಕೆ ಹೋಗುವುದು ತಪ್ಪುತ್ತದೆ.ನಿಂತಿರುವಾಗ
ತಲೆ ತಿರುಗಿ ಬಿದ್ದವರನ್ನು ಕುಳ್ಳಿರಿಸಲು ಯತ್ನಿಸ ಬಾರದು. ಇದರಿಂದ ಮೆದುಳಿನ ರಕ್ತದ ಓಟ ಕಡಿಮೆಯಾಗಿ ಇನ್ನಸ್ಟು
ತೊಂದರೆಯಾಗುವುದು. ಅಲ್ಲದೆ ವಾಂತಿ ಭೇದಿ ಯಿಂದಲೋ ಇನ್ನ್ನಿತರ ಕಾರಣ ಗಳಿಂದ ರಕ್ತದ ಒತ್ತಡ ಕಡಿಮೆಯಾಗಿ
ಇರುವಾಗ ತಲೆ ಕೆಳಗೆ ಇದ್ದರೆ ಗುರುತ್ವಾಕರ್ಷಣೆಯಿಂದ ರಕ್ತ ಮೆದುಳಿಗೆ ಹೋಗುವುದು.
ಪ್ರಜ್ಞಾ ಶೂನ್ಯ ನಾದ ವ್ಯಕ್ತಿಗೆ ಬಾಯಲ್ಲಿ ಏನನ್ನೂ ಕೊಡಲು ಹೋಗ ಬಾರದು.ಕೊಟ್ಟರೆ ಅದು ಶ್ವಾಸ ಕೋಶಕ್ಕೆ ಹೋಗಿ
ಶ್ವಾಸೋಸ್ವಾಸಕ್ಕೆ ತಡೆ ಉಂಟುಮಾಡುವುದಲ್ಲದೆ .ನ್ಯುಮೋನಿಯ ಕಾಯಿಲೆ ಬರುವುದು.
ರೋಗಿಗೆ ಅಪಸ್ಮಾರ ಬರುತ್ತಿದಿದ್ದರೆ ಒಂದು ಪಾರ್ಶ್ವಕ್ಕೆ ತಿರುಗಿಸಿ ಮಲಗಿಸಿರಿ.ಕಬ್ಬಿಣದ ವಸ್ತುಗಳನ್ನ್ನು ಕೈಯಲ್ಲಿ ಇಡಲು
ಪ್ರಯತ್ನಿಸ ಬಾರದು.ಇದು ದೊಡ್ಡ ಅವೈಜಾನಿಕ ನಂಬಿಕೆ .ಫಿಟ್ಸ್ ಮಾರುವಾಗ ಕಬ್ಬಿಣದ ತುಂಡು ತಾಗಿ ಗಾಯ ಯಾಗುವ ಸಂಭವ
ಇದೆ. ಪ್ರಜ್ಞೆಯಿಲ್ಲದ ವ್ಯಕ್ತಿ ವಾಂತಿ ಮಾಡಿದರೂ ಒಂದು ಪಾರ್ಶ್ವಕ್ಕೆ ತಿರುಗಿಸಿ ಮಲಗಿಸ ಬೇಕು.ಇದರಿಂದ ವಾಂತಿ ಶ್ವಾಸ
ನಾಳಕ್ಕೆ ಹೋಗುವುದು ತಪ್ಪುತ್ತದೆ. ಸ್ಟ್ರೋಕ್ ಆದ ರೋಗಿಯು ನೀರು ಕುಡಿಸುವಾಗ ಕೆಮ್ಮುತ್ತಿದ್ದರೆ ಬಾಯಲ್ಲಿ ಏನನ್ನ್ನೂ ಕೊಡ
ಬಾರದು .
ದಮ್ಮು ಇರುವ ಹೃದಯ ರೋಗಿಗಳು ಮತ್ತ್ತು ಅಸ್ಥಮಾ ರೋಗಿಗಳನ್ನು ಕುಳ್ಳಿರಿಸಿ ಆಸ್ಪತ್ರೆಗೆ ಒಯ್ಯ ಬೇಕು.ಮಲಗಿಸಿದರೆ
ದಮ್ಮು ಜಾಸ್ತಿ ಆಗುವುದು.
ಸುಟ್ಟಗಾಯ ಆದ ಜಾಗಕ್ಕೆ ತಣ್ಣೀರು ಹಾಕುತ್ತಿರ ಬೇಕು.ಇದರಿಂದ ಗಾಯದ ತೀವ್ರತೆ ಕಡಿಮೆ ಆಗುವುದು.
ಮೂಳೆ ಮುರಿತ ಇದ್ದರೆ ಆ ಭಾಗವನ್ನು ಚಲನೆ ಕಮ್ಮಿಯಿರುವಂತೆ ನೋಡಿ ಕೊಳ್ಳ ಬೇಕು.ಇದಕ್ಕೆ ಸಾಧ್ಯವಿದ್ದರೆ ಸ್ಲಿಂಗ್ ಅಥವಾ
ಸ್ಪ್ಲಿಂಟ್ ಉಪಯೋಗಿಸ ಬಹುದು.ಬೆನ್ನು ಮೂಳೆಗೆ ಏಟು ಆದವರನ್ನು ಅದಸ್ಟು ಕಡಿಮೆ ಚಲನೆಗೊಳಪದಿಸ ಬೇಕು.ಇದರಿಂದ
ಬೆನ್ನು ಹುರಿಗೆ ಅಪಾಯ ಕಡಿಮೆ ಆಗುವುದು.
ಸಾಗಿಸುವ ವಾಹನದಲ್ಲಿ ಗಾಳಿ ಚೆನ್ನಾಗಿ ಓಡುತ್ತಿರ ಬೇಕು.
ವಾಂತಿ ಭೇದಿಯಿಂದ ಬಳಲುತ್ತಿರುವ ರೋಗಿಗಳಿಗೆ ಎಚ್ಚರ ಇದ್ದರೆ ನೀರು ಕುಡಿಸುತ್ತಿರ ಬಹುದು
ಮಂಗಳವಾರ, ಜುಲೈ 23, 2013
ವೈದ್ಯರಿಂದ ರಚಿತವಾದ ಎರಡು ಒಳ್ಳೆಯ ಕಾದಂಬರಿಗಳು
ಒಂದು ಕಾವೇರಿ ನಂಬೀಶನ್ ಅವರು ಬರೆದ ಕಾದಂಬರಿ ದಿ ಹಿಲ್ಸ್ ಆಫ್ ಅಂಗ್ಹೇರಿ.ನಲ್ಲಿ ಎಂಬ ಬಯಲು ಸೀಮೆಯ ಹುಡುಗಿ ,ಶಾಲಾ ಮಾಸ್ತರರ ಮಗಳು ವೈದ್ಯೆಯಾಗಿ ತನ್ನ ಹಳ್ಳಿಯಲ್ಲಿ ಸೇವೆ ಸಲ್ಲಿಸುವ ಕನಸುಗಳೊಡನೆ ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ಕಲಿತು ಮುಂದೆ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ತನ್ನ ಹಳ್ಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗದಿದ್ದರೂ ಉತ್ತರ ಭಾರತದ ಒಂದು ಮೂಲೆಯಲ್ಲಿ ಸೇವಾ ಸಂಘಟನೆಯ ಆಸ್ಪತ್ರೆಯಲ್ಲಿ ,ಆ ಮೇಲೆ ಬೇರೆ ಬೇರೆ ಊರುಗಳಲ್ಲಿ ವೈದಯಕೀಯ ನೀತಿಗಳಿಗೆ ಭದ್ಧವಾಗಿ ಕೆಲಸ ಮಾಡುವ ಕತೆ.ವೈದ್ಯಕೀಯ ಪ್ರಪಂಚದ ಕೌತಕಗಳು,ಸಮಸ್ಯೆಗಳು,ಮೋಸ ವಂಚನೆಗಳು ಅನುಭವ ಉಳ್ಳ ವೈದ್ಯೆಯ ಲೇಖನಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸ್ವಲ್ಪ ಮಟ್ಟಿಗೆ ಆತ್ಮ ಕಥಾತ್ಮಕ.
ಕಾವೇರಿ ನಂಬೀಶನ್
ಕಾವೇರಿ ನಂಬೀಶನ್ ಕರ್ನಾಟಕದವರು.ಕೊಡಗಿನ ಮಾಜಿ ಮುಖ್ಯ ಮಂತ್ರಿ ,ಕೇಂದ್ರದ ರೈಲ್ವೆ ಸಚಿವ ,ರಾಜ್ಯಪಾಲರಾಗಿದ್ದ ಶ್ರೀ ಸಿ ಎಂ ಪೂಣಚ್ಚ ಅವರ ಮಗಳು ,ಶಸ್ತ್ರ ವೈದ್ಯ ತಜ್ಞೆ .
ಕಾದಂಬರಿಯ ನಾಯಕಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾಗ ಅವಳ ಗುರುಗಳು ಹೇಳುವ ಕಿವಿ ಮಾತು ಹೀಗಿದೆ.'’ ಸಾಯುತ್ತಿರುವ ರೋಗಿಯ ಬಳಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ.ನಾವು ವಿ. ಐ ಪಿ ಗಳನ್ನು ,ರಾಜವಂಶಜರನ್ನು ಸೇವಿಸಲು ಕಾಯುತ್ತಿರುತ್ತೇವೆ ,ಆದರೆ ಸಾವಿನ ದವಡೆಯಲ್ಲಿ ಇರುವ ರೋಗಿಯೇ ನಮಗೆ ರಾಜ.’
ಇನ್ನೊಂದು ಪಾರಾ ಹೀಗಿದೆ.
‘ಅವಳು (ಡಾ ನಲ್ಲಿ ) ಬೋರಯ್ಯ್ಯನ ಸ್ತಬ್ಧವಾದ ಹೃದಯವನ್ನು ಖಚಿತ ಪಡಿಸಿ ಸ್ತೇಥೋಸ್ಕೋಪ್ ಕಿವಿಯಿಂದ ತೆಗೆದು ಬಂಧುಗಳಲ್ಲಿ ಹೇಳ ತೊಡಗಿದಳು .ಅದು ವರೆಗೆ ಅವಳ ಪ್ರತಿಯೊಂದು ಶಬ್ದಕ್ಕೂ ಜೋತು ಬೀಳುತ್ತಿದ್ದವರು ಈಗ ಅವಳನ್ನು ತಿರಸ್ಕಾರದಲ್ಲಿ ನೋಡಲಾರಂಬಿಸಿದರು .ಈ ತನಕ ಬಹಳ ಮುಖ್ಯವೆನಿಸಿದ್ದ ಅವಳ ಕೈಗಳು ಮರದ ಕೊರಡುಗಳಂತೆ ಇಕ್ಕಡೆ ಜೋತು ಬಿದ್ದಿದ್ದವು.ಔಷಧಿ ಟ್ರಾಲಿ, ಐ ವಿ ಲೈನ್ ,ಟ್ಯೂಬುಗಳು ಕ್ಯಾತಿಟರ್ಗಳು ,ಇಂಜೆಕ್ಷನ್ಗಳು ,ಬಿ ಪಿ ಕಫ್ ಗಳು ಎಲ್ಲಾ ನಿರುಪರುಕ್ತ ವಾಗಿ ತೋರಿದವು.ಡಾಕ್ಟರ್ ಎದುರಿಸ ಬೇಕಾದ ಕಷ್ಟಗಳಲ್ಲಿ ಇದು ಅತೀ ಕಠಿಣವಾದುದು’
ಇನ್ನೊಂದು ಉತ್ತಮ ಕಾದಂಬರಿ ಡಾ ಅಬ್ರಹಾಂ ವೆರ್ಗ್ಹಿಸ್ ಅವರ ಕಟಿಂಗ್ ಫಾರ್ ಸ್ಟೋನ್ .ಇದು ವೈದ್ಯ ಜಗತ್ತಿನ ಸವಾಲು ,ಸೋಲು ಗೆಲುವು , ಮನುಷ್ಯ ಪ್ರೀತಿ ಪ್ರೇಮಗಳ ಸುಂದರ ಚಿತ್ರಣ.ಆಫ್ರಿಕಾ ಖಂಡದ ಇತಿಯೋಪಿಯಾ ನಾಡಿನ ರಾಜಧಾನಿ ಅಡಿಸ್ ಅಬಾಬದ ಕಾಲ್ಪನಿಕ ಆಸ್ಪತ್ರೆ ‘ಮಿಸ್ಸಿಂಗ್” ಕಾದಂಬರಿಯ ಕಾರ್ಯ ಕೇಂದ್ರ. ಮಾರಿಯೋನ್ ಮತ್ತು ಶಿವ ಸ್ಟೋನ್ ಭಾರತೀಯ ನನ್ ಸಿಸ್ಟರ್ ಮತ್ತು ಬ್ರಿಟಿಶ್ ಸರ್ಜನ್ ಅವರ ಗುಪ್ತ ಪ್ರಣಯದಲ್ಲಿ ಜನಿಸಿದ ಅವಳಿ ಜವಳಿಗಳು .ಇವರ ತಾಯಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದರೆ ತಂದೆ ಹೇಳದೇ ಊರು ಬಿಟ್ಟು ಹೋಗಿರುತ್ತಾರೆ.ಭಾರತೀಯ ಮೂಲದ ವೈದ್ಯೆ ಹೇಮಾ ಇವರಿಗೆ ತಾಯಾಗುತ್ತಾಳೆ .ಅವಳಿ ಜವಳಿ ಗಳಾದರೂ ಇಬ್ಬರ ನಡೆ ನುಡಿ ಅಭಿರುಚಿಗಳಲ್ಲಿ ಅಜ ಗಜಾಂತರ.ಮುಂದೆ ಅಮೇರಿಕಾ ಕ್ಕೂ ಹರಡುವ ಕತೆಯಲ್ಲಿ ಇತಿಯೋಪಿಯಾ ದ ಅನಿಶ್ಚಿತ ರಾಜಕೀಯ ಮತ್ತು ಜನಜೀವನದ ಚಿತ್ರಣ ಕೊಟ್ಟಿದ್ದಾರೆ.ಕೊನೆ ವರೆಗೂ ಕೌತುಕ ಕಾಯ್ದು ಕೊಳ್ಳುವ ಕೃತಿ.
ಡಾ ಅಬ್ರಹಾಂ ವೆರ್ಗ್ಹಿಸ್ ಭಾರತೀಯ ಮೂಲದ ವೈದ್ಯ ,ಈಗ ಅಮೆರಿಕಾದಲ್ಲಿ ಪಿಸಿಶಿಯನ್ ಮತ್ತು ಬರಹಗಾರರಾಗಿ ಬಹಳ ಹೆಸರು
ಗಳಿಸಿದ್ದಾರೆ. ಅನಿವಾಸಿ ಭಾರತೀಯ ಶಿಕ್ಷಕ ತಂದೆ ತಾಯಿಗಳ ಪುತ್ರನಾದ ಇವರ ಜನನ ಇಥಿಯೋಪಿಯಾ ದಲ್ಲಿ ಆಯಿತು.ಮುಂದೆ ಅಮೇರಿಕಾ ನಾಡಿಗೆ ವಲಸೆ ಹೋದ ಇವರು ಎಂ ಬಿ ಬಿ ಎಸ್ ಮಾಡಿದ್ದು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ .ಪ್ರಸಿದ್ದ ವೈದ್ಯ ಮತ್ತು ಲೇಖಕ .
ಶಿಕ್ಷಕ ಡಾ ಕೆ ವಿ ತಿರುವೆಂಗಡಂ ಇವರ ಆದರ್ಶ .ರೋಗಿಗಳ ರೋಗ ವಿವರ ತೆಗೆದು ಕೊಳ್ಳುವುದು ಮತ್ತು ಪರೀಕ್ಷೆಗೆ ಹೆಚ್ಚು ಒತ್ತು
ನೀಡುವ ಪರಂಪರೆ. ಕ್ಷ ರೇ .ರಕ್ತ ಪರೀಕ್ಷೆ , ಸ್ಕ್ಯಾನ್ ಗಳು ಆ ಮೇಲೆ ಆವಶ್ಯವಿದ್ದರೆ ಮಾತ್ರ .
ಡಾ ಅಬ್ರಹಾಂ ವರ್ಗ್ಹಿಸ್
ಇವರ ಇನ್ನೆರಡು ಕೃತಿಗಳಾದ ದಿ ಟೆನಿಸ್ ಪಾರ್ಟ್ನರ್ ಮತ್ತು ಮೈ ಓನ್ ಕಂಟ್ರಿ ಗಳೂ ಓದುಗರ ಮನ ಗೆದ್ದಿವೆ.
ಶುಕ್ರವಾರ, ಜುಲೈ 19, 2013
ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಊತ(Benign hyperplasia of Protate)
ಗಂಡಸರಲ್ಲಿ ಪ್ರಾಸ್ಟೇಟ್ ಎಂಬ ಗ್ರಂಥಿಯಿದೆ.ಮುತ್ರಾಶಯದ ಹಿಂದೆ ಮತ್ತು ಗುದ ನಾಳದ ಮುಂದೆ ಇರುವ ಈ ಗ್ರಂಥಿಯು ಮೂತ್ರ
ನಾಳವನ್ನು ಸುತ್ತುವರಿಯುತ್ತದೆ.ಕ್ಷಾರಯುಕ್ತವಾದ ಇದರ ಸ್ರಾವ ವೀರ್ಯಾಣುಗಳ ರಕ್ಷಣೆ ಮಾಡುತ್ತದೆ.ಮಧ್ಯ ವಯಸ್ಸು ಕಳೆದಂತೆ ಈ
ಗ್ರಂಥಿಯು ಉಬ್ಬಿಕೊಳ್ಳುತ್ತದೆ.ಇದನ್ನೇ ಪ್ರಾಸ್ಟೇಟ್ ನ ಸಾಮಾನ್ಯ ಊತ ಎಂದು ಕರೆಯುತ್ತಾರೆ.
ಪ್ರಾಸ್ಟೇಟ್ ಊತದ ಲಕ್ಷಣಗಳು .
೧.ಆಗಾಗ್ಗೆ ಮೂತ್ರ ವಿಸರ್ಜನೆ ಆಗುವುದು.ಮೂತ್ರ ಹಿಡಿದಿಟ್ಟುಕೊಳ್ಳಲು ಆಗದಿರುವುದು.
೨ ಮೂತ್ರ ಕಟ್ಟಿ ಕಟ್ಟಿ ಹೋಗುವುದು.
೩ ಮೂತ್ರ ವಿಸರ್ಜನೆಯ ನಂತರವೂ ಮೂತ್ರಾಶಯದಲ್ಲಿ ತುಂಬಾ ಮೂತ್ರ ಉಳಿಯುವುದು.
೪ ಆಗಾಗ್ಗೆ ಮೂತ್ರದ ಸೋಂಕು ಆಗಿ ಉರಿ ಮೂತ್ರ ,ಅದರಿಂದ ಜ್ವರ ಬರುವುದು.
೫. ಕೆಲವು ಬಾರಿ ಏಕಾ ಏಕಿ ಮೂತ್ರ ಬಂದ್ ಆಗಿ ಕೆಳ ಹೊಟ್ಟೆ ನೋವಿನಿಂದ ಊದುವುದು
ಮಧ್ಯ ವಯಸ್ಸಿನ ಗಂಡಸು ಮೇಲಿನ ಲಕ್ಷಣಗಳೊಡನೆ ಬಂದರೆ ವೈದ್ಯರು ಪ್ರಾಸ್ಟೇಟ್ ನ ಊತ ವನ್ನು ಶಂಕಿಸುವರು.
ಗುದ ನಾಳದಲ್ಲಿ ಬೆರಳಿಟ್ಟು ಪರೀಕ್ಷಿಸಿದಾಗ ಪ್ರಾಸ್ಟೇಟ್ ಉಬ್ಬಿದುದನ್ನು ಕಂಡು ಹಿಡಿಯ ಬಲ್ಲುದಲ್ಲದೆ ,ಅನುಭವದಿಂದ ಪ್ರಾಸ್ಟೇಟ್ ನ
ಗಂಭೀರ ಕಾಯಿಲೆ ಕ್ಯಾನ್ಸರ್ ನ್ನೂ ಶಂಕಿಸ ಬಹುದು.
ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕ ಪ್ರಾಸ್ಟೇಟ್ ನ ಗಾತ್ರ ಹೆಚ್ಚು ಕಡಿಮೆ ನಿಖರವಾಗಿ ಗೊತ್ತು ಮಾಡ ಬಹುದು.ಮೂತ್ರ ವಿಸರ್ಜನೆಯ
ನಂತರ ಮುತ್ರಾಶಯದಲ್ಲಿ ಉಳಿಯುವ ಮೂತ್ರದ ಪ್ರಮಾಣವನ್ನೂ ಸ್ಕ್ಯಾನ್ ಮೂಲಕ ನಿರ್ದರಿಸುತ್ತಾರೆ. ಈ ಅಳತೆ ೫೦ ಎಂ.ಎಲ್
ಗಿಂತ ಜಾಸ್ತಿ ಇದ್ದರೆ ಮೂತ್ರ ವಿಸರ್ಜನೆಗೆ ಪ್ರಾಸ್ಟೇಟ್ ಊತದಿಂದ ತಡೆಯಾಗುತ್ತಿದೆ ಎಂದು ಅರ್ಥ .
ಚಿಕಿತ್ಸೆ
ಮೂತ್ರ ವಿಸರ್ಜನೆ ಸಂಪೂರ್ಣ ಬ್ಲಾಕ್ ಆದರೆ ತತ್ಕಾಲಕ್ಕೆ ಕೃತಕ ನಾಳ (ಕ್ಯಾತಿಟರ್ ) ಹಾಕುವರು.
ಪ್ರಾಸ್ಟೇಟ್ ಊತವನ್ನು ಕಮ್ಮಿ ಮಾಡುವ ಮಾತ್ರೆಗಳು ಲಭ್ಯವಿವೆ.ಇವುಗಳಲ್ಲಿ ಆಲ್ಫಾ ಎಡ್ರಿನರ್ಜಿಕ್ ಬ್ಲೋಕೆರ್ಸ್ ಉದಾ
ಪ್ರಜೊಸಿನ್ ,ತಮ್ಸುಲೋಸಿನ್ ಇತ್ಯಾದಿ .ಪ್ರಾಸ್ಟೇಟ್ ಗ್ರಂಥಿಯ ಊತಕ್ಕೆ ಗಂಡು ಹಾರ್ಮೋನ್ ಗಳೂ ಕಾರಣ ವಾದುದರಿಂದ
ಈ ಹಾರ್ಮೋನ್ ಗಳನ್ನು ಕಮ್ಮಿ ಮಾಡುವ ಔಷಧಿಗಳೂ ಬಳಕೆಯಲ್ಲಿ ಇವೆ.
ಔಷಧಿಯಿಂದ ಕಾಯಿಲೆ ಹತೋಟಿಗೆ ಬರದಿದ್ದರೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ .ಇದರಲ್ಲಿ ಮೂತ್ರ ನಾಳದ ಮೂಲಕ ಉಪಕರಣ ಹಾಯಿಸಿ
ಮೂತ್ರ ನಾಳಕ್ಕೆ ಉಬ್ಬಿರುವ ಪ್ರಾಸ್ಟೇಟ್ ನ ಅಂಶವನ್ನು ಕತ್ತರಿಸುವ ಟ್ರಾನ್ಸ್ ಯುರೆತ್ರಿಕ್ ಪ್ರಾಸ್ಟೇಟಿಕ್ ರಿಸೆಕ್ಕ್ಶನ್ (ಟಿ.ಯು.ಆರ್.ಪಿ)
ಜನಪ್ರಿಯ. ಇತ್ತೀಚಿಗೆ ಪ್ರಾಸ್ಟೇಟ್ ಕತ್ತರಿಸಲು ಲೇಸರ್ ನ್ನೂ ಬಳಸುತ್ತಾರೆ. ಇಡೀ ಪ್ರಾಸ್ಟೇಟ್ ನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯೂ ಇದೆ.
ಸೋಮವಾರ, ಜುಲೈ 15, 2013
ಅಸ್ತಮಾ ಕಾಯಿಲೆ
ಅಸ್ಥಮಾ ಕಾಯಿಲೆ ಅನುವಂಷಿಕ ಹಾಗೂ ಅಲರ್ಜಿ ಯಿಂದ ಬರುತ್ತದೆ.ಅಲರ್ಜಿ ಉಂಟು ಮಾಡುವ ವಸ್ತುಗಳಿಗೆ ಅಲ್ಲರ್ಜನ್
ಎಂದು ಕರೆಯುತ್ತಾರೆ.ಇಂತಹ ವಸ್ತುಗಳ ಸಂಖ್ಯೆ ಈಗ ಹೆಚ್ಚುತ್ತಿದೆ.ವಾಯು ಕಲ್ಮಶಗಳು ,ಹೂವಿನ ಪರಾಗ ಇತ್ಯಾದಿ ವಸ್ತುಗಳು ಅಲರ್ಜಿ ಕಾರಕಗಳು
ಅಸ್ಥಮಾ ಕಾಯಿಲೆಯಲ್ಲಿ ಶ್ವಾಸ ನಾಳಗಳ ಒಳಪದರ ಉಬ್ಬಿಕೊಂಡು ನಾಳದ ರಂದ್ರ ಸಂಕುಚಿತ ಗೊಳ್ಳುತ್ತದೆ .ಆದುದರಿಂದ
ಶ್ವಾಸ ಕೋಶದಿಂದ ಉಸಿರು ಹೊರ ಹೋಗುವಾಗ ತಡೆ ಉಂಟಾಗಿ ದಮ್ಮು ಕಟ್ಟಿದ ಅನುಭವ ಮತ್ತು ಸುಯಿ ಸುಯಿ ಎಂಬ
ಶಬ್ದ ಉಂಟಾಗುತ್ತದೆ.ಸಣ್ಣ ನಳಿಗೆ ಯೋಳಗಿಂದ ಜೋರಾಗಿ ಗಾಳಿ ಊದಿ ಶಬ್ದ ಬರಿಸುವ ಆಟ ಮಕ್ಕಳು ಆಡುತ್ತಾರಲ್ಲವೇ
ಅಂತೆಯೇ.
ನಾರ್ಮಲ್ ಆಸ್ತಮಾ ರೋಗಿ ಶ್ವಾಸ ನಾಳ
ಹಾಸಿಗೆಯಲ್ಲಿ ಧೂಳು ಕ್ರಿಮಿ (dust mite) ಎಂಬ ಅಲರ್ಜಿ ಕಾರಕ ಕುಳಿತು ಕೊಳ್ಳುತ್ತದೆ.ಹಿಂದೆ ಮಲಗಿದ ಚಾಪೆ ಮಡಿಚಿ ಇಡುತ್ತಿದ್ದರು .ಈಗ
ಕಡಿಮೆ.ಆದ್ದುದರಿಂದ ಈ ಕ್ರಿಮಿಗಳು ಹಾಸಿಗೆಯಲ್ಲಿ ಹೆಚ್ಚು ಹೆಚ್ಹು ತಳವೂರಿ ನಾವು ಮಲಗುವಾಗ ತಮ್ಮ ಪ್ರತಿಭೆ ತೋರಿಸುತ್ತವೆ.
ಇದಲ್ಲದೆ ಸೊಳ್ಳೆ ಓಡಿಸಲೆಂದು ಫ್ಯಾನ್ ಹಾಕಿ ಮಲಗುತ್ತ್ತೇವೆ. ಇದರಿಂದ ಗಾಳಿ ಯಲ್ಲಿ ಈ ಕ್ರಿಮಿಗಳು ಸೇರಿಕೊಳ್ಳುವವು ಅಲ್ಲದೆ ಫ್ಯಾನ್ ಗಾಳಿಯಿಂದ ಶ್ವಾಸ ನಾಳದ ನೈಸರ್ಗಿಕ
ಆರ್ದ್ರತೆಯನ್ನು ಕಡಿಮೆ ಆಗುವುದು .ಇದೂ ಶ್ವಾಸ ನಾಳದ ಉತ್ಪ್ರೇಕ್ಷಿತ ಪ್ರತಿಕ್ರಿಯೆ ಗೆ (Hyper responsiveness) ಕಾರಣ ಇರ
ಬಹುದು.
ಅಸ್ತಮಾ ರೋಗಿಗೆ ಉಸಿರಾಟ ಕಷ್ಟವಾಗುವುದು .ಅಲ್ಲದೆ ಶಬ್ದದಿಂದ ಕೂಡಿರುವುದು.
ಚಿಕತ್ಸೆ
ಇತ್ತೀಚೆಗೆ ಅಸ್ಥಮಾ ಕಾಯಿಲೆಗೆ ಒಳ್ಳೆಯ ಔಷಧಿಗಳು ಬಂದಿವೆ.ಶ್ವಾಸನಾಳಗಳನ್ನು ವಿಕಸಿಸಿಸುವಂತಹ ಔಷಧಿಗಳಿಗೆ
ಇಂಗ್ಲಿಷ್ ನಲ್ಲಿ ಬ್ರೊಂಕೋ ಡಯ ಲೇಟರ್ ಎನ್ನುತ್ತಾರೆ .ಉದಾ ; ಸಾಲ್ಬು ಟಮೋಲ್, ಟರ್ಬುಟಲಿನ್ .ಇವು ಗುಳಿಗೆ ,ಸೇದುವ
ಮಾತ್ರೆ ,ಮತ್ತು ಸೇದುವ ಗಾಳಿ (ಇನ್ಹೆಲ ರ್ ) ರೂಪದಲ್ಲಿ ಬರುತ್ತವೆ.ಇದರಲ್ಲಿ ಸೇದುವ ಮಾರ್ಗ ಉತ್ತಮ. ಏಕೆಂದರೆ
ಈ ವಿಧಾನದಲ್ಲಿ ಔಷಧ ನೇರ ಶ್ವಾಸಕೋಶಕ್ಕೆ ಹೋಗಿ ಸಂಕುಚನ ಗೊಂಡ ನಾಳವನ್ನು ಕೂಡಲೇ ವಿಕಸನ ಗೊಳಿಸುವುದು.
ಮಾತ್ರೆಗಲಾದರೋ ಹೊಟ್ಟೆಯಿಂದ ರಕ್ತಕ್ಕೆ ಸೇರಿ ನಿದಾನವಾಗಿ ಶ್ವಾಸನಾಳಕ್ಕೆ ತಲುಪುವವು.ಅಲ್ಲದೆ ಈ ವಿಧಾನದಲ್ಲಿಔಷಧ ಶರೀರದ ಎಲ್ಲಾ ಅಂಗಗಳಿಗೆ ಅನಾವಶ್ಯಕ ಹೋಗುವುದು.ಸೇದುವ ಮಾತ್ರೆ ಮತ್ತು ಇನ್ಹಲರ್ ನಲ್ಲಿ ಔಷಧಿ ಮೈಕ್ರೋ
ಗ್ರಾಂ ಅಂದರೆ ಮಿಲಿಗ್ರಾಂ ನ ಸಾವಿರದ ಒಂದು ಭಾಗದಷ್ಟು ಇದ್ದರೆ ತಿನ್ನುವ ಮಾತ್ರೆಗಳಲ್ಲಿ ಮಿಲಿಗ್ರಾಂ ನಲ್ಲಿ ಇರುತ್ತವೆ,ಆದರಿಂದ
ತಿನ್ನುವ ಮಾತ್ರೆಗಳೇ ಹೆಚ್ಚು ಸ್ಟ್ರಾಂಗ್.ಅಡ್ಡ ಪರಿಣಾಮಗಳು ಸೇದುವ ರೂಪದಲ್ಲಿ ಕಡಿಮೆ.
ರೋಗಿಗೆ ತೀವ್ರ ಅಸ್ತಮಾ ಇದ್ದಾರೆ ನೆಬುಲೈಸರ್ ಎಂಬ ಯಂತ್ರದ ಮುಖಾಂತರ ಔಷಧಿ ದ್ರಾವಣದ ಆವಿ ಕೊಡುವ ಪದ್ಧತಿಇದೆ.
ಶ್ವಾಸನಾಳದ ವಿಕಸಕ ಔಷಧಿಗಳೊಂದಿಗೆ ಅಲರ್ಜಿ ಚಟ ತೆಗೆಯಲು ಸ್ಟೀರಾಯ್ಡ್ ಗಳನ್ನೂ ಕೊಡುತ್ತಾರೆ.ಇವೂ ಮೇಲೆ ಹೇಳಿದ
ವಿವಿಧ ರೂಪಗಲ್ಲಿ ಸಿಗುತ್ತವೆ.ಕೆಲವರು ಸ್ಟೀರಾಯ್ಡ್ ಎಂದರೆ ಬೆಚ್ಚಿ ಬೀ ಳುತ್ತಾರೆ. ಆದರೆ ಯಾವುದೇ ಔಷಧಿ ಹಿತ ಮಿತದಲ್ಲಿ
ಇದ್ದರೆ ತೊಂದರೆ ಇಲ್ಲ. ಆಸ್ತಮಾದ ತೊಂದರೆಗಿಂತ ಚಿಕ್ಕ ಪುಟ್ಟ ಅಡ್ಡ ಪರಿಣಾಮ ಲೇಸು.
Inhaler(ಇನ್ಹೆಲರ್ )
ಸೇದುವ ಮಾತ್ರೆ ಮತ್ತು ಉಪಕರಣ
ನೆಬುಲೈಸರ್
ಔಷಧಿಗೆ ಹೆದರಿ ಅಸ್ತಮಾ ಕಾಯಿಲೆಗೆ ಸರಿ ಚಿಕಿತ್ಸೆ ಮಾಡದಿದ್ದರೆ ಶರೀರದ ಅಂಗಾಂಗ ಗಳಿಗೆ ಆಮ್ಲ ಜನಕ ಸರಿಯಾಗಿಸಿಗದೆ ಮೆದುಳು ಮತ್ತು ಶರೀರದ ಬೆಳವಣಿಗೆ ಕುಂಠಿತ ವಾಗುವುದು.
ಬಾಲಂಗೋಚಿ .
ಅಸ್ತಮಾ ಎಲ್ಲಾ ಶ್ವಾಸ ಕೋಶ ಸಂಬಂದಿ ಅಲ್ಲ .ಕೆಲವು ಹೃದಯ ಕಾಯಿಲೆಯಲ್ಲೂ ಅಸ್ತಮಾ ಬರುವುದು.
ಇನ್ಹಲರ್ ತಿನ್ನುವ ಮಾತ್ರೆಗಿಂತ ಸ್ಟ್ರಾಂಗ್ ಅಲ್ಲ.ಒಮ್ಮೆ ಇನ್ಹೇಲರ್ ಉಪಯೋಗಿಸಿದರೆ ಯಾವಾಗಲೂ ಬೇಕಾಗುತ್ತದೆಯೇಮ್ಬುದು ತಪ್ಪು ಕಲ್ಪನೆ.
ಮೇಲಿನ ಚಿತ್ರಗಳ ಮೂಲಕ್ಕೆ ಅಭಾರಿ.ರೋಟ ಹೇಲರ್ ಚಿತ್ರ ಉದಾಹರಣೆಗೆ ಮಾತ್ರ ,ಪ್ರಚಾರಕ್ಕೆ ಅಲ್ಲ .ಅದರಲ್ಲಿ
ಹೆಸರಿಸಿದ ಕಂಪೆನಿ ಔಷಧಿಯ ಪ್ರಚಾರ ವಲ್ಲ
ಭಾನುವಾರ, ಜುಲೈ 14, 2013
ನಮ್ಮನ್ನು ನಾವೇ ಕೊಲ್ಲುವ ಪರಿ
ಮನುಷ್ಯನಿಗೆ ಸ್ವಯಂ ವಿನಾಶಕಾರಿ ಪ್ರವೃತ್ತಿ ಒಂದಿದೆ ಅನ್ನಿಸುತ್ತದೆ.
ನಮ್ಮ ಆಹಾರವನ್ನೇ ತೆಗೆದು ಕೊಳ್ಳೋಣ .ಆಹಾರ ಧಾನ್ಯ ಗಳಲ್ಲಿ
ಗುಗ್ಗುರು ಆಗ ಬಾರದೆಂದು ಅಲ್ಯೂಮಿನಿಯಂ ಫೋಸ್ಪೈದ್ ಬೇರೆಸುತ್ತೇವೆ.ರಾಸಾಯನಿಕ ವಿಷ ಬೆರೆಸಿದ ತರಕಾರಿಗಳು ನಮಗೆ ಮೆಚ್ಚು.ಉದಾಹರಣೆಗೆ ವಿಶದಲ್ಲಿ ಅದ್ದಿದ ಕಾಲಿಫ್ಲವರ್ ನಲ್ಲಿ ಹುಳ ಇಲ್ಲ ಎಂದು ಸಂಭ್ರಮದಿಂದ ಕೊಂಡು ಅದಕ್ಕೆ ರುಚಿ ಬರಲು ಇನ್ನಸ್ಟು ರಾಸಾಯನಿಕ ಬೆರಸಿ ಮಂಚೂರಿ ಮಾಡಿ ತಿನ್ನುತ್ತೇವೆ. ಹಣ್ಣುಗಳು ವರ್ಣಮಯವಾಗಲು ಕ್ಯಾಲ್ಸಿಯಂ ಕಾರ್ಬೈಡು ಹಾಕುತ್ತೇವೆ.ಉಪ್ಪು ಎಣ್ಣೆ ಕೂಡಿದ ಕುರುಕುಲು ತಿಂಡಿ ಮಕ್ಕಳ ಮೊದಲ ಆಹಾರ.(ರಕ್ತದ ಒತ್ತಡ ,ಹೃದಯ ಕಾಯಿಲೆ ,ಮೂತ್ರದ ಕಲ್ಲುಗಳಿಗೆ ಆಹ್ವಾನ.)ಎಳೆಮಗು ವಿಗೆ ಹೇಳಿ ಮಾಡಿಸಿದ ಮೊಲೆ ಹಾಲಿಗೆ ಬದಲು ಕೃತಕ ಹುಡಿ ಗಳನ್ನು ತಿನ್ನಿಸುತ್ತೇವೆ.
ದೇಹದಲ್ಲಿ ನಿಸರ್ಗ ಕೊಟ್ಟ ರಕ್ಷಣಾ ವ್ಯವಸ್ತೆ ಇದೆ.ಚರ್ಮ ,ಬಾಯಿ ,ಕರುಳುಗಳಲ್ಲಿ ಉಪಯುಕ್ತ ಬ್ಯಾಕ್ಟೀರಿಯಾ ಗಳಿವೆ. ವರ್ಣ ರಂಜಿತ ಜಾಹಿರಾತುಗಳ ಉಪದೇಶದಂತೆ ಸುಕ್ಷ್ಮಾಣುಗಳನ್ನು ನಾಶ ಪಡಿಸುವ ಸಾಬೂನು ಗಳು ,ಲೋಷನ್ ಗಳನನ್ನು ಬಳಸಿ ಇವುಗಳನ್ನು ಕೊಲ್ಲುತ್ತೇವೆ. ಇತ್ತೀಚಿಗೆ ಪಾತ್ರೆ ತೊಳೆಯುವ ಸಾಬೂನು ,ಪುಡಿಗಳಲ್ಲೂ ಇಂತಹ ರಾಸಾಯನಿಕಗಳನ್ನು
ಸೇರಿಸುತ್ತಾರೆ.ಅವುಗಳಲ್ಲಿನ ಆಹಾರ ಸೇವಿದರೆ ಕಾಮ್ಮೆನ್ಸಾಲ್ ಎಂಬ ನಿರುಪದ್ರವಿ ಬ್ಯಾಕ್ಟೀರಿಯಾ ಗಳನ್ನು ನಾಶ ಪಡಿಸುತ್ತವೆ. ಹಲ್ಲು ಉಜ್ಜುವ ಪೇಸ್ಟ್ ನಲ್ಲೂ ಇದೇ ಸಮಸ್ಯೆ.ಇದೆಲ್ಲ ಸಾಲದೆಂದು ಸಾಮಾನ್ಯ ವೈರಲ್ ಕಾಯಿಲೆಗಳಿಗೂ ಆಂಟಿಬಯೋಟಿಕ್ ಬಳಸಿ ಈ ಸಮಸ್ಯೆಯನ್ನು ಇನ್ನಸ್ಟು ಉಲ್ಬಣ ಗೊಳಿಸುವಂತೆ ಮಾಡುತ್ತೇವೆ.ಒಳ್ಳೆಯ ಸೂಕ್ಷ್ಮಾಣುಗಳ ನಾಶ ರೋಗಾಣುಗಳಿಗಳಿಗೆ ದಾರಿ ಮಾಡಿ ಕೊಡುತ್ತದೆ.
ಇನ್ನು ನಮ್ಮ ಜಠರದಲ್ಲಿ ದೇವರು ಆಮ್ಲ ಇಟ್ಟಿದ್ದಾನೆ.ಇದು ಜೀರ್ಣ ಕ್ರಿಯೆಗೆ ಸಹಕಾರಿಯಲ್ಲದೆ ,ರಕ್ತ ಉತ್ಪಾದನೆಗೆ ಬೇಕಾದ
ಬೇಕಾದ ಕಬ್ಬಿಣದ ಜೀರ್ಣಕ್ಕೂ ಆಸಿಡ್ ಅಗತ್ಯ.ರೋಗಾಣುಗಳನ್ನೂ ಕೊಳ್ಳುತ್ತದೆ.ನಾವು ಹೊಟ್ಟೆಯ ಎಲ್ಲಾ ಸಂಕಟ ಗಳಿಗೂ
ಗ್ಯಾಸ್ಟ್ರಿಕ್ ಎಂದು ನೈಸರ್ಗಿಕವಾಗಿ ಇರುವ ರಕ್ಷಣೆಯನ್ನು ಕಳೆದು ಕೊಳ್ಳುತ್ತಿದ್ದೇವೆ.
ಇನ್ನು ತಿನ್ನುವುದು ಹೆಚ್ಚಾಗಿದ್ದು ವ್ಯಾಯಾಮ ಇಲ್ಲದಾಗಿದೆ. ನಡೆಯುವುದು ಅಭಿಮಾನಕ್ಕೆ ಕುಂದು ಎಂಬ ಒಣ ಪ್ರತಿಷ್ಟೇ ಆವರಿಸಿದೆ.
ನಡೆದಾಡುವುದು ಒಂದೇ ಬಹಳ ಮಂದಿಗೆ ಇದ್ದ ವ್ಯಾಯಾಮ. ಶಾಲೆಗೆ ಹೋಗುವ ಮಕ್ಕಳನ್ನು ಎಷ್ಟು ಹತ್ತಿರ ಶಾಲೆ ಇದ್ದರೂ ವಾಹನದಲ್ಲೇ ಕಳುಹಿಸಬೇಕು.ವೈದ್ಯರು ವಕೀಲರು ನಡೆಯುವುದು ಕಂಡರೆ ಅದ್ಬುತ ಕಂಡಂತೆ ಮಾಡುತ್ತಾರೆ.
ವಾಹನ ಗಳ ಜಂಗುಳಿಯಿಂದ ವಾಯು ,ಶಬ್ದ ಮಾಲಿನ್ಯ ಹೆಚ್ಚಾಗಿದೆ.ಇದರ ಬಗ್ಗೆ ಗೊಡವೆ ಇದ್ದಂತಿಲ್ಲ .ಎಳೆಯ ಮಕ್ಕಳಲ್ಲೇ
ದಮ್ಮು ,ರಕ್ತದ ಒತ್ತಡ ಸುರುವಾಗಿದೆ.ಯಾವುದಾದರೂ ಸೋಂಕು ರೋಗ ಧಾಳಿಯಿಟ್ಟಾಗ ಶುಚಿತ್ವ ಅಭಿಯಾನದ ಪ್ರಹಸನ ನಡೆಯುತ್ತದೇ.ಮಿಕ್ಕಂತೆ ಕಂಡಲ್ಲಿ ಉಗುಳುತ್ತೇವೆ,ಕಸ ಹಾಕುತ್ತೇವೆ.ಗಟ್ಟಿಯಾಗಿ ದ್ವನಿ ವರ್ಧಕ ,ಹಾರ್ನ್ ,ಟಿ ವಿ . ಬಳಸಿ ಶಬ್ದ ಮಾಲಿನ್ಯಕ್ಕೆ ನಮ್ಮದೂ ಕೊಡುಗೆ ಇರಲಿ ಎಂದು ಸ್ಪರ್ದಿಸುತ್ತೇವೆ.
ಹೀಗೆ ಇನ್ನೂ ಎಷ್ಟೋ ಇದೆ.ನೀವೇ ಹೇಳಿ ಇದು ಸೆಲ್ಫ್ ಡಿಷ್ಟ್ರಕ್ತಿವ್ (ಸ್ವಯಂ ವಿನಾಶಕಾರಿ )
ಪ್ರವೃತ್ತಿ ಅಲ್ಲದೆ ಇನ್ನೇನು?
ಶನಿವಾರ, ಜುಲೈ 13, 2013
ಮರೆಯಾಗದ ಮಹನೀಯರು -ಎಸ್ ವಿ ಪರಮೇಶ್ವರ ಭಟ್ಟ
ಮಂಗಳೂರಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದಾಗ ಅದರ ನಿರ್ದೇಶಕರಾಗಿ ಬಂದವರು
ಕಾಣದ ಖ್ಯಾತ ಕವಿ ,ಅಧ್ಯಾಪಕ ಎಸ್ ವಿ ಪರಮೇಶ್ವರ ಭಟ್ಟರು .ಏನೂ ಇಲ್ಲದ ಕೊಣಾಜೆ ಬೋಳು ಗುಡ್ಡೆಯಲ್ಲಿ ಸಂಸ್ಥೆಯನ್ನು
ಭಗೀರಥ ಪ್ರಯತ್ನದಿಂದ ಕಟ್ಟಿ ಬೆಳಸಿ ಇಂದಿನ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಿದವರು.ಆಗಿನ್ನೂ ಪೂರ್ಣ ಪ್ರಮಾಣದಲ್ಲಿ
ಕಟ್ಟಡಗಳು ನಿರ್ಮಾಣ ವಾಗದಿದ್ದ ಕಾರಣ ಮಂಗಳೂರು ಪೇಟೆಯಲ್ಲಿ ಕೇಂದ್ರದ ಕಚೇರಿ ಇತ್ತು.ತರಗತಿಗಳು ಕೆ ಎಂ ಸಿ ಇತ್ಯಾದಿ ಕಾಲೇಜ್
ಗಳಲ್ಲಿ ನಡೆಯುತ್ತಿದ್ದವು.ಭಟ್ಟರು ನಡೆದಾಡಿ ಕೊಂಡೇ ಇಲ್ಲೆಲ್ಲಾ ಸಂಚರಿಸುತ್ತಿದ್ದುದನ್ನು ನಾನು ನೋಡಿದ್ದೇನೆ.ಜೊತೆ ಜೊತೆಗೆ ಕೊಣಾಜೆ
ಕ್ಯಾಂಪಸ್ ಅಭಿವೃದ್ಧಿ ಅವಲೋಕನ.ಅವರು ಮಾಡಿದ್ದ ಸೇವೆಯ ಗಹನತೆ ನಾವು ನೆನಪಿಟ್ಟು ಕೊಳ್ಳ ಬೇಕು .
ಇದರ ಜೊತೆಗೆ ಉತ್ತಮ ಭಾಷಣ ಕಾರ ಆಗಿದ್ದ ಅವರಿಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ .ಶಾಲಾ ಕಾಲೇಜ್ ಗಳ ವರ್ಧಂತಿ ಉತ್ಸವ
ಸಾಹಿತ್ಯ ಕೂಟ ,ಯಕ್ಷಗಾನ ಎಲ್ಲಾ ಕಡೆ ಅವರೇ ಬೇಕು .ಇಲ್ಲ ಎನ್ನದೆ ಹೋಗುತ್ತಿದ್ದರು.ಸ್ವತಹ ಜೀವನದಲ್ಲಿ ಬಹಳ ನೋವು
ಅನುಭವಿಸಿದರೂ ತಮ್ಮ ಹಾಸ್ಯ ಚಟಾಕಿಗಳಿಂದ ಎಲ್ಲರನೂ ನಗಿಸಿದರು.
ಅಭಿನವ ಕಾಳಿದಾಸ ಎಂದು ಪ್ರಸಿದ್ದರಾಗಿದ್ದ ಅವರು ಕಾಳಿದಾಸನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಸ್ವಯಂ ಪ್ರಕಟಿಸಿದರು .
ಹಲವು ಕಾವ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ ,ಅವರ ಕವನ ತಿಳಿ ಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಬಹಳ ಜನಪ್ರಿಯ .
ಕುವೆಂಪು ಸಾಹಿತ್ಯದ ಸಮಗ್ರ ಅವಲೋಕನ ಮಾಡುವ ಬೃಹತ್ ಗ್ರಂಥಗಳನ್ನು ರಚನೆ ಮಾಡಿದ್ದಾರೆ.
ರೈತ ಹೋರಾಟ ಗಾರ ಕಡಿದಾಳ್ ಶಾಮಣ್ಣ ತನಗೆ ಕಾಲೇಜ್ ನಲ್ಲಿ ಸೀಟ್ ಕೊಡಿಸಿದ್ದುದು ಎಸ್ ವಿ ಪಿ ಎಂದು ಸ್ಮರಿಸಿದ್ದ್ದಾರೆ
ಅದರಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಶ್ರೀಮಾನ್ ವಿವೇಕ ರೈ ಯಾವಾಗಲೂ ತಮ್ಮ ಗುರುಗಳನ್ನು
ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಶ್ರೀ ಎಹ್ ಕೆ ರಂಗನಾಥ್ ಮತ್ತು ಅವರ ತಮ್ಮ ಖ್ಯಾತ ಬರಹಗಾರ ವೈದ್ಯ ಡಾ ಎಚ್ ಕೆ ನಜುಂಡ ಸ್ವಾಮಿ ಅವರ ಪತ್ನಿಯ
ಸಹೋದರರು .ತಮ್ಮ ಸಾಹಿತ್ಯ ಸೇವೆಗೆ ಭಾವನವರ ಸ್ಪೂರ್ತಿ ನೆನೆಯುತ್ತಾರೆ,
ಎಸ್ ವಿ ಪಿ ಮತ್ತು ಏರ್ಯ ಲಕ್ಷ್ಮಿನಾರಾಯಣ ಆಳ್ವ ರ ಮುಂದಾಳತ್ವದಲ್ಲಿ ಅದ್ದೂರಿಯಾಗಿ ಮತ್ತು ಅಚ್ಚು ಕಟ್ಟಾಗಿ ನಡೆದ ಪಂಜೆ ಮಂಗೇಶ
ರಾಯರ ಶತಮಾನೋತ್ಸವ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ ಎಂಬಂತೆ ಮಂಗಳೂರಿನಲ್ಲಿ ನಡೆದುದನ್ನು ಸಾಹಿತ್ಯ ಪ್ರಿಯರು
ಇನ್ನೂ ನೆನಪಿಸಿ ಕೊಳ್ಳುತ್ತಾರೆ.
ಪ್ರೊ. ಎಸ್ ವಿ ಪರಮೇಶ್ವರ ಭಟ್ಟರ ಶತಮಾನೋತ್ಸವ ಕಾರ್ಯಕ್ರಮ ವನ್ನು ಅವರ ಶಿಷ್ಯರು ಮತ್ತು ಸಾಹಿತ್ಯಾಸಕ್ತರು ಮತ್ತು
ಅಭಿಮಾನಿಗಳು ಸೇರಿ ಈ ವರ್ಷ ನೆರವೇರಿಸಲು ಹಮ್ಮಿಕೊದಿದ್ದಾರೆ. ಇದಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ರೂ
ಒಂದು ಸಾವಿರಕ್ಕ್ಕೆ ಕಮ್ಮಿಯಿಲ್ಲದಂತೆ ಕರ್ನಾಟಕ ಬ್ಯಾಂಕ್ ಖಾತೆ 4762500102483101 ಕ್ಕೆ ವರ್ಗಾಯಿಸಿ
ಡಾ ನರಸಿಂಹ ಮೂರ್ತಿ ,ಕಾರ್ಯದರ್ಶಿ ಪ್ರೊಫ್ ಎಸ್ ವಿ ಪರಮೇಶ್ವರ ಭಟ್ಟ ಜನ್ಮ ಶತಮಾನೋತ್ಸವ ಸಮಿತಿ ,ಮಾಣಿಕ್ಯ ,ಗಾಂಧಿನಗರ
ಕಾವೂರು ಅಂಚೆ .ಮಂಗಳೂರು ೫೭೫೦೧೫ ಕ್ಕೆ ತಿಳಿಸ ಬಹುದು .ಹೆಚ್ಚಿನ ಮಾಹಿತಿಗೆ ದೂ 9448191249, 9449283283
ಸಂಪರ್ಕಿಸ ಬಹುದು.
ಪಲ್ಮನರಿ ಎಂಬೋಲಿಸಂ ಎಂಬ ಮಾರಣಾಂತಿಕ ಕಾಯಿಲೆ.
ಮತ್ತು ಆಮ್ಲಜನಕ ಸರಬರಾಜು ಮಾಡಿದರೆ ,ಅಭಿಧಮನಿಗಳ ಮೂಲಕ ಅಶುದ್ದ ರಕ್ತ ಹೃದಯಕ್ಕೆ ಬಂದು ಅಲ್ಲಿಂದ
ಶುದ್ದೀಕರಣಕ್ಕಾಗಿ ಶ್ವಾಸಕೋಶಕ್ಕೆ ರವಾನೆ ಆಗುವುದು.ಇದು ನಿರಂತರ ಕ್ರಿಯೆ.ಅದೇ ರೀತಿ ರಕ್ತನಾಳಗಳಿಗೆ ಗಾಯವಾದರೆ
ಕೂಡಲೇ ರಕ್ತ ಹೆಪ್ಪು ಗಟ್ಟಿ ರಕ್ತ ಸೋರುವಿಕೆ ನಿಲ್ಲ ಬೇಕು .ಈ ಹೆಪ್ಪು ಗಟ್ಟಲು ಬೇಕಾದ ಕಚ್ಚಾ ವಸ್ತುಗಳು ರಕ್ತದಲ್ಲಿಯೇ
ಅಡಕವಾಗಿವೆ.ಚಲನೆ ಮತ್ತು ಹೆಪ್ಪುಗಟ್ಟುವ ಕ್ರಿಯೆಯ ಸಮತೋಲನ ಆರೋಗ್ಯಕ್ಕೆ ಅತೀ ಆವಶ್ಯ.
ಕೆಲವು ಸಂದರ್ಭಗಳಲ್ಲಿ ಕಾಲಿನ ಮೀನ ಖಂಡದ ಅಭಿಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದು.ಉದಾ;ರೋಗದಿಂದ ಕಾಲಿನ
ಚಲನೆಯಿಲ್ಲದೆ ಮಲಗಿರುವವರು ( ಮೂಳೆ ಮುರಿತ,ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದವರು ,),ಹೆಪ್ಪು ಗಟ್ಟುವಿಕೆಯ ಅಂಶ
ಹೆಚ್ಹು ಇರುವ ಗರ್ಬಿಣಿ ಸ್ತ್ರೀಯರು,ಗರ್ಭ ನಿರೋಧಕ ಗುಳಿಗೆ ಸೇವಿಸುವವರು,ಕೆಲವು ಕ್ಯಾನ್ಸರ್ ಕಾಯಿಲೆಯಿಂದ ಬಳಲುವವರು
.
ಇಂತಹವರಲ್ಲಿ ಹೆಪ್ಪುಗಟ್ಟಿದ ರಕ್ತ ದ ಗಟ್ಟಿ ಅಬಿಧಮನಿಗಳ ಮೂಲಕ ಹೃದಯವನ್ನು ಹಾಯ್ದು ಶ್ವಾಶ ಕೋಶದ ಅಪಧಮನಿ
ಪ್ರವೇಶಿಸಿ ಶ್ವಾಸ ಕೋಶಕ್ಕೆ ರಕ್ತ ಸಂಚಾರ ವ್ಯತ್ಯಯ ಮಾಡುವುದು.ಇದನ್ನೇ ಪಲ್ಮನರಿ ಎಂಬೋಲಿಸಂ ಎಂದು ವೈದ್ಯಕೀಯ
ಭಾಷೆಯಲ್ಲಿ ಕರೆಯುತ್ತಾರೆ.ಇಲ್ಲಿ ರಕ್ತದ ಗಟ್ಟಿ ಸಾಕಷ್ಟು ದೊಡ್ಡದಿದ್ದರೆ ಶ್ವಾಸ ಕೋಶದ ರಕ್ತ ಸರಬರಾಜು ಸಂಪೂರ್ಣ ನಿಂತು
ಸೆಕೆಂಡುಗಳಲ್ಲಿ ರೋಗಿ ಸಾವನ್ನಪ್ಪುವನು.
ರೋಗ ಲಕ್ಷಣಗಳು
ಕಾಲಿನ ರಕ್ತ ನಾಳಗಳಲ್ಲಿ ರಕ್ತ ಹೆಪ್ಪು ಗಟ್ಟಿದರೆ ಕಾಲು ಊದಿ ಕೊಂಡು ನೋವು ಇರಬಹುದು.ಅಥವಾ ಯಾವುದೇ ಲಕ್ಷಣ
ಇಲ್ಲದೇ ಇರಬಹುದು. ಸಂಶಯ ಬಂದಾಗ ಡಾಪ್ಲರ್ ಪರೀಕ್ಷೆಯೆಂಬ
ಸ್ಕ್ಯಾನ್ ಮಾಡಿ ಪತ್ತೆ ಹಚ್ಚ ಬಹುದು.
ಶ್ವಾಸ ಕೋಶದ ರಕ್ತ ನಾಳ ಬ್ಲಾಕ್ ಆದರೆ ಏಕಾ ಏಕಿ ದಮ್ಮು ಕಟ್ಟುವುದು.ಆಮ್ಲ ಜನಕ ಕಮ್ಮಿಯಾಗಿ ಶರೀರ ನೀಲ ವರ್ಣಕ್ಕೆ
ತಿರುಗಿ ರೋಗಿ ಸಾವನ್ನೂ ಅಪ್ಪ ಬಹುದು .ಆದುದರಿಂದ ಮೇಲೆ ಹೇಳಿದ ವ್ಯಕ್ತಿಗಳಲ್ಲಿ ಯಾವುದೇ ಕಾರಣವಿಲ್ಲದೆ,(ಅಂದರೆ
ಮೊದಲೇ ಅಸ್ಥಮಾ ,ಹೃದಯ ಕಾಯಿಲೆ ಇಲ್ಲದಿದ್ದರೆ ) ದಮ್ಮು ಕಟ್ಟಲು ಶುರುವಾದರೆ ಪಲ್ಮನರಿ ಎಂಬೋಲಿಸಂ ಇರಬಹುದೆಂದು
ಸಂಶಯಿಸ ಬೇಕು. ರೋಗ ಪರೀಕ್ಷಣೆಗೆ ಸಮಯ ಕೊಟ್ಟರೆ ರಕ್ತ ಪರೀಕ್ಷೆ ,ಸಿ ಟಿ ಸ್ಕ್ಯಾನ್ ,ಎಂ ಅರ ಐ ಸ್ಕ್ಯಾನ್ ಮೂಲಕ
ರೋಗ ಖಚಿತ ಪಡಿಸಿ ಕೊಳ್ಳ ಬಹುದು .
ಚಿಕಿತ್ಸೆ.
ರೋಗವು ಚಿಕಿತ್ಸೆಗೆ ಸಮಯ ಕೊಟ್ಟರೆ ಕೂಡಲೇ ತುರ್ತು ಚಿಕಿತ್ಸಾ ಕೊಡದಿಯಲ್ಲಿ ಅಮ್ಲನಕ ಕೊಟ್ಟು, ಹೆಪ್ಪು ಕರಗಿಸುವ ಔಷಧಿ
ಆರಂಬಿಸುವರು.
ದೀರ್ಘ ಕಾಲ ಚಲನೆಯಿಲ್ಲದೆ ಇರುವ ರೋಗಿಗಳಿಗೆ ಹೆಪಾರಿನ್ ಎಂಬ ಹೆಪ್ಪು ಪ್ರತಿ ಬಂಧಕ ಔಷಧಿ ಕೊಡುವರು.ಇದರಿಂದ
ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಿ ಪಲ್ಮನರಿ ಎಂಬೋಲಿಸಂ ಬರದಂತೆ ನೋಡಿಕೊಳ್ಳ ಬಹುದು.
ಗಮನಿಸಿ
ಕೆಲವೊಮ್ಮೆ ಗರ್ಬಿಣಿ ಸ್ತ್ರೀ ಗಳಲ್ಲಿ(ಮತ್ತು ಹೆಪ್ಪುಗಟ್ಟುವ ಆತಂಕವಿರುವ ಇತರರಲ್ಲಿ) ಈ ರೋಗ ಪ್ರಕಟವಾಗಿ
ನೋಡುವುದರೊಳಗೆ ಸಾವನ್ನಪ್ಪ ಬಹುದು .ಆಗ ಅದಕ್ಕಿಂತ ಸ್ವಲ್ಪ ಮೊದಲು ಕೊಟ್ಟ ಇಂಜೆಕ್ಷನ್ ,ಅಥವಾ ಇನ್ನಾವುದೋ
ಮಾಮೂಲಿ ಔಷಧಗಳೋ ಇದಕ್ಕೆ ಕಾರಣ ಎಂದು ರೋಗಿಗಳ ಬಂಧುಗಳು ತಿಳಿಯುವುದುಂಟು.
ಶುಕ್ರವಾರ, ಜುಲೈ 12, 2013
ನನ್ನ ಅಜ್ಜ ಮತ್ತು ಪುತ್ತೂರು ಪೇಟೆ
ಹಿಂದೆ ಹಳ್ಳಿಯಲ್ಲಿ ಆಢ್ಯ ವ್ಯಕ್ತಿಗಳು ನಗರಕ್ಕೆ ಆಗಾಗ ಭೇಟಿ ಕೊಡಲು ಒಂದೋ ಎರಡನೇ ಸಂಭಂಧ ,ಇಲ್ಲವಾದರೆ ಕೋರ್ಟ್ ಕೇಸ್
ಇಟ್ಟುಕೊಳ್ಳುತ್ತಿದ್ದರು.ಕೆಲವರಿಗೆ ಎರಡೂ ಇತ್ತು.ಆಗಿನ ಸನ್ನಿವೇಶದಲ್ಲಿ ಎರಡೂ ಅಸ್ಟು ವಿಚಿತ್ರವೆನಿಸುತತ್ರಲಿಲ್ಲ.
ನನ್ನ ಅಜ್ಜನೂ ಎರಡನೇ ವ್ಯಸನ ಇದ್ದವರು.ಕೋರ್ಟ್ ಕೇಸ್ ಗೆ ಇಲ್ಲದ ನೀರಿನ ಮೂಲವೋ ,ಬೇಡದ ನಿರುಪದ್ರವಿ ಮರದ ಮೇಲಿನ ಹಕ್ಕು
ಸಾಧನೆಯೋ ಸಾಕಾಗುತ್ತಿತ್ತು.ನಮ್ಮ ಗದ್ದೆಗೆ ತಾಗಿ ಒಂದು ನೀರಿನ ಮೂಲ ಇತ್ತು.ಅದು ನಮ್ಮದೆಂದು ಅಜ್ಜನೂ ,ಅವರದೆಂದು ಪಕ್ಕದ
ಮನೆಯವರದೂ ವಾದ .ಸರಿ ,ಪುತ್ತೂರು ಕೋರ್ಟ್ ಹತ್ತಿತು ವಿವಾದ.ಕೇಸ್ ನ ಹಿಯರಿಂಗ್ ಗೆ ಅಜ್ಜ ಹೋಗಿ ಬಂದು ರಾತ್ರಿ ಸ್ನಾನದ
ಮನೆಯಲ್ಲಿ ಅಲ್ಲಿಯ ಕತೆಗಳನ್ನು ರೋಚಕವಾಗಿ ಹೇಳುವರು.ನಾವು ಬಿಸಿ ನೀರ ಒಲೆಯ ಬಳಿ ಮೈ ಕಾಯಿಸುತ್ತಾ ಕಣ್ಣು ಬಾಯಿ ಬಿಟ್ಟು
ಕೇಳುತ್ತಿದ್ದೆವು.ಸದಾಶಿವ ರಾಯರು ಹಾಕಿದ ಪೈಂಟಿಗೆ(point) ಜಡ್ಜರು ತೆರೆದ ಬಾಯಿ ಮುಚ್ಚಲೇ ಇಲ್ಲ ಎನ್ನುವರು.ಅವರ ಲೀಗಲ್
ವೊಕ್ಯಾಬುಲರಿ ಯಲ್ಲಿ ಹೆರಿಂಗ್ ,ಕೈಪೇತು(ಕೇವಿಯಟ್),ಕ್ರಾಸ್ (ಕ್ರಾಸ್ ಎಕ್ಷ್ಜಾಮಿನೇಶನ್),ಡಿಕ್ರೀ,ಇಂಜಕ್ಶನ್ ಇಂತಾದ ಶಬ್ದಗಳು
ಮೇಲಿಂದ ಮೇಲೆ ಬರುತ್ತಿದ್ದವು.ವಕೀಲರ ಮನೆಗೆ ಹೋಗುವಾಗ ಫೀಸಿನ ಜತೆ ಬಾಳೆಗೊನೆ ,ಮನೆಯಲ್ಲಿ ಬೆಳೆದ ತರಕಾರಿ
ಕೊಂದೊಯ್ಯುವುದೂ ಇತ್ತು.ವಕೀಲ ಕಕ್ಷಿ ಸಂಬಂಧದಲ್ಲಿ ಒಂದು ಆತ್ಮೀಯತೆ ಇತ್ತು.
ವಕೀಲ ಸದಾಶಿವ ರಾಯರ ಮನೆ ದಾರಿಯಲ್ಲಿ ಕುಂಬ್ಳೆಕಾರ್ಸ್ ಎಂಬ ಬಟ್ಟೆ ಅಂಗಡಿ ಇತ್ತು. ಅದರ ಎದುರಿಂದ ಹಾಯುವಾಗ
ಅಂಗಡಿ ಧಣಿಗಳು ‘ಭಟ್ರೇ ಒಳ್ಳೆಯ ಕೋಮಣ ಬಟ್ಟೆ ಬಂದಿದೆ ಕೊಂಡು ಹೋಗುವಿರೋ ಎಂದು ಈಗಿನ ಮೊಬೈಲ್ ಅಂಗಡಿಯವರು
ಹೊಸ ಮಾಡೆಲ್ ಬಂದಿದೆ ಎಂದು ಗಿರಾಕಿಗಳನ್ನು ಸೆಳೆಯುವಂತೆ ಕೇಳುತ್ತಿದ್ದರು. ಕೌಪೀನ ಹಳ್ಳಿಯ ಅಧಿಕೃತ ಉಡುಪು ಆಗಿದ್ದ ಕಾಲ.
ಕೆಲವೊಮ್ಮೆ ಅಜ್ಜನ ಜೊತೆ ನಾವೂ ಪುತ್ತೂರಿಗೆ ಬರುವುದಿತ್ತು.ಬಸ್ ಸ್ಟಾಂಡ್ ನ ಎದುರು ಜನತಾ ಫುಟ್ ವೇರ್ ಅಂದಡಿಯಿತ್ತು .ಈಗಲೂ
ಇದೆ .ಅಲ್ಲಿ ಅಬ್ದುಲ್ ಖಾದರ್ ಎಂಬ ಸಜ್ಜನ ಇದ್ದರು.ಮಕ್ಕಳನ್ನು ಸುಮ್ಮನೆ ನಡೆಸುವುದು ಬೇಡ ಎಂದು ನಮ್ಮನ್ನು ಈ ಅಂಗಡಿಯಲ್ಲಿ
ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೋದವರು ಗಂಟೆ ಯಾದರೂ ಬರುತ್ತಿರಲಿಲ್ಲ .ನಮಗೋ ಪೇಟೆಯವರನ್ನು ಕಂಡರೆ ಭಯ.
ಆಗ ಇಂತಹ ಅಂಗಡಿಗಳು ಹಳ್ಳಿಯವರ ಕ್ಲಾಕ್ ರೂಂ ಗಳೂ ಆಗಿರುತ್ತಿದ್ದವು.ಅಂಗಡಿಯವರು ಅಲ್ಲಿ ಇಟ್ಟ ಸಾಮಗ್ರಿಗಳನ್ನು ಯಾವುದೇ
ಫೀ ಇಲ್ಲದೆ ಜೋಪಾನ ವಾಗಿ ಇಡುತ್ತಿದ್ದರು.ಈ ಜನಾಬ್ ಅಬ್ದುಲ್ ಖಾದರ್ ಬಗ್ಗೆ ಒಂದು ಮಾತು ಹೇಳಬೇಕು .ನಾವು ರಜೆಯಲ್ಲಿ
ನೆಂಟರ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿ ಬೇಕೆನಿಸಿದರೆ ಸೀದಾ ಅವರ ಅಂಗಡಿಗೆ ಹೋಗಿ ಇಂತಹ ಚಪ್ಪಲಿ ಬೇಕೆಂದು ಆಯ್ದು
ಕಾಲಿಗೆ ಹಾಕಿ ಕೊಂಡು ಹೋಗುವುದೇ.ಹಣ ತಂದೆ ಕೊಡುತ್ತಾರೆ ಎಂದು ಹೇಳುತ್ತಿದ್ದೆವು .ನಿಮ್ಮ ತಂದೆ ಯಾರು ,ಯಾವಾಗ ಕೊಡುತ್ತಾರೆ
ಎಂದು ಅವರು ಕೇಳಿದವರಲ್ಲ.ಅದೇ ರೀತಿ ಬಸ್ ಸ್ಟಾಂಡ್ ನಲ್ಲಿ ಕಿತ್ತಳೆ ಮಾರುವ ಮಹನೀಯರಿದ್ದರು.ಹಳ್ಳಿಯವರಿಗೆ ಅವರವರಿಗೆ ಬೇಕಾದ
ಬಸ್ ತೋರಿಸುವರು.ಅವರ ಸಮಾಜ ಸೇವೆ ಸ್ಮರಿಸುವಂತಹುದು.
ನನ್ನ ಅಜ್ಜ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಬೆತ್ತ ಹಿಡಿದು ಪುತ್ತೂರು ಪೇಟೆಯಿಡೀ ನಡೆದೇ ಹೋಗುತ್ತಿದ್ದರು.ಬಹಳ ದಿನ ಕೋರ್ಟ್
ಕೇಸ್ ಇಲ್ಲದಿದ್ದರೆ ಇಲ್ಲದ ಕಾಯಿಲೆಯನ್ನು ಊಹಿಸಿ ಕೊಂಡು ಕೋರ್ಟ್ ರಸ್ತೆಯ ಪ್ರಸಿದ್ದ್ದ ವೈದ್ಯ ಸುಂದರ ರಾಯರ ಬಳಿಗೆ ಸವಾರಿ ಇಡುತ್ತಿದ್ದರು.
. ಡಾಕ್ಟರ್ ಅಲ್ಲಿ ಮುಟ್ಟಿ ನೋಡಿದರು ,ಇಲ್ಲಿ ಕುಟ್ಟಿ ನೋಡಿದರು ಎಂದು ವರ್ಣಮಯವಾಗಿ ವಿವರಿಸುತ್ತಿದ್ದರು.ಸುಂದರ ರಾಯರು
ಕೊಟ್ಟ ಟಾನಿಕ್ ಶ್ರದ್ದೆಯಿಂದ ಕುಡಿಯುತ್ತಿದ್ದರು.
ಮೊಮ್ಮಕ್ಕಳನ್ನು ಹೋಟೆಲ್ ಗೆ ಕರೆದೊಯ್ದು ಇವರಿಗೆ ಬೇಕಾದ್ದೆಲ್ಲ ಕೊಡಿ ಎಂದು ಅದೇಶಿಸುತ್ತಿದರು.
ಬಾಲಂಗೋಚಿ.:
ವಕೀಲ ಸದಾಶಿವ ರಾಯರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.ಅವರು ನಡೆದೇ
ಹೋಗುತ್ತಿದ್ದರು .ಅವರ ನಂತರದ ತಲೆಮಾರಿನ ಬೋಳಂತ ಕೋಡಿ ಈಶ್ವರ ಭಟ್ಟರೂ ಕನ್ನಡ ಸಂಘದ ಕಾರ್ಯ ಕೋರ್ಟ್ ಆಫೀಸ್
ಪತ್ರಿಕೋದ್ಯಮ ಕೆಲಸ ಎಂದು ನಡೆದು ಕೊಂಡೆ ಓಡಾಡಿದವರು .ಶಿವರಾಮ ಕಾರಂತರು ಪರ್ಲಡ್ಕ ಮನೆಯಿಂದ ಪೇಟೆಗೆ ನಡೆದು
ಬಂದು ಹೋಗುತ್ತಿದ್ದರು.ಈಗ ನಮಗೆ ನಡೆಯುವುದಕ್ಕೆ ಅಭಿಮಾನ ಬಿಡುವುದಿಲ್ಲ.ಒಂದು ವೇಳೆ ಬಿಟ್ಟರೆ ರಸ್ತೆಯಲ್ಲಿ ಪಾದಚಾರಿಗಳಿಗೆ
ನಡೆಯಲು ಫುಟ್ ಪಾತ್ ಇಲ್ಲ ನಾನು ಈಗ ಎಲ್ಲಿಯಾದರೂ ಪೇಟೆಯಲ್ಲಿ ನಡೆಯುವುದು ಕಂಡ ಪರಿಚಿತರು ಡಾಕ್ಟರ್ ಕಾರ್
ತರಲಿಲ್ಲವೆ ಎಂದು ಕೇಳುತ್ತಾರೆ ,ಕೆಲವರು ಏನು ನಡೆಯುವುದು ,ಪ್ರಾಕ್ಟೀಸ್ ಸರಿಯಾಗಿ ನಡೆಯುತ್ತ ಇಲ್ಲವೇ ಎಂದು ಪ್ರಶಿಸುತ್ತಾರೆ.
ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು.ನಮ್ಮ ಮತ್ತು ಅಜ್ಜನ ಸಂಭಾಷಣೆಯಂತೆ.
ಈ ಚೌಕ ಬಟ್ಟೆ ಬಹುಪಯೋಗಿ .ಉಟ್ಟರೆ ಕೌಪೀನ ವಾದೆ ,ಕರದಲ್ಲಿ ಕರವಸ್ತ್ರ ವಾದೆ ,ತಲೆಗಿಟ್ಟರೆ ಟೋಪಿಯದೆ ,ಅಡಿಗೆ ಮನೆಯಲ್ಲಿ ಚಹಾ ,ಕಾಯಿ ಹಾಲು ಸೋಸು ವ ಅರಿಪ್ಪೆಯಾದೆ .ನೀ ನಾರಿ ಗಾದೆಯೋ ಎಲೆ ಮನವಾ -ಇದನ್ನು ನೀನು ಅರಿಗಾದೆಯೋ ,ನೀ ನಾರಿ(ಹೆಣ್ಣು )ಗಾದೆಯೋ ಎಂದು ಅವರವರ ಭಾವಕ್ಕೆ ಸರಿಯಾಗಿ ವಿಮರ್ಶೆ ಮಾಡುವರು. ಕೌಪೀನ ಮತ್ತು ಮೇಲೆ ಒಂದು ತುಂಡು ಬಟ್ಟೆ ಕೃಷಿಕರಿಗೆ ಬಹಳ ಅನುಕೂಲ .ಅದೇ ನಮ್ಮ ಕಾಲದ ವಿ ಐ ಪಿ ,ಜೋಕಿ .ಅದನ್ನು ಉಟ್ಟು ಕೊಂಡು ನಾವು ಕ್ರಿಕೆಟ್ ,ಕಬಡ್ಡಿ ಆಡಿದ್ದೇವೆ .
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ
ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ
ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ
ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ
ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ
ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ
ಡೆಂಗು (ಡೆಂಗೆ) ಜ್ವರ
ಇತ್ತೀಚಿಗೆ ಸುದ್ದಿಯಲ್ಲಿ ಇರುವ ವ್ಯಾಧಿ. ಇದು ವೈರಸ್ ನಿಂದ ಬರುವ ಕಾಯಿಲೆ .ರೋಗ ಪೀಡಿತ
ವ್ಯಕ್ತಿಯ ರಕ್ತ ಹೀರಿದ ಈಡಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಕಾಯಿಲೆ.
ಸೊಳ್ಳೆ ಕಡಿದು ನಾಲ್ಕರಿಂದ ಏಳು ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತವೆ.
ರೋಗ ಲಕ್ಷಣಗಳು
ಜ್ವರ ,ತಲೆ ನೋವು ,ಮೈಕೈ ನೋವು ,ಸಂಧಿ ನೋವು ,ಹೊಟ್ಟೆ ನೋವು ,ವಾಂತಿ ಮುಖ್ಯ
ಲಕ್ಷಣಗಳು.ಎಲುಬೇ ಒಡೆದು ಹೋಗುವಷ್ಟು ನೋವು ಇರುತ್ತಾದ್ದರಿಂದ ಬ್ರೇಕ್ ಬೋನ್ ಫೀವರ್
ಎಂದೂ ಈ ರೋಗವನ್ನು ಕರೆಯುವುದುಂಟು.ಕೆಲವರಿಗೆ ಮೈಮೇಲೆ ಕೆಂಪು ಬೀಳ ಬಹುದು.ಅದು
ತುರಿಕೆ ಉಂಟು ಮಾಡಲೂ ಬಹುದು.ತೀವ್ರ ತರ ರೋಗ ದಲ್ಲಿ ರಕ್ತ ಸ್ರಾವ ,ರಕ್ತದ ಒತ್ತಡ ಕುಸಿತ
ಉಂಟಾಗ ಬಹುದು.
ಡೆಂಗು ವಿನಲ್ಲಿ ಬಿದ್ದ ಕೆಂಪು
ಪರೀಕ್ಷಣಗಳು
ರಕ್ತದಲ್ಲಿ ಬಿಳಿ ಕಣಗಳು ,ಪ್ಲೇಟಿಲೆಟ್ ಕಣಗಳು ಕಮ್ಮಿಯಾಗಿರುತ್ತವೆ. ಡೆಂಗು ರೋಗದ ಕಾರ್ಡ್
ಟೆಸ್ಟ್ ಸಾಮಾನ್ಯವಾಗಿ ಎಲ್ಲೆಡೆ ಲಭ್ಯವಿರುತ್ತದೆ. ಇದು ರೋಗ ಲಕ್ಷಣ ಗಳನ್ನು ಗಮನಕ್ಕೆ
ತೆಗೆದುಕೊಂಡು ನಿರ್ದರಿಸಿದರೆ ವಿಶ್ವಾಸಾರ್ಹ .ಇದರಲ್ಲಿ NS1 ಆಂಟಿಜನ್ ರೋಗ ಲಕ್ಷಣಗಳು
ಕಂಡೊಡನೆ ಪೋಸಿಟಿವ್ ಆಗಿರುವುದು. IgM ಆಂಟಿಬಾಡಿ ನಂತರ ಬರುವುದು.ಕೊನೆಗೆ
ದಿನಗಳ ನಂತರ IgM ಆಂಟಿಬಾಡಿ ಕಂಡು ಬಂದು ರೋಗ ಗುಣವಾದ ಮೇಲೂ ವರ್ಷಗಳ
ತನಕ ರಕ್ತದಲ್ಲಿ ಇರುವುದು.ಆದುದರಿಂದ IgG ಮಾತ್ರ ಪೊಸಿಟಿವ್ ಇದ್ದರೆ ಅದನ್ನು ಈಗಿನ
ಕಾಯಿಲೆಯ ಅಧಾರ ಆಗಿ ಪರಿಗಣಿಸುವುದು ಕಷ್ಟ.ಇದೇ ಅಂಶಗಳನ್ನು ಎಲಿಸಾ ಎಂಬ
ಪರೀಕ್ಷೆಯಲ್ಲಿ ಮಾಡುತ್ತಾರೆ ,ಇದು ಹೆಚ್ಚು ವಿಶ್ವಾಸಾರ್ಹ .ಈ ಪರೀಕ್ಷನವನ್ನೇ ಸರಕಾರವೂ
ಅಂಕಿ ಅಂಶಗಳಿಗೆ ಪರಿಗಣಿಸುತ್ತದೆ.
ರೋಗದ ಉಪಚಾರ
ಇದು ವೈರಸ್ ನಿಂದ ಉಂಟಾಗುವ ಕಾಯಿಲೆ .ಹೆಚ್ಚಿನವರಲ್ಲಿ ತನ್ನಿಂದ ತಾನೇ ಗುಣವಾಗುವುದು.
ಜ್ವರ ಮೈಕೈ ನೋವಿಗೆ ಪ್ಯಾರಸಿಟಮಾಲ್ ಮಾತ್ರೆ ಕೊಡುತ್ತಾರೆ. ದೈಕ್ಲೊಫೆನಕ್,ಇಬುಫ್ರೋಫೇನ್
ನಂತಹ ಔಷಧಿಗಳು ಪ್ಲಾಟಿಲೆಟ್ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ
ಅವುಗಳನ್ನು ದೂರವಿಡಬೇಕು.ಅತಿ ವಾಂತಿ ಇದ್ದರೆ ಡ್ರಿಪ್ ಮೂಲಕ ಆಹಾರ ಕೊಡುವರು.
ಆಂಟಿಬಯೋಟಿಕ್ ಗಳು ಪರಿಣಾಮ ಕಾರಿ ಅಲ್ಲ.ಚರ್ಮದಲ್ಲಿ ತೀವ್ರ ತುರಿಕೆ ಇದ್ದರೆ ಶಮನಕ್ಕೆ
ಮಾತ್ರೆ ಕೊಡುವರು.ರಕ್ತ ಸ್ರಾವ ಇದ್ದರೆ ಮತ್ತು ಪ್ಲಾಟಿ ಲೆಟ್ ಬಹಳ ಕಡಿಮೆ ಆದರೆ –(ಎಂದರೆ
ಘನ ಮಿಲಿ ಲೀ ಯಲ್ಲಿ ೧೦೦೦೦ ಕ್ಕಿಂತ ಕಡಿಮೆ- ) ಪ್ಲಾಟಿ ಲೆಟ್ ಕೊಡಬೇಕಾಗ ಬಹುದು.
ವಿಶ್ವ ಆರೋಗ್ಯ ಸಂಘ ದ ಮಾರ್ಗ ಸೂಚಿಯಂತೆ ರಕ್ತ ಸ್ರಾವ ಮುಂತಡೆಯಲು ಪ್ಲಾಟಿ ಲೆಟ್
ಕೊಡುವ ಅವಶ್ಯವಿಲ್ಲ .
ಪ್ಲಾಟಿಲೆಟ್ ಗಳ ಬಗ್ಗೆ ನನ್ನ ಬ್ಲಾಗ್ “ಪ್ಲಾಟಿಲೆಟ್ ಗಳೆಂಬ ರಕ್ತ ಸ್ಥಂಭಕ “ ಓದಿರಿ.
ಕೆಲವೊಮ್ಮೆ ಡೆಂಗು ಜ್ವರದಲ್ಲಿ ರಕ್ತ ನಾಳ ಗಳಿಂದ ನೀರು ಸೋರಿ ಹೊಟ್ಟೆ ,ಎದೆಗಳಲ್ಲಿ
ತು೦ಬುವುದಲ್ಲದೆ ರಕ್ತ ದೊತ್ತದ ಕುಸಿದು ರೋಗಿ ಅಪಾಯ ಕ್ಕೊಳಗಾಗುವನು .ಇಂತಹವರನ್ನು
ತೀವ್ರ ನಿಗಾ ದ ಲ್ಲಿ ಇಟ್ಟು ಉಪಚರಿಸುವರು.ಆದರೆ ಇಂತಹ ಸಂಭವ ಬಹು ಕಡಿಮೆ.
ಡೆಂಗು ಜ್ವರ ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ .ಒಮ್ಮೆ ಡೆಂಗು ಬಂದರೆ ಆ
ಜಾತಿಯ ಡೆಂಗು ಪುನಃ ಬರುವುದು ಕಮ್ಮಿ.ಆದರೆ ವೈರಾಣುಗಳು ಆಗಾಗ್ಗೆ ವೇಷ
ಬದಲಿಸುತ್ತಿರುವುದರಿಂದ ಇನ್ನೊಮ್ಮೆ ಬರದು ಎನ್ನಲಾಗದು.ಪಥ್ಯ ದ ಅಗತ್ಯ ಇಲ್ಲ.
ರೋಗ ಬರದಂತೆ ಚುಚ್ಚು ಮದ್ದು ಇಲ್ಲ. ಸೊಳ್ಳೆ ಕಚ್ಚದಂತೆ ನೋಡಿ ಕೊಳ್ಳಬೇಕು.
ಈಡಿಸ್ ಸೊಳ್ಳೆಯ ಬಗ್ಗೆ ನನ್ನ ಬ್ಲಾಗ್ ಓದಿರಿ.